ಅಡಕೆ ಆರೋಗ್ಯಕ್ಕೆ ಹಾನಿಕಾರಕವೆಂದು ನಿಷೇಧಿಸುವ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ 24ನೇ ವೈಜ್ಞಾನಿಕ ಸಭೆಯಲ್ಲಿ ಪರಿಶೀಲಿಸಲು ಕೇಂದ್ರ ಸರ್ಕಾರ ಮುಂದಾಗಿದೆಯೆಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿಕೆ ನೀಡಿರುವುದರಿಂದ ಅಡಕೆ ಬೆಳೆಗಾರರಲ್ಲಿ ನಿಷೇಧ ಭೀತಿ ಎದುರಾಗಿದೆ.
ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬುದನ್ನು ವೈಜ್ಞಾನಿಕವಾಗಿ ನಿರೂಪಿಸಲು ರಾಮಯ್ಯ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಂಶೋಧನೆ ನಡೆಯುತ್ತಿರುವಾಗಲೇ ಹೊರಬಿದ್ದಿರುವ ಕೇಂದ್ರ ಆರೋಗ್ಯ ಸಚಿವರ ಈ ಹೇಳಿಕೆ ಅಡಕೆ ಬೆಳೆಗಾರರನ್ನು ಮತ್ತೊಮ್ಮೆ ಆತಂಕಕ್ಕೆ ತಳ್ಳಿದೆ. ಅಡಕೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇದನ್ನು ನಿಷೇಧಿಸಬೇಕೆಂದು ಒಂದೊಮ್ಮೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದರೆ ಅಡಕೆ ಬೆಳೆಗಾರರ ಸ್ಥಿತಿ ಅಯೋಮಯವಾಗಲಿದೆ.
ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ 2021ರ ಜುಲೈ 10ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಅಗತ್ಯ ಮಾಹಿತಿ ನೀಡುವಂತೆ ಅಡಕೆ ಮತ್ತು ಸಂಬಾರ ಅಭಿವೃದ್ಧಿ ನಿರ್ದೇಶನಾಲಯಕ್ಕೆ 2021ರ ಅಕ್ಟೋಬರ್ 14ರಂದು ಸೆಂಟ್ರಲ್ ಪ್ಲಾಂಟೇಷನ್ ಕ್ರಾಫ್ಟ್ ರಿಸರ್ಚ್ ಇನ್ಸ್‌ಟಿಟ್ಯೂಟ್ ಪತ್ರ ಬರೆದು ಮನವಿ ಮಾಡಿದೆ.
ಮಲೆನಾಡ ರೈತ ಹೋರಾಟ ಸಮಿತಿ ರಾಜ್ಯ ಸಂಚಾಲಕ ತಿ ನಾ ಶ್ರೀನಿವಾಸ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅಡಕೆಯೊಂದು ಔಷಧಿ ಮೂಲ ಸಸ್ಯವಾದರೆ ಕೇಂದ್ರ ಸರ್ಕಾರ ಸಿಗರೇಟ್ ಮಾಲೀಕರಿಗೆ ಅನುಕೂಲ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಹಾಗೆಯೇ 2017ರಲ್ಲಿ ಯಡಿಯೂರಪ್ಪ ಎಂಪಿ ಆಗಿದ್ದಾಗ ಪಾರ್ಲಿಮೆಂಟ್‌ನಲ್ಲಿ ಕೇಂದ್ರ ಆರೋಗ್ಯ ಸಚಿವೆ ಅನುಪ್ರಿಯ ಪಟೇಲ್ ಅಡಕೆ ಹಾನಿಕಾರಕ ವಸ್ತುವೆಂದು ಲೋಕಸಬಾ ಸದಸ್ಯರಿಗೊಬ್ಬರಿಗೆ ಲಿಖಿತವಾಗಿ ಹೇಳಿಕೆ ನೀಡಿದರು ಎಂದು ಹೇಳಿದರು.
