ಕಲುಷಿತ ನೀರು ಕುಡಿದು 30ಕ್ಕೂ ಹೆಚ್ಚು ಜನರು ವಾಂತಿ, ಭೇದಿಗೆ ತುತ್ತಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಸನಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಮನೆ-ಮನೆಗಳಿಗೆ ಬೋರ್ವೆಲ್ನಿಂದ ನಲ್ಲಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ನೀರು ಸರಬರಾಜು ಪೈಪ್ ಒಡೆದಿದ್ದು, ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಕೂಡ ಸೇರಿಕೊಳ್ಳುತ್ತಿದೆ. ಅದೇ ನೀರನ್ನು ಕುಡಿದು 30ಕ್ಕೂ ಹೆಚ್ಚು ಮಂದಿಯಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ.
ವಾಂತಿ, ಭೇದಿಗೆ ತುತ್ತಾಗಿರುವ 30 ಮಂದಿಯಲ್ಲಿ 10 ಮಂದಿ ಅಸ್ವಸ್ಥಗೊಂಡಿದ್ದಾರೆ. ಅವರನ್ನು ನಿಪ್ಪಾಣಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹಲವರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳಿದ್ದು, ವೈದ್ಯರ ತಂಡ ಕಸನಾಳ ಗ್ರಾಮಕ್ಕೆ ತೆರಳಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಕಲುಷಿತ ನೀರಿನಿಂದಾಗ ನೂರಾರು ಮಂದಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಪ್ರಕರಣಗಳು ರಾಜ್ಯಾದ್ಯಂತ ಹೆಚ್ಚುತ್ತಲೇ ಇವೆ. ಕಳೆದ ಒಂದೇ ತಿಂಗಳಲ್ಲಿ ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಮಂದಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದಾರೆ. ಅಕ್ಟೋಬರ್ 4ರಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಮತ್ತು 7ನೇ ವಾರ್ಡ್‌ನಲ್ಲಿ ಕಲುಷಿತ ನೀರು ಕುಡಿದು ಸುಮಾರು 150 ಮಂದಿ ಅಸ್ವಸ್ಥರಾಗಿದ್ದರು.
ಇನ್ನು, ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಟಿ ತುಂಬಿಗೇರೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ನವಜಾತ ಶಿಶು ಸೇರಿ ಐವರು ಸಾವನ್ನಪ್ಪಿದ್ದರು.ಅಲ್ಲದೆ, ಹಲವರು ಅಸ್ವಸ್ಥರಾಗಿದ್ದರು. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಟಗಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 70ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು.