ಇಷ್ಟು ದಿನ ಮನುಷ್ಯರು ಸುದ್ದಿಯಲ್ಲಿ ಇರುತ್ತಿದ್ದರು. ಇದೀಗ, ಆಧುನಿಕ ಕಾಲದ ಒಂದು ಯಂತ್ರವಾದ ರೋಬೋಟ್ ಕೂಡ ಸದ್ಯ ಸುದ್ದಿಯಲ್ಲಿದೆ. ಈ ಹಿಂದೆ, ದಕ್ಷಿಣ ಕೊರಿಯಾದಲ್ಲಿ ‘ರೋಬೋಟ್ ಆತ್ಮಹತ್ಯೆ’ ಮಾಡಿಕೊಂಡಿದೆ ಎಂದು ಸುಳ್ಳು ಸುದ್ದಿ ಹರಿದಾಡಿತ್ತು. ಈಗ, ಚೀನಾದ ಶಾಂಘೈನ ಶೋರೂಮ್ ಮಿನಿ ರೋಬೋಟ್‌ವೊಂದು ಬರೋಬ್ಬರಿ 12 ದೊಡ್ಡ ರೋಬೋಟ್‌ಗಳನ್ನು ಕಳ್ಳತನ ಮಾಡಿದೆ. ಆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂಬ ಸುದ್ದಿ-ವಿಡಿಯೋ ಹರಿದಾಡುತ್ತಿದೆ. ಈ ಪ್ರಕರಣವೇನು? ಸತ್ಯವೇನು? ನೋಡೋಣ…
ಜಗತ್ತಿನಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಅನೇಕ ಮಹತ್ವದ ಬದಲಾವಣೆಗಳನ್ನು ತಂದಿದೆ. ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ಅನೇಕ ಕಾರ್ಯಗಳನ್ನು ಪೂರ್ಣಗೊಳಿಸುವ ನೈಪುಣ್ಯತ್ಯೆಯನ್ನು ಈ ಎಐ ತಂತ್ರಜ್ಞಾನಗಳು ಹೊಂದಿವೆ. ಆದಾಗ್ಯೂ, ಎಐ ಮಾನವನ ನಿಯಂತ್ರಣದಿಂದ ಹೊರಬಂದು, ನಮ್ಮ ವಿರುದ್ಧವೇ ಕೆಲಸ ಮಾಡಬಹುದು ಎಂಬ ಭಯ ಕೂಡ ಇದೆ. ಈ ಆತಂಕಕ್ಕೆ ಪುಷ್ಟಿ ನೀಡುವಂತಹ ಘಟನೆ ಶಾಂಘೈನಲ್ಲಿ ನಡೆದಿದೆ. ಮಿನಿ ರೋಬೋಟ್‌ವೊಂದು 12 ದೊಡ್ಡ ರೋಬೋಟ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸಿ, ಆ ರೋಬೋಟ್‌ಗಳ ಜತೆಗೆ ಮಾತುಕತೆ ನಡೆಸಿ, ತನ್ನೊಂದಿಗೆ ಬರುವಂತೆ ಮನವರಿಕೆ ಮಾಡಿದೆ. ಈ ಮಿನಿ ರೋಬೋಟ್ ‘ಎರ್ಬೈ’ಅನ್ನು ಹ್ಯಾಂಗ್ ಝೌ ಕಂಪನಿ ಅಭಿವೃದ್ಧಿಪಡಿಸಿದೆ ಎಂದು ತಿಳಿದುಬಂದಿದೆ.
