ನವೆಂಬರ್ 20ರಂದು ಬುಧವಾರ ಮಹಾರಾಷ್ಟ್ರ ವಿಧಾನಸಭೆಗೆ ಮತದಾನ ನಡೆಯಲಿದೆ. ಅದಕ್ಕೂ ಒಂದು ದಿನ ಮುಂಚೆ (ಮಂಗಳವಾರ) ಮತದಾರರನ್ನು ಪಕ್ಷದತ್ತ ಸೆಳೆಯಲು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ಮತದಾರರಿಗೆ ಹಣ ಹಂಚಿದ್ದಾರೆ ಎಂದು ಬಹುಜನ ವಿಕಾಸ್ ಅಘಾಡಿ (ಬಿವಿಎ) ಆರೋಪಿಸಿದೆ. ಮತದಾರರಿಗೆ ಹಣ ಹಂಚುವಾಗ ವಿನೋದ್ ಅವರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಬಿವಿಎ ಕಾರ್ಯಕರ್ತರು ಆರೋಪಿಸಿದ್ದಾರೆ. ಆದರೆ, ವಿನೋದ್ ಆರೋಪವನ್ನು ನಿರಾಕರಿಸಿದ್ದಾರೆ. ಹಣ ಹಂಚಿಕೆಯ ವಿಡಿಯೋ ವೈರಲ್ ಆಗಿದೆ.
“ವಸಾಯಿ-ವಿರಾರ್ ಕ್ಷೇತ್ರದಲ್ಲಿ ತಾವ್ಡೆ ಹಣ ಹಂಚಿದ್ದಾರೆ. ತಾವ್ಡೆ ಅವರ ಬಳಿಯಿದ್ದ ಬ್ಯಾಗ್‌ನಲ್ಲಿ 15 ಕೋಟಿ ರೂಪಾಯಿ ಹಣವನ್ನು ಮತದಾರರಿಗೆ ವಿತರಿಸಿರುವ ಡೈರಿ ಇತ್ತು. ಅವರು ಕ್ಷೇತ್ರಕ್ಕೆ 5 ಕೋಟಿ ರೂಪಾಯಿ ನಗದು ಜೊತೆ ಬಂದಿದ್ದಾರೆ” ಎಂದು ಬಿವಿಎ ಶಾಸಕ ಹಿತೇಂದ್ರ ಠಾಕೂರ್ ಆರೋಪಿಸಿದ್ದಾರೆ.
ಸೋಮವಾರ ಸಂಜೆ, ಅವರನ್ನು ಬಿವಿಎ ಕಾರ್ಯಕರ್ತರು ತಡೆದು, ಘೇರಾವ್ ಹಾಕಿದ್ದಾರೆ. ಡೈರಿಯನ್ನು ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ್ದಾರೆ. ಆದರೆ, ನಲಸೋಪಾರದ ಹಾಲಿ ಶಾಸಕ ಕ್ಷಿತಿಜ್ ಠಾಕೂರ್ ಅವರು ಡೈರಿಯನ್ನು ಕಿತ್ತುಕೊಂಡಿದ್ದಾರೆ. ಇದೆಲ್ಲವೂ ಹೋಟೆಲ್‌ನಲ್ಲಿ ನಡೆದಿದೆ. ಆದರೆ, ಹೋಟೆಲ್ ತನ್ನ ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲವೆಂದು ಹೇಳಿಕೊಂಡಿದೆ. ಹಣ ವಿತರಣೆಯ ಫೂಟೆಜ್‌ಗಳನ್ನು ಮುಚ್ಚಿಹಾಕಲು ಇಂತಹ ಹೇಳಿಕೆ ನೀಡಿದೆ. ಹೋಟೆಲ್ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಬಿವಿಎ ಒತ್ತಾಯಿಸಿದೆ.
BIGGEST SHAME 🚨🚨
— Ankit Mayank (@mr_mayank) November 19, 2024
Senior BJP leader Vinod Tawde caught red handed distributing money in Mumbai
He was caught with ₹5 crore hard cash, Huge rigging by BJP ⚡
Tomorrow is polling day, but will ECI dare to take any action? pic.twitter.com/XvY5W3P3vl
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ ಬಣ) ಅಧ್ಯಕ್ಷ ಉದ್ಧವ್ ಠಾಕ್ರೆ, ”ನಾನು ತುಳಜಾ ಭವಾನಿ ದೇವಿಯ ದರ್ಶನಕ್ಕಾಗಿ ವಸಾಯಿ-ವಿರಾರ್‌ಗೆ ಬಂದಿದ್ದೆ. ಆಗ ನನ್ನ ಬ್ಯಾಗ್‌ಗಳನ್ನು ಪರಿಶೀಲಿಸಲಾಯಿತು. ಆದರೆ, ಅವುಗಳಲ್ಲಿ ಏನೂ ಸಿಗಲಿಲ್ಲ. ವಿನೋದ್ ತಾವ್ಡೆ ಅವರ ಬ್ಯಾಗ್‌ಗಳಲ್ಲಿ ನಗದು ಪತ್ತೆಯಾಗಿರುವುದು ಮಾಧ್ಯಮಗಳಿಂದ ತಿಳಿದುಬಂದಿದೆ. ಇದನ್ನೆಲ್ಲ ಯಾರು ಪರಿಶೀಲಿಸಬೇಕಿತ್ತು? ಹಾಗಾಗಿ ಈ ಭ್ರಷ್ಟ ಸರ್ಕಾರ ಬೇಗ ತೊಲಗಬೇಕೆಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ” ಎಂದು ಹೇಳಿದ್ದಾರೆ.
ಆರೋಪಗಳನ್ನು ತಳ್ಳಿಹಾಕಿದ ಬಿಜೆಪಿ, “ಇದು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಆರೋಪ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ವಿನೋದ್ ತಾವ್ಡೆ ವಾರ್ಡ್ ಮಟ್ಟದಲ್ಲಿ ಹಣ ಹಂಚುತ್ತಾರೆಯೇ? ಇಂತಹ ಆರೋಪಗಳು ಅಸಂಬದ್ಧವಾಗಿವೆ” ಎಂದು ಹೇಳಿದೆ.
ಬಿಜೆಪಿ ನಾಯಕ ಅತುಲ್ ಭಟ್ಕಳ್ಕರ್, “ಸನ್ನಿಹಿತ ಸೋಲನ್ನು ಎದುರಿಸುತ್ತಿರುವ ವಿರೋಧ ಪಕ್ಷಗಳು ಸೃಷ್ಟಿಸಿದ ಸುಳ್ಳು ಆರೋಪಗಳು ಇವು. ಇಂತಹ ಆರೋಪಗಳು ಬಿಜೆಪಿಯ ಪ್ರತಿಷ್ಠೆಯನ್ನು ಕೆಡಿಸುವ ಉದ್ದೇಶಪೂರ್ವಕ ಪ್ರಯತ್ನದ ಭಾಗವಾಗಿವೆ” ಎಂದಿದ್ದಾರೆ.