ಪ್ರಜಾಪ್ರಭುತ್ವದ ಆಶಯದಡಿ ಇನ್ಫೋಸಿಸ್ ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ಹಂಚುವ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿದೆ ಎಂದು ಸಂಸ್ಥೆಯ ಸಂಯೋಜನಾಧಿಕಾರಿ ಸಂತೋಷ್ ಅನಂತಪುರ ತಿಳಿಸಿದರು.
ಚಾಮರಾಜನಗರದ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಸರ್ಕಾರಿ ಶಾಲೆಯಲ್ಲಿ ಡಿಜಿಟಲ್ ಶಿಕ್ಷಣ ಬಲವರ್ಧನೆ ಹಾಗೂ 3ನೇ ಹಂತದ ಉಚಿತ ಟ್ಯಾಬ್’ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಕೆಲ ಶಾಲೆಗಳಿಗೆ ಸಾಂಕೇತಿಕವಾಗಿ ಟ್ಯಾಬ್ ವಿತರಿಸುವ ವೇಳೆ ಮಾತನಾಡಿದರು.
“ಜಿಲ್ಲೆಯ ಶೈಕ್ಷಣಿಕ ಪ್ರಗತಿಗಾಗಿ ಇನ್ಫೋಸಿಸ್ ಸಂಸ್ಥೆ ಕಟಿಬದ್ಧವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಿಗೆ ಸ್ಪ್ರಿಂಗ್‍ಬೋರ್ಡ್ ಮೂಲಕ ಕಲಿಯಲು ಅನುಕೂಲವಾಗುವಂತೆ ಈಗಾಗಲೇ 120 ಸ್ವಾರ್ಟ್ ಟಿವಿ ಹಾಗೂ 1800 ಟ್ಯಾಬ್‍ಗಳನ್ನು ವಿತರಿಸಲಾಗಿದೆ. ಸ್ವಾರ್ಟ್ ಟಿವಿ, ಟ್ಯಾಬ್ ನೀಡಿದರೆ ಸಂಸ್ಥೆಯ ಜವಾಬ್ದಾರಿ ಪೂರ್ಣಗೊಳ್ಳುವುದಿಲ್ಲ. ಕಲಿಕಾ ಪ್ರಗತಿ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೊಡುಗೆ ನೀಡಲಾಗುವುದು. ಜಿಲ್ಲೆಯ ವಿದ್ಯಾರ್ಥಿಗಳು, ಶಿಕ್ಷಕರು ಈ ಸದಾವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು” ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ, “ಸ್ಪ್ರಿಂಗ್ ಬೋರ್ಡ್ ಮೂಲಕ ಕಲಿಯಲು ಸಂಸ್ಥೆಯು ಸ್ವಾರ್ಟ್ ಟಿವಿ, ಟ್ಯಾಬ್ ವಿತರಿಸಿ ಜಿಲ್ಲೆಯ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಉತ್ತಮ ನೆರವು ನೀಡುತ್ತಿದೆ. ಸ್ವಾರ್ಟ್ ಟಿವಿ, ಟ್ಯಾಬ್ ವಿತರಣೆ ಮಾತ್ರವಲ್ಲ, ಶಾಲಾ ಕಟ್ಟಡ, ಶೌಚಾಲಯ ನಿರ್ಮಾಣ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳಲ್ಲಿ ಇಲಾಖೆಯ ಜೊತೆ ಕೈಜೋಡಿಸಿದೆ. ಈಗಾಗಲೇ ಮೊದಲ ಹಂತದಲ್ಲಿ ವೆಂಕಟಯ್ಯನ ಛತ್ರ ಶಾಲೆಯಲ್ಲಿ ಹಾಗೂ 2ನೇ ಹಂತದಲ್ಲಿ ಮಲ್ಲಯ್ಯನಪುರದ ಆದರ್ಶ ಶಾಲೆಗಳಿಗೆ ಸ್ವಾರ್ಟ್ ಟಿವಿ, ಟ್ಯಾಬ್ ವಿತರಿಸಲಾಗಿದೆ. ಇದು 3ನೇ ಹಂತದ ವಿತರಣಾ ಕಾರ್ಯಕ್ರಮವಾಗಿದೆ” ಎಂದರು.