ಜಾರ್ಖಂಡ್ ಎಂಪಿ ನಿತಿಂದುಬೆ ಅಡಕೆ ವಿಷವಸ್ತುವೆಂದು ಪ್ರಧಾನಿಗೆ ದೂರು ನೀಡಿದ್ದಾರೆ. ಪ್ರಧಾನಿಯವರು ಈದೂರನ್ನು ಆಹಾರ ಗುಣಮಟ್ಟದ ವಸ್ತು ಪ್ರಾಧಿಕಾರಕ್ಕೆ ತನಿಖೆಗಾಗಿ ಕಳುಹಿಸಿದ್ದಾರೆ. ಸಿಗರೇಟ್ ಲಾಬಿ ಅಡಕೆಯ ಬೆನ್ನುಹತ್ತಿದೆ. ಕೋಟಿಗಳ ಬಲದಲ್ಲಿ ಅಡಕೆ ವಿರುದ್ಧ ಲಾಬಿ ನಡೆಯುತ್ತಿದೆ. ಎಂಪಿ ರಾಘವೆಂದ್ರ ರೈತರ ಹೋರಾಟ ಬೆಂಬಲಿಸಲು ಸಾಗರ ಎಸಿ ಕಚೇರಿಗೆ ಬಂದಾಗ ಅಡಕೆ ಅಪಾಯದಲ್ಲಿದೆ, ಸಿಗರೇಟ್ ಲಾಬಿ ಕೆಲಸ ಮಾಡುತ್ತಿದೆ ಎಂದರು.

“ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಸಂಪರ್ಕವಿರುವ ನಾಯಕರ ಹೇಳಿಕೆಯಂತೆ ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಯಲ್ಲಿ ಅಡಕೆ ಬೆಳೆಯುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ದಶಲಕ್ಷ ಟನ್ ಅಡಕೆ ಬೆಳೆಯುತ್ತಿದ್ದಾರೆ. ಅದರೆ 15 ಮಂದಿ ಎಂಪಿಗಳಲ್ಲಿ ಒಬ್ಬರೂ ಅಡಕೆ ಬೆಳೆಗಾರರ ಪರವಾಗಿ ದನಿ ಎತ್ತಿಲ್ಲ. ಈವರೆಗೂ ಅಡಕೆ ಸಾವಿರಾರು ವರ್ಷಗಳಿಂದ ಪೂಜನೀಯ ವಸ್ತು. ಔಷಧೀಯ ಗುಣಗಳೂ ಇವೆ. ಕಾಗೋಡು ತಿಮ್ಮಪ್ಪ ಆರೋಗ್ಯ ಸಚಿವರಾದಾಗ ಮೈಸೂರಿನ ಸರ್ಕಾರಿ ಸಂಶೋಧನಾಲಯದಲ್ಲಿ ಅಡಕೆ ಸಂಶೋಧನೆ ನಡೆಸಿ ಅಡಕೆ ಹಾನಿಕಾರಕ ವಸ್ತುವಲ್ಲವೆಂಬ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು” ಎಂದು ಹೇಳಿದರು.
“ಆ ವರದಿಯನ್ನು ಸಂಬಂಧಪಟ್ಟ ಸಚಿವಾಲಯದಲ್ಲಿ ಹುಡುಕಲು ಕ್ಯಾಂಪ್ಕೋ ಪ್ರಮುಖ ಆರು ವರ್ಷ ಹುಡುಕಾಡಬೇಕಾಯಿತು. ಇದನ್ನು ಕ್ಯಾಂಪ್ಕೋ ವರಿಷ್ಠರು ಹೇಳಿದ್ದು, ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇನ್ನೊಂದು ಕಡೆ ಕೊಳೆರೋಗಕ್ಕೆ ಬ್ರಿಟಿಷರು ಔಷಧಿ ಕಂಡುಹಿಡಿದಿದ್ದು, ಎಲೆಚುಕ್ಕಿರೋಗಕ್ಕೆ ಔಷಧಿಯನ್ನೇ ಸರಿಯಾಗಿ ಕಂಡು ಹಿಡಿದಿಲ್ಲ. ಇನ್ನೂ ನಿಟ್ಟೂರು ಪುರುಷೋತ್ತಮ ಮತ್ತು ಗೆಳೆಯರು ಆಡಳಿತ ವ್ಯವಸ್ಥೆ ಬಗ್ಗಿಸಿ ಎಂಪಿ ರಾಷ್ಟ್ರ ಮಟ್ಟದ ಕೃಷಿತಜ್ಞರನ್ನು ಸಂಪರ್ಕವಿಟ್ಟುಕೊಂಡು ರೋಗ ನಿವಾರಣೆ ಬಗ್ಗೆ ಪ್ರಯತ್ನಿಸಿದರು. ಕೆಲವು ಔಷಧಿ ಕೊಡಲಾಯಿತು. ಅದರಲ್ಲೂ ಗೋಲ್ಮಾಲ್ ನಡೆದು ಕೇಂದ್ರ, ರಾಜ್ಯ ಸರ್ಕಾರಗಳು ಅಡಕೆ ಆರೋಗ್ಯ ಹಾಗೂ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿವೆ” ಎಂದು ಆರೋಪಿಸಿದರು.
