ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟಬೇಕು ಎಂದು ಗುಂಡು ಕರ್ಜಿಗಿ ಗ್ರಾಮದ ಮಹಿಳೆಯರು ಬುಧವಾರ ವಿಜಯಪುರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿದರು.
“ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡು ಕರ್ಜಿಗೆ ಊರಿನಲ್ಲಿ ಸಾರಾಯಿ ಮಾರಾಟ ಮಾಡುವುದರಿಂದ ಯುವಕರು, ಗಂಡಸರು ಕುಡಿದು ಮನೆಗೆ ಬಂದು ಹೆಣ್ಣುಮಕ್ಕಳಿಗೆ ಹಿಂಸೆಯನ್ನು ನೀಡುತ್ತಿದ್ದಾರೆ. ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಸರಿಯಾಗಿ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಮನಸ್ಸಿನ ನೆಮ್ಮದಿಯನ್ನು ಕಳೆದುಕೊಂಡಿದ್ದೇವೆ. ಹಾಗಾಗಿ ತಾವುಗಳು ಸಾರಾಯಿ ಮಾರಾಟ ಮಾಡುವುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ನಮ್ಮ ಊರಿನಲ್ಲಿ ಸಾರಾಯಿ ಮಾರಾಟ ನಿಷೇಧಿಸಬೇಕು” ಎಂದು ಸ್ವಸಹಾಯ ಸಂಘಗಳ ಸದಸ್ಯರು ಗ್ರಾಮಸ್ಥರು ಆಗ್ರಹಿಸಿದರು.
ಮುದ್ದೇಬಿಹಾಳದ ಸೇವಾ ಸದನ ಸಮಾಜ ಅಭಿವೃದ್ಧಿ ಕೇಂದ್ರದ ಸಂಯೋಜಕ ಡಿ ಡೊರತಿ ಮಾತನಾಡಿ, “ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಕಾರಣ ಗ್ರಾಮದಲ್ಲಿ ನೆಮ್ಮದಿ ಹಾಳಾಗಿದೆ. 2023ರ ಫಬ್ರವರಿ 9ರಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ. ಹಲವರು ಚಹಾದ ಅಂಗಡಿಗಳಲ್ಲಿ, ಕಿರಾಣಿ ಅಂಗಡಿಗಳಲ್ಲಿ, ಪಾನ್ ಬೀಡಾ ಅಂಗಡಿಗಳಲ್ಲಿ ಮತ್ತೆ ಅಕ್ರಮವಾಗಿ ಸಾರಾಯಿ ಮಾರುತ್ತಿದ್ದು, ಗ್ರಾಮದ ನೆಮ್ಮದಿ ಹಾಳಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಓದುವ ಆಸಕ್ತಿಯಿಂದ ಬೌದ್ಧಿಕ ಮತ್ತು ಭಾವನಾತ್ಮಕ ವಿಕಾಸ
ಜಿಲ್ಲಾಧಿಕಾರಿಗಳ ಪರವಾಗಿ ಹೆಚ್ಚು ಜಿಲ್ಲಾಧಿಕಾರಿ ಸಮಲಿಂಗ ಗೆಣ್ಣೂರು, ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ್ ಅವರಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಗಮ್ಮ ಬಿರಾದಾರ, ಜಯಶ್ರೀ ಹಿರೇಮಠ, ರೇವಣಸಿದ್ದಪ್ಪ ಪೂಜಾರಿ, ರೂಪಾ, ಸಂಕನಾಳಮಹಾದೇವಿ, ರೇಣುಕಾದಳಯಿ, ಶಾಂತಾ ದಳವಾಯಿ, ಸುನಂದಾ ಚಲವಾದಿ, ಬಸವ್ವ ದಳವಾಯಿ ಸೇರಿದಂತೆ ಇತರರು ಇದ್ದರು.