ರಾಯಚೂರು ನಗರದ ಚಂದ್ರಬಂಡಾ ರಸ್ತೆಯ ಎಲ್ ಬಿ ಎಸ್ ನಗರದ ಸಂತೋಷ್ ನಗರ ಬಡಾವಣೆಯಲ್ಲಿ ಸರ್ಕಾರಿ ಫ್ರೌಢ ಶಾಲೆಗೆ ಮೀಸಲಿರಿಸಿದ ಜಾಗವನ್ನು ದೇವರ ಹೆಸರಿನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿತ್ತು. ಸಾರ್ವಜನಿಕರ ದೂರಿನ ಮೇರೆಗೆ ಕಟ್ಟಡವನ್ನು ಮಂಗಳವಾರ ಮಧ್ಯರಾತ್ರಿ ಪೊಲೀಸರು ಬಿಗಿ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿದ್ದಾರೆ.
ನಗರಸಭೆಯವರು ಮೂರು ಕ್ರೇನ್ ಬಳಸಿ ಇಟ್ಟಿಗೆಯಿಂದ ನಿರ್ಮಿಸಿದ ಶೆಡ್ ಅನ್ನೂ ತೆರವು ಮಾಡಿದ್ದು, ಶಾಲಾ ಜಾಗದಲ್ಲಿ ಇಟ್ಟಿದ್ದ ನಾಗ ದೇವರ ಮೂರ್ತಿಗಳನ್ನು ಕಾರಿನಲ್ಲಿ ಸುರಕ್ಷಿತವಾಗಿ ತೆಗೆದುಕೊಂಡು ಹೋಗಿದ್ದು, ಸ್ಥಳೀಯ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲು ಚಿಂತನೆ ನಡೆಸಿದ್ದಾರೆ.
ಚಂದ್ರಬಂಡಾ ರಸ್ತೆಯ ಎಲ್‌ಬಿಎಸ್ ನಗರದ ಸಂತೋಷ್ ಬಡಾವಣೆಯ ಸರ್ವೆ ನಂ. 784/1 ರಲ್ಲಿ ವಸತಿ ಬಡಾವಣೆಗೆ ನಾಗರಿಕ ಸೌಲಭ್ಯದ ಕೋಟಾದಡಿ ಎಲ್ ಬಿ ಎಸ್ ನಗರದ ಸರ್ಕಾರಿ ಪ್ರೌಢ ಶಾಲೆಗೆ (ಕನ್ನಡ ಮಾಧ್ಯಮ) ಶಾಲಾ ಕಟ್ಟಡಕ್ಕಾಗಿ ಮೀಸಲಿಡಲಾಗಿತ್ತು.

1017 ಚದರ ಮೀಟರ್‌ಗಿಂತ ಅಧಿಕ ಖಾಲಿ ನಿವೇಶನವನ್ನು ಬಡಾವಣೆಯ ಕೆಲವು ಪಟ್ಟಭದ್ರ ವ್ಯಕ್ತಿಗಳು ಸರ್ಕಾರಿ ಜಾಗದಲ್ಲಿ ಮನೆ ಕಟ್ಟುವ ಸಂದರ್ಭದಲ್ಲಿ ಅಕ್ರಮವಾಗಿ ಟಿನ್ ಶೆಡ್ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ದೇವಸ್ಥಾನ ಮತ್ತು ದೇವರ ಸ್ವರೂಪವನ್ನು ನೀಡಿ ದೇವರ ಹೆಸರಿನಲ್ಲಿ ಸರ್ಕಾರಿ ಜಾಗವನ್ನು ಕಬಳಿಸುವ ಹುನ್ನಾರ ಮಾಡಿದ್ದಾರೆ ಎಂದು ಸರ್ಕಾರಿ ಕನ್ನಡ ಶಾಲಾ ಉಳಿಸಿ ಹೋರಾಟ ಸಮಿತಿಯ ಮುಖಂಡರು, ಹೋರಾಟಗಾರರು, ರಾಯಚೂರು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು.
ಮನವಿಗೆ ಸ್ಪಂದಿಸಿದ್ದ ಜಿಲ್ಲಾಧಿಕಾರಿಗಳು, 15 -20 ದಿನದಲ್ಲಿ ಪೊಲೀಸ್ ಬಂದೋಬಸ್ತಿನೊಂದಿಗೆ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರು. ನೀಡಿದ್ದ ಭರವಸೆಯಂತೆಯೇ ಮಂಗಳವಾರ ಮಧ್ಯರಾತ್ರಿ ಸೂಕ್ತ ಪೊಲೀಸ್ ಬಂದೋಬಸ್ತ್‌ನೊಂದಿಗೆ ಕಾರ್ಯ ನಿರ್ವಹಿಸಿ, ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೋರಾಟಗಾರರು ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ, ಸಂಬಂಧಪಟ್ಟಂತೆ ಶಿಕ್ಷಣ ಇಲಾಖೆಯ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳ ಮತ್ತು ಸಚಿವರ ಗಮನಕ್ಕೆ ತಂದಿದ್ದರು.
ಇದನ್ನು ಓದಿದ್ದೀರಾ? ಬೆಳಗಾವಿ | ಕಾರು ಅಡ್ಡಗಟ್ಟಿ ಹಣ ದರೋಡೆ ಪ್ರಕರಣಕ್ಕೆ ತಿರುವು: ದೂರುದಾರ ಸೇರಿ ನಾಲ್ವರು ವಶಕ್ಕೆ!
ಯಾವುದೇ ಸಮಸ್ಯೆಯಾಗದಂತೆ ತೆರವುಗೊಳಿಸಿದ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ ಅವರಿಗೆ ಸರ್ಕಾರಿ ಕನ್ನಡ ಶಾಲಾ ಉಳಿಸಿ ಹೋರಾಟ ಸಮಿತಿಯ ಮುಖಂಡರು, ಹೋರಾಟಗಾರರು ಕೃತಜ್ಞತೆ ಸಲ್ಲಿಸಿದ್ದಾರೆ.
