ಮಾನಸಿಕವಾಗಿ ನೊಂದಿದ್ದರು ಎನ್ನಲಾದ ತಾಯಿ ಮತ್ತು ಮಗಳು ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಕುಟುಂಬದ ಯಜಮಾನನ ಸಾವಿನಿಂದ ಮಾನಸಿಕವಾಗಿ ನೊಂದಿದ್ದರು ಎನ್ನಲಾದ ತಾಯಿ ಮಗಳಿಬ್ಬರು ನೇಣಿಗೆ ಶರಣಾದ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಚಿಕ್ಕಂದವಾಡಿ ಗ್ರಾಮದಲ್ಲಿ ನಡೆದಿದ್ದು, ತಾಯಿ ಪುಷ್ಪ ಮತ್ತು ಮಗಳು ಲಾವಣ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ. ಮಗಳು ಲಾವಣ್ಯ ಪ್ರಥಮ ಪಿಯುಸಿ ಓದುತ್ತಿದ್ದಳು ಎಂದು ತಿಳಿದು ಬಂದಿದೆ.
ಸ್ಥಳೀಯರ ಮಾಹಿತಿಯ ಪ್ರಕಾರ, ಕುಟುಂಬದ ಬಸವರಾಜಪ್ಪ ಸುಮಾರು ಆರು ತಿಂಗಳ ಹಿಂದೆ ಹೃದಯಾಘಾತದಿಂದ ದಿಢೀರನೆ ಮೃತಪಟ್ಟಿದ್ದರು. ಬಸವರಾಜಪ್ಪ ನಿಧನದಿಂದ ಆಘಾತಗೊಂಡಿದ್ದ ತಾಯಿ ಮಗಳು ಸಾಮಾಜಿಕವಾಗಿ, ಸ್ನೇಹ ಸಲಿಗೆಯಿಂದ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಅಕ್ಕ ಪಕ್ಕದವರೊಂದಿಗೆ ಬೆರೆಯುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಒತ್ತಡ ತಾಳಲಾರದೆ ಹೀಗೆ ಮಾಡಿಕೊಂಡಿರಬಹುದು ಎಂದು ಮಾಹಿತಿ ನೀಡಿದ್ದಾರೆ.
ಚಿಕ್ಕಜಾಜೂರು ಪೊಲೀಸ್ ಠಾಣೆ ಉಪನಿರೀಕ್ಷಕರಾದ ನೇತ್ರಾವತಿ ಮಾಹಿತಿ ನೀಡಿದ್ದು, “ಸುಮಾರು ಎಂಟತ್ತು ದಿನಗಳ ಹಿಂದೆಯೇ ಹಾಕಿಕೊಂಡಿರುವ ಶಂಕೆ ಇದ್ದು ತಾಯಿ ಮತ್ತು ಮಗಳ ಇಬ್ಬರ ದೇಹಗಳು ಸಂಪೂರ್ಣ ಕೊಳೆತು ಕೆಳಗೆ ಬಿದ್ದಿದೆ. ಈ ಘಟನೆ ಅಕ್ಕ ಪಕ್ಕದಲ್ಲಿ ಯಾರ ಗಮನಕ್ಕೂ ಬಂದಿಲ್ಲ. ಸ್ಥಳೀಯರ ಮಾಹಿತಿ ಪಡೆದಾಗ ಕುಟುಂಬದ ಯಜಮಾನ ಬಸವರಾಜಪ್ಪ ನಿಧನದ ನಂತರ ತಾಯಿ ಮಗಳು ಅಘಾತಗೊಂಡಿದ್ದರು ಎಂದು ತಿಳಿದುಬಂದಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಕಾಲುವೆಗೆ ಬಿದ್ದ ಗೂಡ್ಸ್ ಆಟೋ: ಮಹಿಳಾ ಕೂಲಿಕಾರರನ್ನು ನಡು ನೀರಲ್ಲಿ ಬಿಟ್ಟು ಚಾಲಕ ಪರಾರಿ!
“ಸಾಮಾಜಿಕವಾಗಿ ಸ್ವಲ್ಪ ಬೆರೆಯುವುದು ಕಡಿಮೆ ಎನ್ನುವ ಮಾಹಿತಿ ಇದೆ. ಇದರಿಂದ ಯಜಮಾನನ ಸಾವಿನ ಮತ್ತು ಕುಟುಂಬದ ಒತ್ತಡ ನಿಭಾಯಿಸಲು ಸಾಧ್ಯವಾಗಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಸಂಪೂರ್ಣ ತನಿಖೆಯ ನಂತರವಷ್ಟೇ ಸಾವಿಗೆ ಕಾರಣ ತಿಳಿದು ಬರಲಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
