ಗ್ರಾಮೀಣ ಭಾಗದಲ್ಲಿ ಸುರಕ್ಷಿತ ನೈರ್ಮಲ್ಯ ಹಾಗೂ ಬಹಿರ್ದೇಸೆ ಮುಕ್ತ ವಾತಾವರಣ ಸೃಷ್ಟಿಸಿ, ನಿರಂತರವಾಗಿ ಶೌಚಾಲಯಗಳನ್ನು ಬಳಸಲು ಪ್ರೇರೇಪಿಸಲು ಒತ್ತು ನೀಡುವುದಾಗಿ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಿಇಒ ಎಸ್ ಜೆ ಸೋಮಶೇಖರ್ ಹೇಳಿದರು.
ಚಿತ್ರದುರ್ಗ ನಗರದ ಜಿ ಪಂ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ, ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ‘ನಮ್ಮ ಶೌಚಾಲಯ ನಮ್ಮ ಗೌರವ’ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, “ನವೆಂಬರ್ 19ರಿಂದ ಡಿಸೆಂಬರ್ 20ರವರೆಗೆ ಜಿಲ್ಲಾದ್ಯಂತ ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನ ಹಮ್ಮಿಕೊಳ್ಳಲಾಗಿದೆ. ಈ ಘೋಷ ವಾಕ್ಯದೊಂದಿಗೆ ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಆಂದೋಲನ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು” ಎಂದು ತಿಳಿಸಿದರು.
“ಜಿಲ್ಲೆಯಲ್ಲಿ ಬಳಕೆಯಲ್ಲಿರದ ಸಮುದಾಯ ಶೌಚಾಲಯಗಳನ್ನು ಗುರುತಿಸಿ, ದುರಸ್ಥಿಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಲಾಗುವುದು. ಶೌಚಾಲಯಗಳ ಕೊರತೆಯಿರುವ ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಹೊಸದಾಗಿ ಶೌಚಾಲಯ ನಿರ್ಮಿಸಲಾಗುವುದು. ಸ್ವಚ್ಛತೆ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ಆರೋಗ್ಯ ಶಿಬಿರ ಆಯೋಜಿಸಿ, ಸುರಕ್ಷಾ ಪರಿಕರಗಳನ್ನು ವಿತರಿಸುವುದರ ಜತೆಗೆ ಗೌರವಿಸಲಾಗುವುದು” ಎಂದು ಜಿ ಪಂ ಸಿಇಒ ಎಸ್ ಜೆ ಸೋಮಶೇಖರ್ ತಿಳಿಸಿದರು.
“ಈಗಾಗಲೇ ಜಿಲ್ಲೆಯನ್ನು ಬಯಲು ಶೌಚಮುಕ್ತ ಪ್ರದೇಶವೆಂದು ಘೋಷಿಸಲಾಗಿದೆ. ಪ್ರಸಕ್ತ ವರ್ಷ 16 ಸಾವಿರ ಶೌಚಾಲಯಗಳ ನಿರ್ಮಾಣದ ಗುರಿ ನಿಗದಿಪಡಿಸಿಕೊಳ್ಳಲಾಗಿದೆ. ಹಳ್ಳಿಗಳಲ್ಲಿ ಶೌಚಾಲಯ ಹೊಂದಿರದವರು ಶೌಚಾಲಯ ಕಟ್ಟಿಸಿಕೊಳ್ಳಲು ಮುಂದೆ ಬಂದರೆ ಅವರಿಗೆ ಸರ್ಕಾರದಿಂದ ಸಹಾಯಧನ ನೀಡಲಾಗುವುದು. ಸಾರ್ವಜನಿಕರು ಸಿಟಿಜನ್ ಪೋರ್ಟಲ್‌ನಲ್ಲಿ ಅರ್ಜಿಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ನೇರವಾಗಿ ಭೇಟಿ ನೀಡಬಹುದು. ಆಯ್ಕೆಯಾದ ಎಸ್‌ಸಿ/ಎಸ್‌ಟಿ ಫಲಾನುಭವಿಗಳಿಗೆ ₹20,000 ಇತರೆ ಫಲಾನುಭವಿಗಳಿಗೆ ₹12,000 ಸಹಾಯಧನ ನೀಡಲಾಗುವುದು” ಎಂದು ಜಿ ಪಂ ಸಿಇಒ ಎಸ್ ಜೆ ಸೋಮಶೇಖರ್ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಇಂದಿರಾಗಾಂಧಿ ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವಕಂಡ ಧೀಮಂತ ನಾಯಕಿ: ಮಲ್ಲಿಕಾರ್ಜುನ ಎಸ್ ಲೋಣಿ
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ನಿರ್ಮಿಸಲಾಗಿರುವ ಮಹಿಳೆಯರ ಶೌಚಾಲಯವನ್ನು ಉದ್ಘಾಟಿಸಿದರು. ಡಿ ಎಸ್ ಹಳ್ಳಿ ಗ್ರಾಮ ಪಂಚಾಯಿತಿಯ ಮೂವರು ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣದ ಕಾರ್ಯಾದೇಶ ನೀಡಿದರು.
ಜಿ.ಪಂ.ಮುಖ್ಯ ಯೋಜನಾಧಿಕಾರಿ ಗ್ರಾಯಿತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸನಗೌಡ ಪಾಟೀಲ್, ಎಸ್ ಬಿಎಂ ಸಮಾಲೋಚಕಿ ಪ್ರಮೀಳ ಸೇರಿದಂತೆ ಇತರರು ಇದ್ದರು.