ಜಾನುವಾರುಗಳ ಮೇಯಿಸಲು ಹೋಗಿದ್ದ ವೇಳೆ ಹಳ್ಳಕ್ಕೆ ಸ್ನಾನಕ್ಕಿಳಿದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಹಿರೇಹಳ್ಳ ಎಂಬಲ್ಲಿ ನಡೆದಿದೆ.
ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದ ಶ್ರೇಯಣ್ಣ (8) ಹಾಗೂ ಯುವರಾಜ (9) ಮೃತ ಬಾಲಕರು ಎಂದು ಗುರುತಿಸಲಾಗಿದೆ.
ಭಾನುವಾರ ರಜೆ ಇದ್ದ ಕಾರಣ ಇಬ್ಬರೂ ಮಧ್ಯಾಹ್ನ ಹಳ್ಳದಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಹಳ್ಳದ ದಂಡೆಯಲ್ಲಿ ಬಾಲಕರ ಬಟ್ಟೆಗಳು ಇರುವುದು ಕಂಡು ಕುಟುಂಬಸ್ಥರು ಹುಡುಕಾಟವನ್ನು ನಡೆಸಿ ನಂತರ ಪೊಲೀಸರಿಗೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಡಿವೈಎಸ್ಪಿ ಜಾವಿದ್ ಇನಾಂದಾರ್, ಪೊಲೀಸ್ ಇನ್ ಸ್ಪೆಕ್ಟರ್ ಆನಂದ ವಾಗಮೋಡೆ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶವ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಸೋಮವಾರ ಬೆಳಗ್ಗೆ ಇಬ್ಬರು ಬಾಲಕರ ಮೃತದೇಹಗಳು ಹಳ್ಳದಲ್ಲಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.