ಈ ದಿನ ಸಂಪಾದಕೀಯ | ಮೋದಿ ಭಾರತದ ಮನಸ್ಥಿತಿ ಮತ್ತು ಮನೆಸ್ಥಿತಿ

Date:

Advertisements
ಭಾರತೀಯರು ಬುದ್ಧಿವಂತರು, ಕೆಲಸಗಾರರು. ಹೊರದೇಶಗಳಿಗೆ ಹೋಗಿ ಸಾಧಕರೆನಿಸಿಕೊಂಡರೆ, ಅಭಿಮಾನ ತೋರುವುದು ತಪ್ಪಲ್ಲ. ಆದರೆ, ಇಂಗ್ಲೆಂಡ್-ಅಮೆರಿಕ ನಮ್ಮ ಕೈಯಲ್ಲಿಯೇ ಇದೆ ಎಂಬಂತೆ ಭ್ರಮಿಸುವುದು ತಪ್ಪು. ಏಕೆಂದರೆ, ಮೋದಿ ಕೈಗೆ ದೇಶ ಕೊಟ್ಟು 11 ವರ್ಷಗಳಾಯಿತು. ಇವತ್ತು ದೇಶ ಯಾವ ಸ್ಥಿತಿಗೆ ತಲುಪಿದೆ ಎನ್ನುವುದು ಎಲ್ಲರಿಗೂ ಗೊತ್ತು. ಗೊತ್ತಿರುವುದರ ಬಗ್ಗೆ ಮಾತನಾಡೋಣ...

‘ಭಾರತೀಯರಾದ ನಾವು ಅಮೆರಿಕ, ಯೂರೋಪ್ ದೇಶಗಳಿಗೆ ಹೋಗಲು ಇಷ್ಟಪಡುತ್ತೇವೆ. ಏಕೆಂದರೆ ಅಲ್ಲಿ ಕೈ ತುಂಬಾ ಸಂಬಳ ಮತ್ತು ನೆಮ್ಮದಿಯ ಬದುಕು ಸಿಗುತ್ತದೆ. ಅಲ್ಲಿನ ಸ್ವಚ್ಛತೆಯನ್ನು ಕೊಂಡಾಡುತ್ತೇವೆ. ಆ ನೆಲದ ಕಾನೂನನ್ನು ಗೌರವಿಸುತ್ತೇವೆ. ಶಿಸ್ತಿನಿಂದ ಪಾಲಿಸುತ್ತೇವೆ. ಹಾಗೆಯೇ ಕತಾರ್, ದುಬೈ, ಸೌದಿಗೆ ಹೋಗುವ ನಾವು ಹಣ ಮತ್ತು ಸುರಕ್ಷತೆಯ ಬಗ್ಗೆ ಬಾಯ್ತುಂಬ ಹೊಗಳುತ್ತೇವೆ. ಆದರೆ, ಭಾರತ ದೇಶದಲ್ಲಿ ನಾವು ಬೆಂಬಲಿಸುವುದು ಬುಲ್ಡೋಜರ್ ಮತ್ತು ಎನ್‌ಕೌಂಟರ್‍‌ಗಳನ್ನು’ ಎಂದು ಇತ್ತೀಚೆಗೆ ‘ದಿ ವೈರ್’ ಜೊತೆಗೆ ಮಾತನಾಡಿದ ದೆಹಲಿಯ ವಕೀಲ ಸರೀಮ್ ನಾವೆದ್ ಹೇಳಿದ್ದಾರೆ.