“ಇನ್ನೊಂದೆಡೆ ಕೇಂದ್ರ, ರಾಜ್ಯ ಸರ್ಕಾರಗಳು ಮಲೆನಾಡಿನ ರೈತರನ್ನು ಕೊಲ್ಲಲು ಹೊರಟಿವೆ. ನ್ಯಾಯಾಂಗವೂ ಇದಕ್ಕೆ ಮಣೆ ಹಾಕಲು ಮುಂದಾಗಿದೆ. ನಮ್ಮ ಅರಣ್ಯ ಮಂತ್ರಿ ರೈತರ ಪರವಿರುವ ಕಾಯ್ದೆಗಳನ್ನು ಮುಖ ತಿರುಗಿಸಿಯೂ ನೋಡದೆ ಮಲೆನಾಡಿಗರ ಜಮೀನನ್ನು ಸರ್ಕಾರ ಖರೀದಿಸುವ ಯೋಜನೆ ಹಾಕಿಕೊಳ್ಳಲು ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಯವರು, ಅರಣ್ಯಮಂತ್ರಿ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಫ್ರೀಡಂ ಕೊಡಬೇಕೆಂದು ಹೊಗಳಿದ್ದಾರೆ. ಪ್ರಧಾನಿ ಮೋದಿ ಮತ ಕೇಳಲು ಎರಡ್ಮೂರು ಬಾರಿ ಬಂದ್ರು ವಿಮಾನ ಹಾರಿಸಲು ಬಂದ್ರು ಅಡಕೆ ಬೆಳೆಗಾರರ ಹಿತ ಕಾಪಾಡ್ತೀವಿ ಅಂದ್ರು ಎಲ್ಲ ಗೊತ್ತಿದ್ದೂ ಮೋದಿ ನಟಿಸುತ್ತಾರೆ” ಎಂದು ಹೇಳಿದರು.
“ಮಲೆನಾಡಿನ ಜನರನ್ನು ಇವರುಗಳು ಕಾಪಾಡುವುದಿಲ್ಲ. ಭತ್ತ, ಜೋಳ ಬೆಳೆಗಾರರನ್ನೂ ಕಾಪಾಡುವುದಿಲ್ಲ. ರೈತರ ಅದಾಯ ಡಬಲ್ ಮಾಡ್ತೀವಿ ಅಂದ್ರು, ಕೃಷಿತಜ್ಞ ಸ್ವಾಮಿನಾಥನ್ ವರದಿ ಕಸದಬುಟ್ಟಿಗೆ ಹಾಕಿದ್ದಾರೆ. ರೈತರು ಸಾಲಗಾರರಾಗಿ ಸಾಯೋದನ್ನು ನಿಲ್ಲಿಸಲು ಮೋದಿ, ಸಿದ್ದರಾಮಯ್ಯನವರ ಕೈಲಿ ಆಗ್ತಿಲ್ಲ. ನೀನಿಷ್ಟು ಹೊಡೆದು ತಿಂದಿ, ನಾನೆಷ್ಟು ಹೊಡೆದು ತಿಂದೆ ಎಂದು ಜಗಳ ಆಡಲು ವಿದಾನಸಭೆ, ಲೋಕಸಭೆಗಳನ್ನು ವೇದಿಕೆ ಮಾಡಿಕೊಂಡು ಅಟ ಅಡ್ತಿದ್ದಾರೆ. ಅಂಬಾನಿ ಅದಾನಿ ಅಂಪೈರ್ ಆಗಿ ಅಡಿಸ್ತಾ ಇದ್ದಾರೆ” ಎಂದು ಆಕ್ರೋಶ ಹೊರಹಾಕಿದರು.
“ನಾನು ರಾಜಕೀಯ ಪ್ರವೇಶಿಸುವ ಆರಂಭದ ದಿನಗಳಲ್ಲಿ ಅಡಕೆ ಬೆಳೆಗಾರರ ಸಂಘದ ಅದ್ಯಕ್ಷರೂ ಆಗಿದ್ದ ಈಳಿ ನಾರಾಯಣಪ್ಪರವರು ಸಾಗರ ಪ್ರಾಂತ್ಯದ ಅಡಕೆ ಬೆಳೆಗಾರರ ಬಗ್ಗೆ ಕೆಲವು ಮಾತುಗಳನ್ನಾಡಿದ್ದರು. ಅಡಕೆ ಬೆಳೆಗಾರರೆಂದರೆ, ಶ್ರೀಮಂತರೆಂದು ತಿಳಿದುಕೊಳ್ಳಬೇಡ, ನಮ್ಮ ಅಡಕೆ ಬೆಳೆಗಾರರಲ್ಲಿ ಬಹುತೇಕ ಕುಟುಂಬಗಳು ಪಾರಂಪರಿಕವಾಗಿ ಅಡಕೆ ಬೆಳೆದುಕೊಂಡು ಬಂದವರು ಅರ್ಧ ಎಕರೆ ಮುಕ್ಕಾಲು ಎಕರೆ ಒಂದು ಎಕರೆ ಹೀಗೆ ಕಡಿಮೆ ತೋಟ ಹೊಂದಿದವರದೇ ಮೆಜಾರಿಟಿ ಎಂದಿದ್ದರು. ಈಗ ನಾನು ಆಲೋಚಿಸಿದ್ದೇನೆಂದರೆ ಕಳೆದ ಸೆಪ್ಟೆಂಬರ್ 22ರಂದು ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದವರು ಒಂದು ಪ್ರತಿಭಟನೆ ನಡೆಸಿದರು. ಕೊಳೆರೋಗದಿಂದ ಅಡಕೆ ಶೇಕಡ 60ರಷ್ಟು ನಷ್ಟವಾಗಿದೆಯೆಂದು ಹಾಳಾದ ಅಡಕೆಯನ್ನು ಎಸಿ ಕಚೇರಿ ಎದುರು ಸುರಿದರು. ಇದಕ್ಕೆ ಸರ್ಕಾರ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು. ಎರಡು ತಿಂಗಳಾಗುತ್ತ ಬಂದರೂ ಅಡಕೆ ಬೆಳೆಗಾರರ ಪಾಲಿಗೆ ಸರ್ಕಾರ ಜೀವಂತವಿದ್ದಂತೆ ಕಾಣುತ್ತಿಲ್ಲ. ಶಾಸಕರು ಈ ಪ್ರತಿಭಟನೆ ಆದಮೇಲೆ ತೋಟಗಾರಿಕೆ ಮಂತ್ರಿಗಳಿಗೆ ಮನವಿ ಕೊಡುವ ಫೋಟೋ ಮಾಧ್ಯಮಗಳಲ್ಲಿ ಬಂದಿದ್ದು ಬಿಟ್ಟರೆ ಬೇರೇನೂ ಅಗಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕಾರು ಅಡ್ಡಗಟ್ಟಿ ಹಣ ದರೋಡೆ ಪ್ರಕರಣಕ್ಕೆ ತಿರುವು: ದೂರುದಾರ ಸೇರಿ ನಾಲ್ವರು ವಶಕ್ಕೆ!
