ಪೌತಿಖಾತೆ ಮಾಡಿಕೊಡಲು ಲಂಚ ಸ್ವೀಕರಿಸುವ ವೇಳೆ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜತೆಗೆ ಈ ಪ್ರಕರಣದಲ್ಲಿ ಲಂಚ ಸ್ವೀಕಾರಕ್ಕೆ ಸಹಕಾರ ನೀಡಿದ ಖಾಸಗಿ ವ್ಯಕ್ತಿಯನ್ನೂ ಕೂಡ ಬಂಧಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನೆಲಗೇತನ ಹಟ್ಟಿಯ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಲೋಕಾಯುಕ್ತ ಬಲೆಗೆ ಸಿಕ್ಕಿರುವ ಅಧಿಕಾರಿ. ಕಚೇರಿಯಲ್ಲಿ ₹10,000 ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದಾನೆ. ಇದೇ ಗ್ರಾಮದ ಚನ್ನಕೇಶವಯ್ಯ ಎಂಬುವವರಿಂದ ಆಸ್ತಿಯ ಪೌತಿಖಾತೆ ವರ್ಗಾವಣೆಗೆ ಆರೋಪಿತ ಗ್ರಾಮ ಲೆಕ್ಕಾಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಲಂಚ ನೀಡಲು ಇಷ್ಟವಿಲ್ಲದೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರು ಆಧರಿಸಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ₹10,000 ಲಂಚ ಸ್ವೀಕರಿಸುವಾಗಲೇ ನೇರವಾಗಿ ಸಿಕ್ಕಿ ಬಿದಿದ್ದಾನೆ. ಗ್ರಾಮ ಲೆಕ್ಕಾಧಿಕಾರಿಗೆ ಸಹಕಾರ ನೀಡಿದ್ದ ಖಾಸಗಿ ವ್ಯಕ್ತಿ ಬೋರೇಶ್ ಎಂಬಾತನನ್ನೂ ಕೂಡಾ ಬಂಧನ ಮಾಡಲಾಗಿದೆ. ಲೋಕಾಯುಕ್ತ ಎಸ್‌ಪಿ ವಾಸುದೇವ್ ರಾವ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪ್ರಸ್ತುತ ದಿನಗಳಲ್ಲಿ ಮಕ್ಕಳ ಆರೋಗ್ಯ ಉತ್ತಮವಾಗಿಸುವುದು ಬಹುಮುಖ್ಯ: ಕಸವನಹಳ್ಳಿ ರಮೇಶ್
ಚಿತ್ರದುರ್ಗ ಲೋಕಾಯುಕ್ತ ಎಸ್‌ಪಿ ವಾಸುದೇವರಾವ್ ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದು, “ಆಸ್ತಿಯ ಪೌತಿಖಾತೆ ಬದಲಾವಣೆಗೆ ಆರೋಪಿತ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಲಂಚದ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ಚನ್ನಕೇಶವಯ್ಯ ಎನ್ನುವರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ತಂಡ ದಾಳಿ ಮಾಡಿದ್ದು, ಲಂಚ ಸ್ವೀಕರಿಸುತ್ತಿದ್ದ ವೇಳೆ ಆರೋಪಿತ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದೇವೆ ಮತ್ತು ಪ್ರಕರಣ ದಾಖಲಿಸಿದ್ದೇವೆ” ಎಂದು ಮಾಹಿತಿ ನೀಡಿದರು.