ಭ್ರೂಣ ಪತ್ತೆ ಮತ್ತು ಹತ್ಯೆಯ ರೂವಾರಿ ಡಾ. ದಾಕ್ಷಾಯಿಣಿ ಅವರನ್ನು ಮತ್ತೆ ಕನಕಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ನಿಯೋಜನೆ ಮಾಡಿರುವುದು ಕುರಿ ಕಾವಲಿಗೆ ತೋಳ ನಿಯೋಜಿಸಿದಂತೆ ಎಂದು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಕೆಲವು ತಿಂಗಳ ಹಿಂದೆ ಕೆಲವೆಡೆ ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಕನಕಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯಲ್ಲಿ ಸ್ತ್ರೀ ರೋಗ ಹಾಗೂ ಹೆರಿಗೆ ತಜ್ಞೆ ಕೆಲಸ ಮಾಡುತ್ತಿದ್ದ ಡಾ. ದಾಕ್ಷಾಯಿಣಿ ಪಿಸಿಪಿಎನ್‌ಡಿಟಿ ಕಾಯ್ದೆ ಉಲ್ಲಂಘಿಸಿ ಭ್ರೂಣ ಪತ್ತೆ ಯಂತ್ರವನ್ನು ಸ್ಥಳಾಂತರಿಸಿ ನೂರಾರು ಭ್ರೂಣಗಳ ಪತ್ತೆ ಮಾಡಿ ಅಬಾರ್ಷನ್ ಮಾಡಿಸುತ್ತಿದ್ದ ಅಮಾನವೀಯ ಪ್ರಕರಣವನ್ನು ಪ್ರಗತಿಪರ ಸಂಘಟನೆಗಳು ಸಾಕ್ಷಿ ಸಮೇತ ಬಯಲಿಗೆಳೆದಿತ್ತು.
ಮೇಲ್ನೋಟಕ್ಕೆ ಆರೋಪ ಸಾಬೀತಾದ ಪರಿಣಾಮ ಅವರನ್ನು ಶಿಕ್ಷೆಯ ಭಾಗವಾಗಿ ಚಿಕ್ಕಬಳ್ಳಾಪುರದ ಭಟ್ಟರಹಳ್ಳಿ ಎಂಬಲ್ಲಿಗೆ ವರ್ಗ ಮಾಡಲಾಗಿತ್ತು. ಆದರೆ ಅಲ್ಲಿಗೆ ಹೋಗದೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಆದರೆ ಮತ್ತೆ ಅವರ ಪ್ರಭಾವಕ್ಕೆ ಮಣಿದು ಇಲಾಖೆಯು ಅವರನ್ನು ಮರಳಿ ಅದೇ ಸ್ಥಳಕ್ಕೆ ನಿಯೋಜನೆ ಮಾಡಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಭ್ರೂಣ ಪತ್ತೆಯ ಯಂತ್ರದ ದಾಖಲೆಗಳನ್ನು ಕೋರ್ಟ್‌ನ ಮುಂದಿರಿಸಬೇಕಾದ ಆರೋಗ್ಯ ಇಲಾಖೆ ದಾಕ್ಷಾಯಣಿ ಬಗ್ಗೆ ಮೃದು ಧೋರಣೆ ತಳೆದಿರುವುದು ಕಂಡು ಬಂದಿದೆ. ಈಗಾಗಲೇ ಆ ಯಂತ್ರದಲ್ಲಿನ MTP (ಅಬಾರ್ಷನ್)ದಾಖಲೆಗಳನ್ನು ಪಡೆದು ಪ್ರಗತಿಪರ ಸಂಘಟನೆಗಳ ಪರವಾಗಿ ನಾನೇ ನ್ಯಾಯಾಲಯದಲ್ಲಿ ದಾಖಲೆ ಮಂಡಿಸಲು ಅನುಮತಿ ಕೋರಿ ವಕೀಲರ ಮೂಲಕ ಅರ್ಜಿ ಸಲ್ಲಿಸಲಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೂ ಪತ್ರ ಬರೆಯಲಿದ್ದು, ಸಾಕ್ಷಿ ನಾಶದ ಸಂಭವ ಇರುವ ಕಾರಣ ತಕ್ಷಣವೇ ಅವರನ್ನು ವರ್ಗಾವಣೆ ಮಾಡಲು ಆಗ್ರಹಿಸಲಿದ್ದೇನೆ ಎಂದರು.