“ಎಸ್ಎಸ್ಎಲ್‌ಸಿ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ನಮ್ಮ ಕಲಿಕಾ ವೇಗ ಇನ್ನೂ ಹೆಚ್ಚಾಗಬೇಕು. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಕಬೇಕು. ಇನ್ಫೋಸಿಸ್ ಸಂಸ್ಥೆಯ ಅಧಿಕಾರಿಗಳು ಆಗಿಂದ್ದಾಗ್ಗೆ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯನ್ನು ಪರಿಶೀಲಿಸಲಿದ್ದಾರೆ. ಶಿಕ್ಷಕರು, ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ಇಲಾಖೆಯು ಸಂಸ್ಥೆಯೊಂದಿಗೆ 5 ವರ್ಷಗಳವರೆಗೆ ಒಪ್ಪಂದ ಮಾಡಿಕೊಂಡಿದೆ. ಸ್ವಾರ್ಟ್ ಟಿವಿ, ಟ್ಯಾಬ್‍ಗಳ ವೇಗ ಬಳಕೆಗಾಗಿ ಮುಂದಿನ ದಿನಗಳಲ್ಲಿ ಬಿಎಸ್ಎನ್ಎಲ್ ಉಚಿತ ಹಾಗೂ ಅನಿಯಮಿತ ಅಂತರ್ಜಾಲ ವ್ಯವಸ್ಥೆ ಒದಗಿಸಲು ಕ್ರಮ ವಹಿಸಲಾಗಿದೆ” ಎಂದು ಹೇಳಿದರು.
ಶಿಕ್ಷಕಿ ಶಾಲಿನಿ ಮಾತನಾಡಿ, “ವಿದ್ಯಾರ್ಥಿಗಳು ಪುಸ್ತಕದಿಂದ ಎಲ್ಲವನ್ನೂ ಕಲಿಯಲು ಸಾಧ್ಯವಿಲ್ಲ. ಕಲಿಕೆಗೆ ಇರುವ ಇತರೆ ಅವಕಾಶಗಳು ಹಾಗೂ ಪುಸ್ತಕಕ್ಕೆ ಪೂರಕವಾದ ಬೇರೆಬೇರೆ ಕೋರ್ಸ್‌ಗಳ ಬಗ್ಗೆಯು ಚಿಂತನೆ ನಡೆಸಬೇಕು. 3,933 ಬ್ಲಾಗ್‍ಗಳು, 2 ಲಕ್ಷಕ್ಕೂ ಹೆಚ್ಚಿನ ಕೋರ್ಸ್‍ಗಳು, ಮಕ್ಕಳಿಗಾಗಿ 7 ಸಾವಿರ ಕಂಟೆಂಟ್‍ಗಳಿರುವ ಸ್ಪ್ರಿಂಗ್ ಬೋರ್ಡ್ ಆ್ಯಪ್ ಬಹುದೊಡ್ಡ ಸಾಗರವಾಗಿದೆ. ಈ ಆ್ಯಪ್ ಅನ್ನು ಪರಿಪೂರ್ಣವಾಗಿ ಅರಿಯಲು ಶಿಕ್ಷಕರಿಗೆ ಪರಿಣಾಮಕಾರಿ ತರಬೇತಿಯ ಅಗತ್ಯವಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒತ್ತುವರಿ ತೆರವುಗೊಳಿಸಿದ್ದ ಜಾಗದಲ್ಲಿ ಶಾಲೆ ನಿರ್ಮಾಣಕ್ಕೆ 1 ಕೋಟಿ ಅನುದಾನ ಬಿಡುಗಡೆ
“ಅಂತರ್ಜಾಲ ವ್ಯವಸ್ಥೆಗೆ ವೇಗ ನೀಡಬೇಕು. ಸ್ಪ್ರಿಂಗ್‍ಬೋರ್ಡ್ ಆ್ಯಪ್ ಸುಲಭೀಕರಣಗೊಳಿಸಬೇಕು. ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಲಿದೆ” ಎಂದರು.
ಇನ್ಫೋಸಿಸ್ ಸಂಸ್ಥೆಯ ವ್ಯವಸ್ಥಾಪಕಿ ಡಾ ಮೀನಾಕ್ಷಿ, ಪ್ರಶಾಂತ್ ಆಚಾರ್ಯ, ಬಿಳಿಗಿರಿರಂಗ, ದೀಪ್ತಾ ಪದ್ಮನಾಭನ್, ವಿನಯ್ ಸಂತು ಸೇರಿದಂತೆ ಹಲವರು ಇದ್ದರು.