ಧರ್ಮದ ಹೆಸರಿನಲ್ಲಿ ದ್ವೇಷ ಹರಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಯಾವುದೇ ಧರ್ಮದಲ್ಲೂ ಅಧರ್ಮ ಹಾಗೂ ಅನೀತಿಯನ್ನು ಬೋಧಿಸಿಲ್ಲ. ದ್ವೇಷವನ್ನು ಹರಡಿ ಎಂದು ಹೇಳಿಲ್ಲ. ಆದರೆ ಕೆಲವರು ಧರ್ಮದ ಹೆಸರಿನಲ್ಲಿ ಇತರರ ಮೇಲೆ ಸವಾರಿ ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕೆ ಸಂವಿಧಾನ ಅವಕಾಶ ನೀಡುವುದಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ಮೈಸೂರು ನಗರದ ಜಗನ್ ಮೋಹನ ಅರಮನೆಯಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ, ಉರ್ದು ದಿನಾಚರಣೆ, ಕನ್ನಡ ರಾಜ್ಯೋತ್ಸವ ಹಾಗೂ ಶೈಕ್ಷಣಿಕ ಕಾರ್ಯಗಾರದಲ್ಲಿ ಮಾತನಾಡಿದರು.
“ನಾವೆಲ್ಲರೂ ಭಾರತೀಯರೆಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ಸಂವಿಧಾನದ ಆಶಯಕ್ಕೆ ನಿಷ್ಠಾವಂತರಾಗಿರಬೇಕು. ಜೀವನದ ಮೌಲ್ಯಗಳ ಮೇಲೆ ಧರ್ಮ ಸೃಷ್ಠಿಯಾಗಿದೆ. ಹಾಗಾಗಿ ಮನುಷ್ಯರು ಸಾಮರಸ್ಯದಿಂದ ಬದುಕಬೇಕಿದೆ” ಎಂದು ಕರೆ ನೀಡಿದರು.
“ಈ ದೇಶದ ಅಲ್ಪಸಂಖ್ಯಾತರು, ಬಹುಸಂಖ್ಯಾತರ ಮೇಲೆ ನಂಬಿಕೆಯಿಟ್ಟು ಬದುಕುತಿದ್ದಾರೆ. ಅವರ ರಕ್ಷಣೆ ಬಹುಸಂಖ್ಯಾತರ ಕರ್ತವ್ಯ ಮತ್ತು ಜವಬ್ದಾರಿಯಾಗಿದೆಯೆಂದು ಡಾ ಬಿ ಆರ್ ಅಂಬೇಡ್ಕರ್ ಹೇಳಿದ್ದಾರೆ. ಆದರೆ ಪ್ರಸ್ತುತ ಕೋಮುವಾದದ ನೆರಳು ಭಾರತದ ಪ್ರಜಾಪ್ರಭುತ್ವದ ಮೇಲೆ ತನ್ನ ಕಬಂಧ ಬಾಹು ಚಾಚುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಸಂವಿಧಾನವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮಲ್ಲರ ಮೇಲಿದೆ. ಸಂವಿಧಾನದ ಆಶಯಗಳನ್ನು ಗೌರವಿಸುವವರನ್ನು ತಾವೆಲ್ಲರೂ ಬೆಂಬಲಿಸಬೇಕು. ರಾಜಕೀಯ ಸ್ವಾತಂತ್ರ್ಯದಿಂದ ಏಳಿಗೆ ಸಾಧ್ಯವಿಲ್ಲ. ಎಲ್ಲರಿಗೂ ಆರ್ಥಿಕ ಸ್ವಾವಲಂಬನೆ ಅಗತ್ಯವಿದೆ. ಶಿಕ್ಷಣದ ಸವಲತ್ತುಗಳು ಪ್ರತಿಯೊಬ್ಬರಿಗೂ ದೊರಕಬೇಕು. ಹೀಗಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರವು ಅನೇಕ ಸೌಲಭ್ಯಗಳನ್ನು ಎಲ್ಲ ವರ್ಗದವರಿಗೂ ದೊರಕಿಸುತ್ತಿದೆ” ಎಂದು ಹೇಳಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, “ಸಮಾಜ ನಮ್ಮೊಂದಿಗಿದೆ. ಅದರಂತೆ ನಾವೂ ಸಮಾಜದ ಜತೆಗೆ ಇರುವುದನ್ನು ರೂಢಿಸಿಕೊಳ್ಳಬೇಕು. ಯಾರು ಅನ್ಯಧರ್ಮಕ್ಕೆ ಗೌರವ ನೀಡುವುದಿಲ್ಲವೋ, ಅವರು ತಮ್ಮ ಧರ್ಮವನ್ನು ಎಂದಿಗೂ ರಕ್ಷಣೆ ಮಾಡಿಕೊಳ್ಳಲಾಗುವುದಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ದೇವನೂರ ಬಗ್ಗೆ ದ್ವೇಷ ಭಾಷಣ; ಹೆಚ್ ಗೋವಿಂದಯ್ಯ ವಿರುದ್ಧ ದಸಂಸ ಕಿಡಿ
ವಿಧಾನಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, “ಸಾಮಾಜಿಕ ನ್ಯಾಯವೆಂಬುದು ಕಾಂಗ್ರೆಸ್ ಪಕ್ಷದ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಶೋಷಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರ ಏಳಿಗೆಗಾಗಿ ಹಾಗೂ ಸಾಮಾಜಿಕ ನ್ಯಾಯದ ರಕ್ಷಣೆಗಾಗಿ ನಾವು ಶ್ರಮಿಸಲಿದ್ದೇವೆ” ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಕೆ ಹರೀಶ್ ಗೌಡ, ನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ಚಿಕ್ಕನೇರಳೆ, ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.