ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬೆಂಗಳೂರು ದಕ್ಷಿಣ ತಾಲ್ಲೂಕಿನ ಪಟ್ಟಾರೆಡ್ಡಿಪಾಳ್ಯ ಗ್ರಾಮದಲ್ಲಿ ರಸ್ತೆಯು ತುಂಬಾ ಕಿರಿದಾಗಿದ್ದು, ಈ ರಸ್ತೆಯಲ್ಲಿ ಪ್ರತಿದಿನವೂ ಹಲವಾರು ಹಳ್ಳಿಗಳ ರೈತರು, ಪ್ರತಿಷ್ಠಿತ ರೆಸಾರ್ಟ್‌ಗಳ ಪ್ರವಾಸಿಗಳು, ಪ್ರತಿಷ್ಠಿತ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಕಿರಿದಾದ ತಿರುವುಗಳನ್ನುಳ್ಳ ಈ ರಸ್ತೆಯಲ್ಲಿ ಪ್ರತಿದಿನವೂ ವಾಹನ ಕಿರಿಕಿರಿ ಉಂಟಾಗುತ್ತಿದೆ ಎಂದು ರೈತ ಸಂಘದ ಕಗ್ಗಲೀಪುರ ತಾಲೂಕು ಘಟಕ ಅಧ್ಯಕ್ಷರಾದ ನದೀಮ್ ಪಾಷ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಾರೆಡ್ಡಿಪಾಳ್ಯ ರಸ್ತೆಗೆ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ವಿನೂತನ ರೀತಿ ಕನಕಪುರ ರಸ್ತೆಯಲ್ಲಿ ದೊಡ್ಡ ಮಟ್ಟದ ಕಟೌಟನ್ನು ಹಾಕಿ ನ.19ರ ಮಂಗಳವಾರ ರೈತ ಸಂಘದಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಗ್ಗಲೀಪುರ ಕೆರೆಯ ಅಂಚಿನಲ್ಲಿ ಕೆರೆಯ ಸ್ವರೂಪಕ್ಕೆ ಯಾವುದೇ ರೀತಿ ಧಕ್ಕೆ ಆಗದ ರೀತಿಯಲ್ಲಿ 300 ಮೀಟರ್ ಮೇಲ್ ಸೇತುವೆ ನಿರ್ಮಿಸಬೇಕೆಂದು ರೈತ ಸಂಘವು ಸಂಬಂಧಪಟ್ಟ ಜಿಲ್ಲಾ ಪಂಚಾಯತ್ ಇಲಾಖೆಗೆ ಮನವಿಯನ್ನು ಸಲ್ಲಿಸಿ ನಂತರ ಎಲ್ಲಾ ಪ್ರಕ್ರಿಯೆಗಳು ಪ್ರಾರಂಭವಾಗಿ ಅನುದಾನ ಬಿಡುಗಡೆಗೊಳಿಸುವ ಹಂತಕ್ಕೆ ಬಂದು ನಿಂತಿವೆ. ಕರ್ನಾಟಕ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರದಿಂದ ಕೂಡ ಅನುಮತಿಯನ್ನು ಪಡೆದಿದ್ದು ಸ್ಥಳಕ್ಕೆ ನಿರ್ದೇಶಕರು ಆಗಮಿಸಿ ಅನುಮತಿಯನ್ನು ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಶಾಂತ್ ಹೊಸದುರ್ಗ ಮಾತನಾಡಿ, 4 ಕೋಟಿ ಅನುದಾನ ಬಿಡುಗಡೆಯಾದರೆ ಕೂಡಲೇ ಕಾಮಗಾರಿ ಪ್ರಾರಂಭಿಸಬಹುದು ಈ ಸಮಸ್ಯೆಯ ಬಗ್ಗೆ ರೈತ ಸಂಘವು ಕಳೆದ ಜೂನ್ ತಿಂಗಳಿನಲ್ಲಿ ದೊಡ್ಡಮಟ್ಟದ ಪ್ರತಿಭಟನೆ ಕೂಡ ನಡೆಸಿ ಈ ಸಮಸ್ಯೆಯ ಬಗ್ಗೆ ಸ್ಥಳೀಯ ಶಾಸಕರಾದ ಎಸ್.ಟಿ ಸೋಮಶೇಖರ್ ಬಳಿ ಕೂಡ ಹೋಗಿ 3 ಬಾರಿ ಚರ್ಚಿಸಿ ಅವರ ಗಮನಕ್ಕೆ ತಂದಿದೆ ಎಂದರು.

ಶಾಸಕರು ಕೇವಲ ಆಶ್ವಾಸನೆಯನ್ನು ಕೊಡುವುದರಲ್ಲಿ ಮುಂದಾಗಿದ್ದಾರೆಯೇ ಹೊರತು ಈವರೆಗೆ ಅನುದಾನದ ಬಗ್ಗೆ ಎಲ್ಲೂ ಕೂಡ ಚರ್ಚಿಸಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದರು. 15 ದಿನಗಳ ಒಳಗಾಗಿ ಕಾಮಗಾರಿ ಪ್ರಾರಂಭವಾಗದೆ ಹೋದಲ್ಲಿ ರಸ್ತೆ ತಡೆ ನಡೆಸುವುದಾಗಿ ಕೂಡ ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಮಂಡ್ಯ | ಸೀಟ್ ಬೆಲ್ಟ್ ಧರಿಸದ ಚಾಲಕನಿಗೆ ₹18 ಸಾವಿರ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು!
ಪ್ರತಿಭಟನೆಯಲ್ಲಿ ಕಗ್ಗಲೀಪುರ ತಾಲೂಕು ಘಟಕ ಮಂಜುನಾಥ್, ವೆಂಕಟೇಶ್, ಶ್ರೀನಿವಾಸ್, ಜಯಕುಮಾರ್, ಪ್ರದೀಪ್, ರಘು ರೆಡ್ಡಿ, ರಾಮಕೃಷ್ಣ ರೆಡ್ಡಿ, ಕೆಂಪಯ್ಯ, ಜಯರಾಮ್, ಪಟ್ಟರೆಡ್ಡಿಪಾಳ್ಯ, ನೌಕಲಪಾಳ್ಯ ಹಾಗೂ ಕಗ್ಗಲೀಪುರ ಗ್ರಾಮಸ್ಥರು ಮತ್ತು ಇನ್ನಿತರರು ಪಾಲ್ಗೊಂಡಿದ್ದರು.
