ಬಿಸಿಯೂಟ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಅಕ್ಷರ ದಾಸೋಹ (ಬಿಸಿಯೂಟ) ನೌಕರರ ಸಂಘ ಹಾಗೂ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಗತ್ ವೃತ್ತದಿಂದ ವಿಧಾನಸೌಧ ಮಾರ್ಗವಾಗಿ ಡಿಡಿಪಿಐ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, ʼಹಲವಾರು ವರ್ಷಗಳಿಂದ ಅಕ್ಷರ ದಾಸೋಹ ನೌಕರರು ಕನಿಷ್ಠ ಸಂಬಳದಲ್ಲಿ ದುಡಿಯುತ್ತಿದ್ದಾರೆ. ಸಂಬಳ ಹೆಚ್ಚಳಕ್ಕಾಗಿ ಕಳೆದ 22 ವರ್ಷಗಳಿಂದ ಹೋರಾಟ ನಡೆಸಿದರೂ ಯಾವುದೇ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಇದರಿಂದ ನೌಕರರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆʼ ಎಂದರು.
ʼಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತ್ರತ್ವದ ಸರಕಾರ ಬಿಸಿಯೂಟ ನೌಕರರಿಗೆ 1 ಸಾವಿರ ರೂ. ಸಂಬಳ ಹೆಚ್ಚಿಸಲು ಒಪ್ಪಿಕೊಂಡಿತ್ತು. ಆದರೆ, ಇಲ್ಲಿಯವರೆಗೆ ಅದೂ ಜಾರಿಗೆ ಬಂದಿಲ್ಲ. ಬೇರೆ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸಲಾಗಿದೆ. ಬಿಸಿಯೂಟ ನೌಕರರು 6 ರಿಂದ 7 ಗಂಟೆ ದುಡಿಯುತ್ತಿದ್ದರೂ ಕನಿಷ್ಠ ವೇತನ ನೀಡದೇ ಅನ್ಯಾಯ ಎಸಗಲಾಗುತ್ತಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕು. ಬಿಸಿಯೂಟ ನೌಕರರಿಗೆ ಕಾಯಂಮಾತಿ ನೀಡಬೇಕು. ನಿವೃತ್ತಿ ಹೊಂದಿದ ನೌಕರರಿಗೆ 2 ಲಕ್ಷದವರೆಗೆ ಪಿಂಚಣಿ ಕೊಡಬೇಕು. ಕೆಲಸದ ಸ್ಥಳದಲ್ಲಿ ಮರಣ ಹೊಂದಿ ನೌಕರರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು. ಮಾಜಿ ಸಿಎಂ ಬಸವರಾಜ ಬೊಮ್ಮಯಿ ಅವರು ಭರವಸೆ ನೀಡಿದಂತೆ ಒಂದು ಸಾವಿರ ಸಂಬಳ ಹೆಚ್ಚಿಸಬೇಕು. ಬೇಸಿಗೆ, ದಸರಾ ರಜೆಗಳಲ್ಲಿ ವೇತನ ಕಡ್ಡಾಯವಾಗಿ ನೀಡಬೇಕು. ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಬಿಸಿಯೂಟ ನೌಕರರಿಗೆ ದಿನಭತ್ಯೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ನಬಾರ್ಡ್‌ನಿಂದ ರಾಜ್ಯದ ರೈತರಿಗೆ ಸಾಲದ ಕೊರತೆ, ಅನ್ಯಾಯ ಸರಿಪಡಿಸಲು ಸಿಎಂ ಸಿದ್ದರಾಮಯ್ಯ ಮನವಿ
ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಮರೆಪ್ಪ ಮೇತ್ರೆ, ಉದಯಕುಮಾರ ಸಾಗರ, ಮುಕ್ತಾಸಿ ಚಂದಾ,
ಮಹಾದೇವಿ ನಿಂಬಾಳ, ರಮೇಶ ಕವಡೆ, ಸಂತೋಷ ತೆಗನೂರ, ಸುನೀತಾ ಎಂ. ಕುಂಬಾರ, ಜಯಕುಮಾರ ನೂಲಕರ್, ಸುವರ್ಣಾ ಕಾಂಪೂರಹಳ್ಳಿ, ಸಂಪತಕುಮಾರಿ ಆರ್, ಶಿವಶರಣಪ್ಪ ಕುರನಳ್ಳಿ, ಸಿದ್ದಮ್ಮ ಎಡಗಿ ಸೇರಿದಂತೆ ಬಿಸಿಯೂಟ ನೌಕರರು ಇದ್ದರು.