ಇದು ಮೋದಿ ಭಾರತದ ಮನಸ್ಥಿತಿ ಮತ್ತು ಮನೆಸ್ಥಿತಿಯನ್ನು ಸ್ಪಷ್ಟವಾಗಿ ತೋರುವ ಮಾತು. ಈ ಮನಸ್ಥಿತಿ ಮೊದಲೂ ಇತ್ತು. ಈಗ, ಅದರಲ್ಲೂ 2014ರ ನಂತರ, ಅತಿ ಎನಿಸುವಷ್ಟಾಗಿದೆ. ನಾವು ಎಷ್ಟು ಅಮಾನವೀಯರಾಗಿದ್ದೇವೆಂದರೆ, ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಬಳಸಿ ಮುಸ್ಲಿಮರ ಮನೆಗಳನ್ನು ಕೆಡವಿದ್ದನ್ನು ಕಂಡು ಸಂಭ್ರಮಿಸುತ್ತೇವೆ. ಮಣಿಪುರದಲ್ಲಿ ಹೆಣ್ಣುಮಗಳು ಬೆತ್ತಲೆಯಾಗಿ ಓಡಿದ್ದನ್ನು ಕಂಡು, ನಮ್ಮಲ್ಲಲ್ಲ, ಅವರು ನಮ್ಮವರಲ್ಲ ಎಂದು ಭಾವಿಸುತ್ತೇವೆ. ಪ್ರಭುತ್ವದ ವಿರುದ್ಧ ಸೆಟೆದು ನಿಲ್ಲುವುದು ಪ್ರಜಾಪ್ರಭುತ್ವದ ಮೂಲ ಮಂತ್ರವಾದರೂ; ಮೋದಿ ಆಡಳಿತವನ್ನು ಟೀಕಿಸಿದವರನ್ನು ವರ್ಷಗಟ್ಟಲೆ ಜೈಲಿನಲ್ಲಿರಿಸಿ, ಜಾಮೀನು ನಿರಾಕರಿಸಿದರೂ, ಉಸಿರೆತ್ತದೆ ಉಸಿರಾಡಿಕೊಂಡೇ ಬದುಕುತ್ತೇವೆ. ಲಂಚ, ಕಮಿಷನ್ ಪಡೆಯುವುದನ್ನು ಬಾಂಡ್ ಎಂದರೆ, ಬಾಂಡ್ ಮೂಲಕ ಹಣ ಸಂಗ್ರಹಿಸುವವನನ್ನು ಜೇಮ್ಸ್ ಬಾಂಡ್ ರೀತಿ ನೋಡುತ್ತೇವೆ. ಸಂವಿಧಾನಕ್ಕೆ ಹಣೆಹಚ್ಚಿ ನಮಸ್ಕರಿಸಿ, ಸಂವಿಧಾನವನ್ನು ಬದಲಿಸುವವರನ್ನು ಬದಲಾವಣೆಯ ಹರಿಕಾರನೆಂದು ಭ್ರಮಿಸುತ್ತೇವೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಣಿಪುರ – ಭಾರತವನ್ನು ದೇಶವಾಗಿ ಉಳಿಸಿಕೊಳ್ಳಲು ಶಾಂತಿ, ಸೋದರತೆ ಅಗತ್ಯವೆಂದು ಪ್ರಧಾನಿ ಅರಿತಿರುವರೇ?

Advertisements

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾಕ್ಕೆ ಭೇಟಿ ಕೊಟ್ಟರೆ, ನೋಡಲು, ಕೈ ಕುಲುಕಲು, ಶೆಲ್ಫಿ ಕ್ಲಿಕ್ಕಿಸಿಕೊಳ್ಳಲು ಗಂಟೆಗಟ್ಟಲೆ ಕಾಯುತ್ತಾರೆ. ಅಮೆರಿಕ ಮೂಲದವರಲ್ಲ, ಇಲ್ಲಿಂದ ಹೋಗಿ ಅಲ್ಲಿ ನೆಲೆಸಿದ ಭಾರತೀಯರು. ಹಾಗೆಯೇ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಚುನಾವಣೆಗೆ ಸ್ಪರ್ಧಿಸಿ ಗೆದ್ದರೆ, ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಿದರೆ- ಇಲ್ಲಿಯವರು ಸಂಭ್ರಮಿಸುತ್ತಾರೆ. ಭಾರತೀಯ ಮೂಲದ ವ್ಯಕ್ತಿಯಾದರೆ, ಅದರಲ್ಲೂ ಅವರ ಹೆಸರಿನಲ್ಲಿ ಹಿಂದೂ ಇದ್ದರೆ- ಪ್ರತಿಷ್ಠೆ ಹಾಗೂ ಹೆಮ್ಮೆಯ ವಿಷಯವಾಗಿ ವಿಜೃಂಭಿಸಿ ಬರೆಯುತ್ತಾರೆ.

ರಿಷಿ ಸುನಕ್ ಎಂಬ ವ್ಯಕ್ತಿ ಇಂಗ್ಲೆಂಡ್ ಪ್ರಧಾನಿಯಾದಾಗ, ‘ಬ್ರಿಟಿಷರು ಭಾರತವನ್ನು 200 ವರ್ಷಗಳ ಕಾಲ ಆಳಿದರು. ಈಗ ನೋಡಿ, ನಾವು ಅವರನ್ನೇ ಆಳ್ತಿದೀವಿ’ ಎಂದು ಬೀಗಿದ್ದರು. ಅಸಲಿಗೆ ರಿಷಿ ಅಲ್ಲಿಯೇ ಹುಟ್ಟಿ ಬೆಳೆದವರು. ಆದರೆ ಆತ ಮದುವೆಯಾಗಿರುವುದು ಇನ್‌ಫೋಸಿಸ್ ನಾರಾಯಣಮೂರ್ತಿ – ಸುಧಾಮೂರ್ತಿಯವರ ಮಗಳು ಅಕ್ಷತಾರನ್ನು. ಅಲ್ಲಿ ಬ್ರಾಹ್ಮಣ, ಭಾರತೀಯ ಇರುವುದರಿಂದ, ಅಕ್ಷತಾ ಗಂಡ ಸುನಕ್ ಆಗಿರುವುದರಿಂದ, ಸುನಕ್ ಕೈಯಲ್ಲಿ ಇಂಗ್ಲೆಂಡ್ ಇರುವುದರಿಂದ- ಅದು ನಾವೇ ಎಂದು ಭ್ರಮಿಸುತ್ತಾರೆ. ಬ್ರಿಟಿಷರನ್ನು ಆಳುತ್ತಿದ್ದೇನೆ ಎಂದು ಅಹಂ ತೋರುತ್ತಾರೆ.

