ಈ ದಿನ ಸಂಪಾದಕೀಯ | ವಿಕ್ರಂನಂತಹ ಬಡವರು ಯಾಕೆ ನಕ್ಸಲರಾಗುತ್ತಾರೆ? ಹೊರ ಬಂದವರಿಗೆ ಸರ್ಕಾರ ಮಾಡುತ್ತಿರುವುದೇನು?

Date:

Advertisements

2017ರಿಂದ ಕೇಂದ್ರ ಸರ್ಕಾರ ನಕ್ಸಲ್‌ಪೀಡಿತ ಪ್ರದೇಶಗಳ ಭದ್ರತಾ ವೆಚ್ಚ, ಮೂಲಸೌಕರ್ಯ ಅಭಿವೃದ್ಧಿ ಅನುದಾನ ಎಲ್ಲವನ್ನೂ ಕಡಿತಗೊಳಿಸಿದೆ. ನಕ್ಸಲ್‌ ಪೀಡಿತ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗಳ ವೆಚ್ಚದಲ್ಲಿ ಕೇಂದ್ರದ ಪಾಲು ಶೇ 100ರಿಂದ 60ಕ್ಕೆ ಕುಸಿಯಿತು. ವಿಶೇಷ ಅನುದಾನಿತ ಕಾರ್ಯಕ್ರಮಗಳ ವೆಚ್ಚವನ್ನೂ ಶೇ 40ರಷ್ಟು ಇಳಿಸಿತ್ತು.

2014ರ ಮುನ್ನ ಯುಪಿಎ-2 ಅಧಿಕಾರದಲ್ಲಿದ್ದಾಗ ನಕ್ಸಲರ ಶರಣಾಗತಿ ಮತ್ತು ಪುನರ್ವಸತಿಗೆ ಹೆಚ್ಚಿನ ಆದ್ಯತೆ ನೀಡಿತ್ತು. ಬಲಪ್ರಯೋಗ, ಎನ್‌ಕೌಂಟರ್ ಸಂದರ್ಭ ಬಹಳ ಕಡಿಮೆಯಾಗಿತ್ತು. ನಂತರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಈ ನೀತಿಯನ್ನು ಮುಂದುವರೆಸಿತ್ತು. ಈ ಹತ್ತು ವರ್ಷಗಳಲ್ಲಿ ಸಾವಿರಾರು ಸಂಖ್ಯೆಯ ನಕ್ಸಲರು ಶರಣಾಗಿದ್ದಾರೆ. ಸರ್ಕಾರದ ದತ್ತಾಂಶಗಳ ಪ್ರಕಾರ 2004-14ರವರೆಗೆ ದೇಶಾದ್ಯಂತ ನಕ್ಸಲರು ನಡೆಸಿದ ದಾಳಿಗಳ ಸಂಖ್ಯೆ 16 ಸಾವಿರಕ್ಕೂ ಹೆಚ್ಚು. ನಕ್ಸಲ್‌ ಪೀಡಿತ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ನಾನಾ ಕಾರಣಗಳಿಂದಾಗಿ ಆ ನಂತರ ನಕ್ಸಲ್‌ ದಾಳಿಯ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿತ್ತು. ಈ ಹತ್ತು ವರ್ಷಗಳಲ್ಲಿ 7,900 ದಾಳಿಗಳಷ್ಟೇ ನಡೆದಿವೆ ಎಂದು ಸರ್ಕಾರದ ವರದಿಗಳು ಹೇಳಿವೆ. 2014ರ ನಂತರ 11,000 ನಕ್ಸಲರು ಶರಣಾಗಿ ಮುಖ್ಯವಾಹಿನಿಗೆ ಸೇರಿದ್ದಾರೆ ಎಂದು ವರದಿಯೊಂದು ಹೇಳಿದೆ.

