- ಭಾನುವಾರ ಬೆಸ್ಕಾಂಗೆ 22,249 ದೂರು ದಾಖಲು
- ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವ ಮರಗಳ ತೆರವು
ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ 546 ವಿದ್ಯುತ್ ಕಂಬಗಳು ನೆಲಕ್ಕೊರಗಿವೆ. 64 ವಿದ್ಯುತ್ ಪರಿವರ್ತಕಗಳು ಹಾಗೂ 9 ಡಬಲ್ ಪೋಲ್ ಸ್ಟ್ರಕ್ಚರ್‌ಗಳು ಹಾನಿಗೊಂಡ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು ಎಂದು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಂ) ಮಾಹಿತಿ ನೀಡಿದೆ.
“ಸತತವಾಗಿ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ನಗರದೆಲ್ಲೆಡೆ ದುರಸ್ಥಿ ಕಾರ್ಯ ಆರಂಭವಾಗಿದೆ. ವಿದ್ಯುತ್ ಮೂಲಸೌಕರ್ಯಗಳು ಹಾನಿಗೊಂಡಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿರುವ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಗೆ ಕ್ರಮವಹಿಸಲಾಗಿದೆ” ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದರು.
“ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವ ಮರ ಹಾಗೂ ಕೊಂಬೆಗಳನ್ನು ತೆರವುಗೊಳಿಸಲಾಗಿದ್ದು, ವಿದ್ಯುತ್ ಮರುಸ್ಥಾಪನೆ ಮಾಡಲಾಗಿದೆ. ಮುರಿದಿರುವ ಕಂಬಗಳ ಬದಲಾವಣೆ ಮಾಡಿ, ಶೀಘ್ರ ವಿದ್ಯುತ್ ಪೂರೈಸಲು ಕ್ರಮ ವಹಿಸಲಾಗಿದೆ” ಎಂದರು.
ಮೇ 20ರಂದು ಸುರಿದ ಭಾರೀ ಮಳೆಗೆ ಬೆಂಗಳೂರು ನಗರ ಸೇರಿ ಬೆಸ್ಕಾಂ ವ್ಯಾಪ್ತಿಯ ಹಲವು ಭಾಗಗಳಲ್ಲಿ 142 ಕಂಬಗಳು ಮುರಿದಿವೆ. 20 ಟಿಸಿಗಳು ಹಾನಿಗೊಳಗಾಗಿವೆ. ಮೇ 21ರಂದು ಸುರಿದ ಗಾಳಿ-ಮಳೆಗೆ 404 ಕಂಬಗಳು ಮುರಿದ್ದಿದ್ದು, 44 ಟಿಸಿಗಳು ಹಾಗೂ 9 ಡಬಲ್ ಪೋಲ್ ಸ್ಟ್ರಕ್ಚರ್‌ಗಳು ಹಾನಿಗೊಳಗಾಗಿವೆ.
ವಿದ್ಯುತ್ ವ್ಯತ್ಯಯಗೊಂಡಿರುವ ಪ್ರದೇಶಗಳು
ಬೆಂಗಳೂರು ವ್ಯಾಪ್ತಿಯ ಹೆಬ್ಬಾಳ, ಮಲ್ಲೇಶ್ವರಂ, ಯಲಹಂಕ, ವಿಜಯನಗರ, ನಾಗರಭಾವಿ, ಮಹಾಲಕ್ಷ್ಮಿ ಬಡಾವಣೆ, ಹೆಸರಘಟ್ಟ, ಕೋರಮಂಗಲ, ರಾಜನಕುಂಟೆ, ಜಯನಗರ, ಶಿವಾಜಿನಗರ, ಇಂದಿರಾನಗರ, ಕೆಂಗೇರಿ, ಆರ್.ಆರ್.ನಗರ, ಪೀಣ್ಯ ಸೇರಿದಂತೆ ಮತ್ತಿತ್ತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಂಚಾರಕ್ಕೆ ಯೋಗ್ಯವಲ್ಲದ ಅಂಡರ್‌ಪಾಸ್ ಬಂದ್: ತುಷಾರ್ ಗಿರಿನಾಥ್
ಬೆಸ್ಕಾಂ ಸಹಾಯವಾಣಿಗೆ ದೂರು
ಭಾನುವಾರ ಒಟ್ಟು 44,784 ಕರೆಗಳು ಬೆಸ್ಕಾಂ ಸಹಾಯವಾಣಿ 1912 ಕ್ಕೆ ಬಂದಿದ್ದು, ಈ ಪೈಕಿ 22,249 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರತಿ 1 ಗಂಟೆ ಅವಧಿಯಲ್ಲಿ ಸರಾಸರಿ 1691 ಕರೆಗಳು ಬಂದಿದ್ದು, 779 ದೂರುಗಳು ದಾಖಲಾಗಿವೆ ಎಂದು ಬೆಸ್ಕಾಂ ತಿಳಿಸಿದೆ.