ನೂರಾರು ಭ್ರೂಣಗಳ ಕಣ್ಣು ಬಿಡುವ ಮೊದಲೇ ಕೊಂದವರಿಗೆ ಖಂಡಿತ ಶಿಕ್ಷೆಯಾಗಲಿದೆ. ನಮಗೆ ನ್ಯಾಯಲಯದ ಮೇಲೆ ಅಪರಿಮಿತ ವಿಶ್ವಾಸವಿದೆ ಎಂದು ಹೇಳಿದರು.
ರಾಜ್ಯ ರೈತ ಸಂಘದ ಸಂಚಾಲಕರಾದ ಚೀಲೂರು ಮುನಿರಾಜು ಮಾತನಾಡಿ, ಡಾ. ದಾಕ್ಷಾಯಣಿ ಪ್ರಾಮಾಣಿಕತೆಯ ಸಚ್ಚಾರಿತ್ರ್ಯವನ್ನು ಒಳಗೊಂಡ ವೈದ್ಯೆಯಲ್ಲ. ಈ ಹಿಂದೆ ಬಡವರೊಬ್ಬರಿಗೆ ಹೆರಿಗೆ ಮಾಡಿಸಲು 5000 ರೂ ಲಂಚ ಕೇಳಿದ ಪ್ರಕರಣವನ್ನು ಆಡಿಯೋ ದಾಖಲೆಯೊಂದಿಗೆ ಮುಂದಿರಿಸಿ ಹೋರಾಟ ಮಾಡಲಾಗಿತ್ತು ಎಂದರು.
ಇದನ್ನು ಓದಿದ್ದೀರಾ? ಮಂಡ್ಯ | ಒಂದು ಟ್ವೀಟ್‌ನಿಂದ ಏನಾಗುತ್ತದೆ ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ!
ಲಂಚ ಕೊಡದವರ ಬಗ್ಗೆ ನಿರ್ಲಕ್ಷ್ಯವಾಗಿ ವರ್ತಿಸುವ ಹಲವಾರು ಆರೋಪ ಅವರ ಮೇಲಿವೆ. ಆದ್ದರಿಂದ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿ ವೈದ್ಯೋ ನಾರಾಯಣ ಹರಿ ಎಂಬ ಜನರ ನಂಬಿಕೆಗೆ ಅನುಗುಣವಾಗಿ ಸೇವೆ ಸಲ್ಲಿಸುವ ವೈದ್ಯರನ್ನು ನಿಯೋಜನೆ ಮಾಡಬೇಕು ಎಂದು ರಾಜ್ಯ ರೈತ ಸಂಘ ಆಗ್ರಹಿಸುತ್ತದೆ ಎಂದರು.
ಪತ್ರಿಕಾಗೋಷ್ಡಿಯಲ್ಲಿ ನಗರಸಭೆ ಸದಸ್ಯರಾದ ಸ್ಟುಡಿಯೋ ಚಂದ್ರು, ನೇಗಿಲಯೋಗಿ ಸಂಘಟನೆಯ ಕಾಡೇಗೌಡ, ಜೀವನ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಹೊಸದುರ್ಗ, ವೈಭವ ಕರ್ನಾಟಕ ಜಿಲ್ಲಾಧ್ಯಕ್ಷ ಪುಟ್ಟಲಿಂಗಯ್ಯ, ರೇಷ್ಮೆ ಉತ್ಪದಾಕರ ಸಂಘದ ಅಧ್ಯಕ್ಷ ರಾಮಕೃಷ್ಣ, ಕನ್ನಡ ಭಾಸ್ಕರ್, ಜಯಕರ್ನಾಟಕ ಜನಪರ ವೇದಿಕೆ ಗಿರೀಶ್, ಆರ್‌ಟಿಐ ಕಾರ್ಯಕರ್ತ ಕಿಶೋರ್, ರೈತ ಸಂಘದ ಕನಕಪುರ ತಾಲೂಕು ಅಧ್ಯಕ್ಷ ಕುಮಾರ್, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಬಸವರಾಜು, ಮುಖಂಡರಾದ ಮುನಿಶಿವಣ್ಣ, ರವಿ, ಸಿದ್ದರಾಜು, ರವಿಕುಮಾರ್, ಕೆಂಪಣ್ಣ ಉಪಸ್ಥಿತರಿದ್ದರು.