ಸ್ವಚ್ಛತೆ ಕಡೆಗೆ ಆಧ್ಯತೆ ನೀಡಿ, ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಡುವ ಮೂಲಕ ಗ್ರಾಮಗಳಲ್ಲಿ ಬಯಲು ಶೌಚ ನಿರ್ಮೂಲನೆ ಮಾಡಬೇಕಿದೆ. ಇಂತಹ ಕಾರ್ಯಕ್ರಮಗಳ ಅನುಷ್ಠಾನ ಕುರಿತಾಗಿ ಅತಿಹೆಚ್ಚು ಜಾಗೃತಿ ಮೂಡಿಸಿ ಬದಲಾವಣೆ ದಿಕ್ಕಿಗೆ ಸಾಗಬೇಕಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ್ ರೆಡ್ಡಿ ಹೇಳಿದರು.
ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ʼವಿಶ್ವ ಶೌಚಾಲಯ ದಿನಾಚರಣೆʼ ಅಂಗವಾಗಿ ಸ್ವಚ್ಛ ಭಾರತ್ ಮಿಷನ್, ಜಿಲ್ಲಾ ಪಂಚಾಯತ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮೈಸೂರು ಜಿಲ್ಲೆ ಬಯಲು ಮುಕ್ತ ಶೌಚವನ್ನಾಗಿಸಲು ಪಣತೊಟ್ಟು ‘ನಮ್ಮ ಶೌಚಾಲಯ-ನಮ್ಮ ಗೌರವ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

“ವಿದ್ಯಾರ್ಥಿಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕು. ತಾವು ತಮ್ಮ ಮನೆಯಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ತಮ್ಮ ಮನೆಗಳಲ್ಲಿ ಶೌಚಾಲಯವಿಲ್ಲದೇ ಇದ್ದರೆ ಪೋಷಕರಿಗೆ ಮಾಹಿತಿ ನೀಡಿ ಗ್ರಾಮ ಪಂಚಾಯಿತಿಗಳ ಮೂಲಕ ಅನುದಾನ ಪಡೆದು ನಿರ್ಮಾಣವಾಗುವಂತೆ ಮಾಡಬೇಕು” ಎಂದರು.
“ವ್ಯವಸ್ಥೆ ಎಷ್ಟೇ ಬದಲಾವಣೆಯಾದರು ನಾವಿನ್ನೂ ಬಯಲಿನಲ್ಲಿ ಶೌಚಕ್ಕೆ ಹೋಗುವುದು ಅನೈರ್ಮಲ್ಯಕ್ಕೇ ಕಾರಣರಾಗುತ್ತಿರುವುದು ಸರಿಯಲ್ಲ. ಅದರಿಂದ ರೋಗ ರುಜಿನಗಳು ಹೆಚ್ಚುತ್ತವೆ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ‘ನಮ್ಮ ಶೌಚಾಲಯ ನಮ್ಮ ಗೌರವ’ ಎನ್ನುವ ಭಾವನೆ ಮೂಡಬೇಕು. ಇಂತಹ ಕಾರ್ಯಕ್ರಮಗಳು ಆದಷ್ಟೂ ಹಳ್ಳಿಗಳಲ್ಲಿ ಅನುಷ್ಠಾನವಾಗಬೇಕು. ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಶೌಚಾಲಯವಿಲ್ಲದ ಮನೆಗಳನ್ನು ಗುರುತಿಸಿ,
ಸರ್ಕಾರದ ಅನುದಾನದಡಿಯಲ್ಲಿ ಶೌಚಾಲಯ ನಿರ್ಮಿಸಿಕೊಡಲು ಮುಂದಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಆರೋಗ್ಯ ಅಭಿಯಾನ ವಿಶೇಷ ಗ್ರಾಮ ಸಭೆಗೆ ಯಾರಿಗೂ ಆಹ್ವಾನವಿಲ್ಲ; ಪಂಚಾಯಿತಿ ಸದಸ್ಯರದ್ದೇ ದರ್ಬಾರ್
ಸಿಇಒ ಗಾಯತ್ರಿ ಮಾತನಾಡಿ, “ಬಯಲುಮುಕ್ತ ಶೌಚ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿಗಳು ಹೆಚ್ಚಿನ ಆಧ್ಯತೆ ನೀಡಿ ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಡುವ, ನಿರ್ಮಿಸಿಕೊಳ್ಳುವಂತೆ ಅರಿವು ನೀಡುವ ಕೆಲಸ ಮಾಡಬೇಕು. ಹಿರಿಯರು ಮುಜುಗರದಿಂದ ಮುಂದೆ ಬರದೆ ಇರಬಹುದು, ಅಂಥವರಿಗೆ ಮಾಹಿತಿ ನೀಡಿ, ಅದರಿಂದಾಗುವ ಪರಿಣಾಮ ತಿಳಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ” ಎಂದರು.
ಜಿಪಂ ಉಪ ಕಾರ್ಯದರ್ಶಿ ಕೃಷ್ಣರಾಜು, ಮಹೇಂದ್ರ, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.