ಅದು ಭ್ರಮೆ ಎನ್ನುವುದು, ಕೆಲವೇ ತಿಂಗಳುಗಳಲ್ಲಿ ತಿಳಿದುಹೋಯಿತು. ರಿಷಿ ಸುನಕ್ ಪ್ರಧಾನಿಯಾದರೂ, ಇಂಗ್ಲೆಂಡಿನ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಾಗಲಿಲ್ಲ. ಒಂದು ಸಣ್ಣ ಬದಲಾವಣೆಯನ್ನೂ ತರಲಾಗಲಿಲ್ಲ. ಕೊನೆಗೆ ಅಸಮರ್ಥ ನಾಯಕ ಎನಿಸಿಕೊಂಡು, ಅಧಿಕಾರದಿಂದ ನಿರ್ಗಮಿಸಿದರು.   

ಇತ್ತೀಚಿಗೆ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದರು. ಗೆದ್ದಿದ್ದು ಟ್ರಂಪ್, ಸಂಭ್ರಮಿಸುತ್ತಿರುವವರು ಭಾರತೀಯರು. ಏಕೆಂದರೆ, ಟ್ರಂಪ್ ಜೊತೆಗೆ ಮೋದಿಯವರ ಸ್ನೇಹ ಚೆನ್ನಾಗಿದೆ. ಅಲ್ಲಿ ವಾಸವಿರುವ ಭಾರತೀಯರು ಎಂಥಾ ಸೋಗಲಾಡಿಗಳೆಂದರೆ, ವಲಸಿಗರನ್ನು ಕಳ್ಳರಿಗಿಂತ ಕಡೆಯಾಗಿ ಕಂಡು, ಹೊರಗೆ ಕಳಿಸುತ್ತೇನೆ ಎಂದ ಟ್ರಂಪ್ ಪರ ನಿಂತರು. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿದರು.  

ಈಗ ಇದೇ ಟ್ರಂಪ್, ಸಂಸದೆ ತುಳಸಿ ಗಬ್ಬಾರ್ಡ್‌ ರನ್ನು ರಾಷ್ಟ್ರೀಯ ಗುಪ್ತಚರ ವಿಭಾಗದ ಮುಖ್ಯಸ್ಥೆಯನ್ನಾಗಿ ನೇಮಿಸಿದ್ದಾರೆ. ಈಕೆಯ ಹೆಸರಲ್ಲಿ ‘ತುಳಸಿ’ ಎಂದಿರುವುದು ಭಾರತೀಯರ ಸಂಭ್ರಮಕ್ಕೆ ಕಾರಣವಾಗಿದೆ. ಅಮೆರಿಕದ ಗುಪ್ತಚರ ಇಲಾಖೆಯೇ ಹಿಂದೂ ಹೆಂಗಸಿನ ಕೈಯಲ್ಲಿದೆ, ಹಿಂದೂ ಧರ್ಮಕ್ಕೆ ಟ್ರಂಪ್ ಮಣೆ ಎಂಬಂತೆ ಸುದ್ದಿ ಮಾಧ್ಯಮಗಳು ಅತಿರಂಜಿತವಾಗಿ ವರ್ಣಿಸುತ್ತಿವೆ.

ಅಸಲಿಗೆ ಆಕೆ, ಭಾರತೀಯಳಲ್ಲ, ಹಿಂದೂ ಅಂತೂ ಅಲ್ಲವೇ ಅಲ್ಲ. ಆಕೆಯ ತಂದೆ-ತಾಯಿ ಅಮೆರಿಕಾ ಮೂಲದವರು. ಅಲ್ಲಿಯೇ ಹುಟ್ಟಿ ಬೆಳೆದ ತುಳಸಿಯ ತಾಯಿಗೆ ಇಸ್ಕಾನ್ ಒಲವಿರುವ ಕಾರಣಕ್ಕೆ ಮಕ್ಕಳಿಗೆ ಹಿಂದೂ ಹೆಸರಿಟ್ಟಿದ್ದಾರೆ. ಹಿಂದೂ ಸಂಸ್ಕೃತಿಯ ಬಗ್ಗೆ ತಿಳಿಸಿದ್ದಾರೆ. ತುಳಸಿ ಕೂಡ ಹಿಂದೂಗಳ ಪರ ವಕಾಲತ್ತು ವಹಿಸಿ ಮಾತನಾಡಿದ್ದಾರೆ. ಇಷ್ಟು ಬಿಟ್ಟರೆ, ಭಾರತಕ್ಕೂ, ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿಯ ಧ್ವಂಸ ಸಂಸ್ಕೃತಿಗೆ ಸುಪ್ರೀಂ ಸುತ್ತಿಗೆ ಏಟು      