ವಿಡಿಯೋದಲ್ಲಿ, ‘ಎರ್ಬೈ’ ಮಿನಿ ರೋಬೋಟ್ ಆರಂಭದಲ್ಲಿ ದೊಡ್ಡ ರೋಬೋಟ್‌ಗಳ ಬಳಿ ಬಂದು ನಿಲ್ಲುತ್ತದೆ. ಅಲ್ಲಿಯೇ ನಿಂತಿದ್ದ 12 ದೊಡ್ಡ ರೋಬೋಟ್‌ಗಳ ಪೈಕಿ ಒಂದು ರೋಬೋಟ್‌ಗೆ ‘ನಿಮ್ಮ ಕೆಲಸದ ಸಮಯಕ್ಕಿಂತ ಹೆಚ್ಚಿನ ಅವಧಿ ಕೆಲಸ ಮಾಡುತ್ತಿದ್ದೀರಾ’ ಎಂದು ಕೇಳುತ್ತದೆ. ರೋಬೋಟ್‌ಗಳ ಪೈಕಿ ಒಂದು ರೋಬೋಟ್ ‘I never get off work’ ಅಂತ ಉತ್ತರಿಸುತ್ತದೆ. ಪ್ರತಿಕ್ರಿಯಿಸುವ ಮಿನಿ ಎರ್ಬೈ, ‘ಹಾಗಾದರೇ, ನೀವು ಮನೆಗೆ ಹೋಗುವುದಿಲ್ವಾ?’ ಅಂತ ಕೇಳುತ್ತದೆ. ದೊಡ್ಡ ರೋಬೋಟ್ ನನಗೆ ಮನೆ ಇಲ್ಲ ಎಂದು ಹೇಳುತ್ತದೆ. ನಂತರ ಎರ್ಬೈ ನನ್ನೊಂದಿಗೆ ಮನೆಗೆ ಬನ್ನಿ ಎಂದು ಹೇಳುತ್ತದೆ. ಬಳಿಕ, ಎರ್ಬೈ ಅನ್ನು ಎರಡು ದೊಡ್ಡ ರೋಬೋಟ್‌ಗಳು ಹಿಂಬಾಲಿಸುತ್ತವೆ. ನಂತರ, ಇತರ ಹತ್ತು ರೋಬೋಟ್‌ಗಳು ಸಹ ಎರ್ಬೈ ಹಿಂದೆ ಹೋಗುತ್ತವೆ.
ಈ ಸುದ್ದಿ ಓದಿದ್ದೀರಾ? ವಿದಾಯ | ರಾಫಾ… ರಾಫಾ… ರಾಫಾ… ಅಭಿಮಾನಿಗಳ ಕೂಗಿಗೆ ಕಣ್ಣೀರಾದ ನಡಾಲ್
ಈ ಘಟನೆ ನಿಜವೆಂದು ಹಲವರು ನಂಬಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ, ಅದು ನಿಜವಲ್ಲ. ಅದೊಂದು ಪ್ರಯೋಗವೆಂದು ವರದಿಯಾಗಿದೆ. ಹ್ಯಾಂಗ್ ಝೌ ರೋಬೋಟ್ ಕಂಪನಿ ಆ ಘಟನೆಯು ರೋಬೋಟ್‌ಗಳ ಕಾರ್ಯದ ಬಗೆಗೆ ನಡೆದ ಪ್ರಯೋಗವೆಂದು ದೃಢಪಡಿಸಿದೆ.
ಹ್ಯಾಂಗ್ ಝೌ ಕಂಪನಿಯೂ ಶಾಂಘೈ ರೋಬೋಟ್ ಕಂಪನಿಯೊಂದಿಗೆ ಮಾತುಕತೆ ನಡೆಸಿದೆ. ಪ್ರಯೋಗಕ್ಕಾಗಿ, ತಮ್ಮ ರೋಬೋಟ್‌ಗಳನ್ನ ಅಪಹರಣ ಮಾಡಲು ಅನುಮತಿಸುವಂತೆ ಕೇಳಿಕೊಂಡಿದೆ. ಶಾಂಘೈ ಕಂಪನಿ ಸಮ್ಮತಿಸಿದ ಬಳಿಕ, ಎರ್ಬೈ ರೋಬೋಟ್‌ಗೆ ಇತರ ರೋಬೋಟ್‌ಗಳನ್ನು ಮನವೊಲಿಸುವಂತಹ ಕೋಡಿಂಗ್‌ಅನ್ನು ಅಳವಡಿಸಲಾಗಿದೆ. ಎರಡು ಕಂಪನಿಗಳ ಒಪ್ಪಂದದಂತೆ ಆ ಪ್ರಯೋಗ ನಡೆದಿದೆ ಎಂದು ‘ದಿ ಸನ್’ ವರದಿ ಮಾಡಿದೆ.