ಹಿರಿಯರು, ವಿದ್ವಾಂಸರು ಆಗಿರುವ ಗೊ.ರು ಚನ್ನಬಸಪ್ಪ ಅವರನ್ನು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಜಾಗೃತ ಕರ್ನಾಟಕ ಸಂಘಟನೆ ಅಭಿನಂದಿಸಿದೆ.
ಜನಪದ ತಜ್ಞರು ಆದ ಗೊ.ರು.ಚ ಅವರು ಈ ಹಿಂದೆ ಕಸಾಪ ಅಧ್ಯಕ್ಷರಾಗಿಯೂ ಸಹ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಜೀವಪರ ಚಿಂತನೆಗಳ ಪರವಾಗಿ ಸದಾ ನಿಂತಿರುವವರು. ಗೊ.ರು.ಚ ಅವರು ಜಾತ್ಯತೀತವಾಗಿ ಮತ್ತು ಬಸವತತ್ವದ ಪರವಾಗಿ ನಿಂತ ಹಿರಿಯ ಸಾಹಿತಿಯಾಗಿದ್ದಾರೆ. ಅವರು ಸಮ್ಮೇಳನಾಧ್ಯಕ್ಷರಾಗಿರುವುದು ಸಮಯೋಚಿತವಾಗಿದೆ.
ಇದುವರೆಗೂ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಹಲವಾರು ವಿವಾದಗಳು ಸಂಭವಿಸಿದ್ದವು. ಆದರೆ ಸಮ್ಮೇಳನಾಧ್ಯಕ್ಷರ ಆಯ್ಕೆ ವಿವಾದ ರಹಿತವಾಗಿ, ಅರ್ಥಪೂರ್ಣವಾಗಿ ನಡೆದಿರುವುದಕ್ಕೆ ಆಯ್ಕೆ ಸಮಿತಿಗೆ ಜಾಗೃತ ಕರ್ನಾಟಕ ಅಭಿನಂದನೆ ಸಲ್ಲಿಸುತ್ತದೆ.

ಇದನ್ನು ಓದಿದ್ದೀರಾ? ಮಂಡ್ಯ | ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಎಲ್ಲರ ಬೆಂಬಲ ಅವಶ್ಯ : ಸಚಿವ ಚಲುವರಾಯಸ್ವಾಮಿ
ಕನ್ನಡದ ನೆಲದ ಪರಂಪರೆ ಸರ್ವಜನಾಂಗದ ಶಾಂತಿಯ ತೋಟದ ಪರಿಕಲ್ಪನೆ ನೀಡಿದ ಕುವೆಂಪುರವರ ವಿಚಾರ ಮತ್ತು ಬಸವತತ್ವದ ವಿಚಾರಗಳ ಕುರಿತು ಹೆಚ್ಚು ಚರ್ಚೆಯಾಗಬೇಕು. ಮಂಡ್ಯ ಜಿಲ್ಲೆಯ ಸಮಸ್ಯೆಗಳು ಹಾಗೂ ಮಂಡ್ಯದ ಸಮಗ್ರ ಅಭಿವೃದ್ದಿಯ ಮುನ್ನೋಟದ ಕುರಿತಂತೆ ಗೋಷ್ಠಿಗಳೊಂದಿಗೆ, ಅರ್ಥಪೂರ್ಣ ಸಮ್ಮೆಳನ ಇದಾಗಲಿ ಎಂದು ಜಾಗೃತ ಕರ್ನಾಟಕದ ಸಂತೋಷ್ ಜಿ, ನಾಗೇಶ್ ಎನ್, ಪೃಥ್ವಿರಾಜ್, ಸುಬ್ರಮಣ್ಯ, ನಗರಕೆರೆ ಜಗದೀಶ್ ಒತ್ತಾಯಿಸಿದ್ದಾರೆ.