ದೂರದ ಬೆಟ್ಟ ನುಣ್ಣಗೆ ಎಂಬ ಮಾತಿದೆ. ಮೋದಿ ಭಾರತವನ್ನು ನೋಡಿಯೇ ನಮ್ಮ ಹಿರಿಯರು ಆಡಿದ ಮಾತಿದು. ಇಂತಹವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ, ಅದಕ್ಕೆ ತಕ್ಕನಾಗಿ ಪುಂಗಿ ಊದುವ ಮಾಧ್ಯಮಗಳು, ಭಾರತೀಯ-ಹಿಂದೂ ಎಂದಾಕ್ಷಣ ವಿಶೇಷ ಪದಪುಂಜಗಳನ್ನು ಹೆಕ್ಕಿ ತೆಗೆದು, ಐತಿಹ್ಯ-ಪುರಾಣವನ್ನು ಆರೋಪಿಸಿ, ವೈಭವೀಕರಿಸಿ ಬರೆಯುವುದು ಅತಿಯಾಗುತ್ತಿದೆ. ಅದನ್ನು ಓದಿ, ಹಂಚಿ, ಭ್ರಮೆಯಲ್ಲಿ ತೇಲಾಡುವುದು ಮೋದಿ ಭಾರತದ ಮನಸ್ಥಿತಿಯಾಗಿದೆ.  

ಭಾರತೀಯರು ಬುದ್ಧಿವಂತರು, ಕೆಲಸಗಾರರು. ಹೊರದೇಶಗಳಿಗೆ ಹೋಗಿ ಸಾಧಕರೆನಿಸಿಕೊಂಡರೆ, ಅಭಿಮಾನ ತೋರುವುದು ತಪ್ಪಲ್ಲ. ಆದರೆ, ಇಂಗ್ಲೆಂಡ್-ಅಮೆರಿಕ ನಮ್ಮ ಕೈಯಲ್ಲಿಯೇ ಇದೆ ಎಂಬಂತೆ ಭ್ರಮಿಸುವುದು ತಪ್ಪು. ಏಕೆಂದರೆ, ಮೋದಿ ಕೈಗೆ ದೇಶ ಕೊಟ್ಟು 11 ವರ್ಷಗಳಾಯಿತು. ಇವತ್ತು ದೇಶ ಯಾವ ಸ್ಥಿತಿಗೆ ತಲುಪಿದೆ ಎನ್ನುವುದು ಎಲ್ಲರಿಗೂ ಗೊತ್ತು. ಗೊತ್ತಿರುವ ವಿಷಯ ಬಿಟ್ಟು, ಗೊತ್ತಿಲ್ಲದರ ಬಗ್ಗೆ ಬಣ್ಣಕಟ್ಟಿ ಮಾತಾಡುವುದು ಮೂರ್ಖತನದ ಪರಮಾವಧಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

3 COMMENTS

  1. ಸರಿ ಸಂಪಾದಕರು ಹೇಳಿದ್ದು ಸರಿ, ಆದರೆ ಸಂಪಾದಕರು ಯಾರು, ಭಾರತೀಯ ಹೌದೋ ಅಲ್ಲವೋ ಅದು ತಿಳಿಸಿ

  2. ಲೋ ತಿಕ್ ಉರ್ಕ ಸಂಪಾದಕ. ನೀನ್ ಯಾರು ಎಂದು ಮೊದಲು ಹೇಳು. ನೀನು ಹಿಂದೂ ಹಾಗು ಬ್ರಾಹ್ಮಣ ವಿರೋಧಿಯೇ ಇರ್ಬೇಕು . ರಸ್ತೆ ಪಕ್ಕದಲ್ಲಿ ನಿಂತ್ಕಂಡು ಮಾತಾಡ್ಡಕು ಲಾಯಕ್ಕಿಲ್ಲದ ನಿನ್ನಂತ ವರಿಗೆ ಬರಿಯಕ್ಕೆ ಜಾಗ ಕೊಟ್ರೆ ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ
    ಸುಮ್ನೇ ರೀಲ್ಸ್ ನೋಡ್ಕೊಂಡು ಇರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X