ಇಡೀ ದೇಶದ ಮಟ್ಟದಲ್ಲಿ 2022ರಲ್ಲಿ 66, 2023ರಲ್ಲಿ 56 ಹೀಗೆ ನಕ್ಸಲರ ಎನ್‌ಕೌಂಟರ್‌ ಸಂಖ್ಯೆ ಇಳಿಮುಖವಾಗುತ್ತಲೇ ಸಾಗಿತ್ತು. ಆದರೆ, ಈ ವರ್ಷ ಆರಂಭದಲ್ಲಿಯೇ ಛತ್ತೀಸ್‌ಗಡ ರಾಜ್ಯವೊಂದರಲ್ಲಿಯೇ ಏಪ್ರಿಲ್‌ ವೇಳೆಗೆ 79 ನಕ್ಸಲರ ಹತ್ಯೆ ಮಾಡಲಾಗಿದೆ. ಗೃಹಸಚಿವ ಅಮಿತ್‌ ಶಾ ಇನ್ನೆರಡು ವರ್ಷದಲ್ಲಿ ನಕ್ಸಲರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತೇವೆ ಎಂದಿದ್ದರು. ಅವರ ನಿರ್ಮೂಲನೆಯ ಪರಿಭಾಷೆ ಬೇರೆಯದೇ ಎಂಬುದು ಈಗ ಸ್ಪಷ್ಟವಾಗುತ್ತಿದೆ.

Advertisements

ನಕ್ಸಲ್‌ ಪೀಡಿತ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಪುನರ್ವಸತಿ ಕಾರ್ಯಕ್ರಮಗಳು ಪೂರಕವಾಗಿದ್ದ ದಿನಗಳಲ್ಲಿ ಶರಣಾಗತಿಯಾಗುವ ನಕ್ಸಲರ ಸಂಖ್ಯೆ ಹೆಚ್ಚಿತ್ತು. ಎನ್‌ಕೌಂಟರ್‌ಗಳು ಕಡಿಮೆಯಾಗಿದ್ದವು. 2017ರ ನಂತರದ ಅಂಕಿಅಂಶಗಳ ಪ್ರಕಾರ ಶರಣಾಗತಿಯ ಸಂಖ್ಯೆ ಇಳಿಮುಖವಾಯ್ತು. 2017ರಿಂದ ಕೇಂದ್ರ ಸರ್ಕಾರ ನಕ್ಸಲ್‌ಪೀಡಿತ ಪ್ರದೇಶಗಳ ಭದ್ರತಾ ವೆಚ್ಚ, ಮೂಲಸೌಕರ್ಯ ಅಭಿವೃದ್ಧಿ ಅನುದಾನ ಎಲ್ಲವನ್ನೂ ಕಡಿತಗೊಳಿಸಿದೆ. ನಕ್ಸಲ್‌ ಪೀಡಿತ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗಳ ವೆಚ್ಚದಲ್ಲಿ ಕೇಂದ್ರದ ಪಾಲು ಶೇ 100ರಿಂದ 60ಕ್ಕೆ ಕುಸಿಯಿತು. ವಿಶೇಷ ಅನುದಾನಿತ ಕಾರ್ಯಕ್ರಮಗಳ ವೆಚ್ಚವನ್ನೂ ಶೇ 40ರಷ್ಟು ಇಳಿಸಿತ್ತು. ಇದರ ನಂತರ ಸಹಜವಾಗಿಯೇ ಮೂಲಸೌಕರ್ಯ ಅಭಿವೃದ್ಧಿ ಕುಂಠಿತಗೊಂಡಿತ್ತು. ಶರಣಾಗತಿಯ ಸಂಖ್ಯೆಯೂ ಇಳಿಯಿತು. ಪರಿಣಾಮವಾಗಿ ನಕ್ಸಲರ ಶರಣಾಗತಿ, ಪುನರ್ವಸತಿಗಿಂತ ʼಎನ್‌ಕೌಂಟರ್ʼ ಮೂಲಕ ನಿರ್ಮೂಲನೆ ಮಾಡುವತ್ತ ಕೇಂದ್ರ ಮುಂದಡಿಯಿಡುತ್ತಿದೆ. ವಿಕ್ರಂ ಗೌಡ ಪ್ರಕರಣ ಈ ಮಾತಿಗೆ ಉದಾಹರಣೆ.

ಕಳೆದ ಏಪ್ರಿಲ್‌ನಲ್ಲಿ ಛತ್ತೀಸ್‌ಗಡದಲ್ಲಿ ನಕ್ಸಲರ ಹತ್ಯೆಯಾದಾಗ ಗೃಹಸಚಿವ ಅಮಿತ್‌ ಶಾ ನೀಡಿದ್ದ “ಇನ್ನು ಎರಡು ವರ್ಷಗಳಲ್ಲಿ ದೇಶದಿಂದ ಸಂಪೂರ್ಣವಾಗಿ ನಕ್ಸಲರ ನಿರ್ಮೂಲನೆ ಮಾಡುತ್ತೇವೆ” ಎಂಬ ಹೇಳಿಕೆಯು ಮೋಶಾ ಸರ್ಕಾರದ ಎನ್‌ಕೌಂಟರ್‌ ತಂತ್ರದ ನಿಚ್ಚಳ ಮುನ್ಸೂಚನೆ ಕೊಟ್ಟಂತಿದೆ. ಇದಕ್ಕೆ ಪೂರಕವೆಂಬಂತೆ ಈ ವರ್ಷದ ಆರಂಭದಲ್ಲಿ ಛತ್ತೀಸ್‌ಗಡದ ಬಸ್ತರ್‌ ಪ್ರದೇಶದಲ್ಲಿ ಭದ್ರತಾ ಪಡೆಗಳು 29 ನಕ್ಸಲರನ್ನು ಎನ್‌ಕೌಂಟರ್‌ ಮಾಡಿದ್ದರು. ಕೇಂದ್ರ ಸರ್ಕಾರದ ಬದಲಾದ ನೀತಿಯ ಕಾರಣಕ್ಕೆ ಛತ್ತೀಸ್‌ಗಡ ಮತ್ತು ಒಡಿಶಾದಲ್ಲಿ ತಣ್ಣಗಿದ್ದ ನಕ್ಸಲರು ಮತ್ತೆ ಚುರುಕಾಗಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಸಾಕಷ್ಟು ಪುರಾವೆಗಳು ಸಿಗತೊಡಗಿವೆ.

ಈ ವರ್ಷದ ಆರಂಭದಲ್ಲೇ ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ನಕ್ಸಲರು ಸಂಚರಿಸಿದ ಸುದ್ದಿ ಹರಿದಾಡಿತ್ತು. ಆದರೆ ಯಾವುದೇ ಚಕಮಕಿ ನಡೆದಿರಲಿಲ್ಲ. ನವೆಂಬರ್‌ 11ರಂದು ನಡೆದ ಆದಿವಾಸಿ ನಕ್ಸಲ್‌ ವಿಕ್ರಂ ಗೌಡ ಶೂಟೌಟ್‌ ಪ್ರಕರಣ ಹತ್ತು ವರ್ಷಗಳಿಂದ ತಣ್ಣಗಿದ್ದ ಮಲೆನಾಡನ್ನು ಬೆಚ್ಚಿ ಬೀಳಿಸಿದೆ. ಆದರೆ, ನಕ್ಸಲರು ಅಲ್ಲಿನ ಜನರಿಗೆ ತೊಂದರೆ ಕೊಟ್ಟಿರುವುದು ಅಥವಾ ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಬೆದರಿಕೆಯೊಡ್ಡಿದ್ದ ಘಟನೆಗಳು ವರದಿಯಾಗಿಲ್ಲ. ಒಂದೇ ಒಂದು ಬೆದರಿಕೆ ಅಥವಾ ಬೇಡಿಕೆಯ ಸಂದೇಶವಿರುವ ಕರಪತ್ರವೂ ಸಿಕ್ಕಿಲ್ಲ. ಅಂತಹ ಸಮಯದಲ್ಲಿ ನಕ್ಸಲರ ಜೊತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡ ಮೃತಪಟ್ಟಿದ್ದಾರೆ ಎಂದು ನಕ್ಸಲ್‌ ನಿಗ್ರಹ ಪಡೆಯ ಹೇಳಿಕೆಯನ್ನು ಸರ್ಕಾರ ಪುನರುಚ್ಚರಿಸಿದರೆ ಅದನ್ನು ಒಪ್ಪುವುದು ಕಷ್ಟ. ಪ್ರಭುತ್ವ ನಡೆಸಿದ ಎನ್‌ಕೌಂಟರ್‌ಗಳಲ್ಲಿ ನಕಲಿ ಎಷ್ಟು, ಅಸಲಿ ಎಷ್ಟು ಎಂಬುದಕ್ಕೆ ಅದು ನಡೆದ ಸಮಯ, ಸ್ಥಳ ಎಲ್ಲವೂ ಪುರಾವೆ ಒದಗಿಸುತ್ತವೆ. ಆದರೆ, ವಿಕ್ರಂ ಗೌಡರಂತಹ ಅಮಾಯಕ ಬಡ ಜೀವಗಳ ಎನ್‌ಕೌಂಟರ್‌ಗಳು ನ್ಯಾಯದ ಕಟಕಟೆ ಏರುವುದೇ ಇಲ್ಲ.