“ಚಿಕ್ಕಮಗಳೂರು ಜಿಲ್ಲೆಯ ಕೆಲವು ಸ್ನೇಹಿತರು ಮೆಗರವಳ್ಳಿಯಲ್ಲಿ ಸಭೆ ನಡೆದಾಗ ಹೇಳಿದರು, ಎಲೆಚುಕ್ಕಿರೋಗಕ್ಕೆ ಸರ್ಕಾರ ಸರಿಯಾದ ಔಷಧಿ ಕಂಡು ಹಿಡಿಯದೇ ಕೊಳೆರೋಗಕ್ಕೆ ಅಡಕೆ ನಷ್ಟವಾಗಿರುವುದನ್ನು ಗಮನಕ್ಕೆ ತೆಗೆದುಕೊಳ್ಳದೆ ಪರೋಕ್ಷವಾಗಿ ಜನರನ್ನು ಒಕ್ಕಲೆಬ್ಬಿಸಲು ಕೆಲಸ ಮಾಡುತ್ತಿದೆ. ನನಗೆ ಈಗ ಬಂದಿರುವ ಮಾಹಿತಿಯಂತೆ ಕರೂರು ಹೋಬಳಿಯ ಸುಮಾರು 3,545 ಎಕರೆ ಅಡಕೆ ತೋಟದಲ್ಲಿ ಶೇ.60ರಷ್ಟು ಬೆಳೆ ನಷ್ಟವಾಗಿದೆ. ಬಾರಂಗಿ ಹೋಬಳಿಯಲ್ಲಿ ಸುಮಾರು 2,452 ಎಕರೆಯಲ್ಲಿ ಬೆಳೆನಷ್ಟವಾಗಿದೆ. ಕಳೆದ ವರ್ಷ ಸಾಗರ ತಾಲೂಕಿನಲ್ಲಿ 4,696 ಬೆಳೆಗಾರರು ವಿಮೆ ಮಾಡಿಸಿದ್ದಾರೆ. ಈ ವರ್ಷ ಸುಮಾರು ಹತ್ತುಸಾವಿರ ಬೆಳೆಗಾರರು ವಿಮೆ ಮಾಡಿಸಿದ್ದಾರೆ” ಎಂದು ಹೇಳಿದರು.
“ನನ್ನ ಗಮನಕ್ಕೆ ಬಂದಂತೆ ನಿಟ್ಟೂರು, ಮೆಗರವಳ್ಳಿ, ತಾಳಗುಪ್ಪ, ಸಿದ್ದಾಪುರಗಳಲ್ಲಿ ಅಡಕೆ ಬೆಳೆ ನಷ್ಟವಾಗಿದೆ. ನಿದ್ರೆಯಲ್ಲಿರುವ ಶಾಸಕರು, ಸಂಸದರು, ಮಂತ್ರಿಗಳು ತುರ್ತಾಗಿ ಕೇಂದ್ರ ರಾಜ್ಯ ಸರ್ಕಾರಗಳ ಗಮನಕ್ಕೆ ಕೂಡಲೇ ಗಮನಕ್ಕೆ ತಂದರೆ ಎಕರೆಗೆ ₹40,000ದವರೆಗೂ ಪರಿಹಾರ ಪಡೆಯಬಹುದು. ಸರ್ಕಾರ ಜಂಟಿಯಾಗಿ ಸರ್ವೇ ನಡೆಸಲು ತುರ್ತಾಗಿ ಆದೇಶಿದರೆ ಸ್ವಲ್ಪ ತಡವಾಗಿಯಾದರೂ ಪರಿಹಾರ ಪಡೆಯಬಹುದು” ಎಂದು ತಿಳಿಸಿದ್ದಾರೆ.

ಕೆಂಪಡಿಕೆಗೆ ಬಣ್ಣ ಮಾಡಲು ಎಷ್ಟೋಂದು ರಸಾಯನಿಕ ವಸ್ತು ಬಳಕೆ ಮಾಡುತ್ತಾರೆ ಬೆಳೆಗಾರರು; ಇದುವೇ ಕಂಟಕವಾಗುತ್ತಿರುವುದು ಅದನ್ನು ತಡರಯಿರಿ ಮೊದಲು