ವಿಕ್ರಂ ಗೌಡರ ಮೃತದೇಹವನ್ನು ಆತನ ಕುಟುಂಬದವರು, ನೆರೆಹೊರೆಯವರು ಬಹಳ ಪ್ರೀತಿಯಿಂದ ಬರಮಾಡಿಕೊಂಡು ಗೌರವಯುತ ಅಂತ್ಯಸಂಸ್ಕಾರ ಮಾಡಿದ್ದಾರೆ. 20 ವರ್ಷಗಳಿಂದ ಅಣ್ಣನ ಮುಖ ನೋಡ ಸಹೋದರಿ,”ನನ್ನಣ್ಣನಿಗೆ ಸೇರಿದ ತುಂಡು ಭೂಮಿ ಇದೆ, ಆತನ ಹೆಣವನ್ನು ಅನಾಥವಾಗಲು ಬಿಡಲ್ಲ” ಎಂದು ಹುಟ್ಟೂರಿಗೆ ತಂದು ಅಂತ್ಯಸಂಸ್ಕಾರ ಮಾಡಿದ್ದಾರೆ. ಆತನ ಬಾಲ್ಯ ಸ್ನೇಹಿತ ಮಾಧ್ಯಮಗಳ ಜೊತೆ ಮಾತನಾಡುತ್ತಾ, “ಈಗಲೂ ಈ ಊರಿಗೆ ಮೂಲಸೌಕರ್ಯ ಇಲ್ಲ, ರಸ್ತೆ ಇಲ್ಲ. ಸೇತುವೆ ಒಂದು ಆಗಿರೋದು ಬಿಟ್ಟರೆ ನಮ್ಮ ಸಮಸ್ಯೆ ಕೇಳುವವರೇ ಇಲ್ಲ” ಎಂದು ಹೇಳಿದ್ದು ಕಾಡಂಚಿನ ಬಿಸಿರಕ್ತದ ಯುವಕರು ಯಾಕೆ ನಕ್ಸಲರಾಗುತ್ತಿದ್ದಾರೆ ಎಂಬುದಕ್ಕೆ ಹಿಡಿದ ಕಟು ನಿಷ್ಠುರ ಕನ್ನಡಿ. ವಿಕ್ರಂ ಗೌಡ ಕುಟುಂಬ ಈಗಲೂ ಅಲ್ಲೇ ವಾಸವಿದೆ. ಕುದುರೆಮುಖ ಉದ್ಯಾನವನ ಘೋಷಣೆಯಾದಾಗ ಅರಣ್ಯದ ಸಮೀಪವಿದ್ದ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ಕ್ರಮ ಅವರನ್ನು ಹೋರಾಟದ ಹಾದಿ ಹಿಡಿಯುವಂತೆ ಮಾಡಿತ್ತು.

1998 ರಿಂದ 2004ರ ತನಕ ಈ ಭಾಗದಲ್ಲಿ ನಡೆದ ಎಲ್ಲಾ ಜನತಾಂತ್ರಿಕ ಹೋರಾಟದಲ್ಲಿ ಕರ್ನಾಟಕ ವಿಮೋಚನಾ ರಂಗದ ಭಾಗವಾಗಿ ಸಕ್ರಿಯವಾಗಿ ತೊಡಗಿಸಿಕೊಂಡವರು ವಿಕ್ರಂ. ಆ ಕಾರಣಕ್ಕೆ ಅವರಿಗೆ, ಅವರ ಕುಟುಂಬದವರಿಗೆ ಅರಣ್ಯ ಇಲಾಖೆಯವರು ಮತ್ತು ಪೊಲೀಸರು ಕಿರುಕುಳ ಕೊಡುತ್ತಿದ್ದರು ಎಂಬ ಆರೋಪವಿದೆ. 2003ರಲ್ಲಿ ಹೆಬ್ರಿ ಬಳಿ ನಕ್ಸಲರ ತಂಡದ ಪಾರ್ವತಿ ಮತ್ತು ಹಾಜಿಮಾ ಹತ್ಯೆಯ ನಂತರ ಪೊಲೀಸರು ವಿಕ್ರಂ ಗೌಡ ಮತ್ತು ಗೆಳೆಯರ ಬದುಕನ್ನು ನರಕ ಮಾಡಿದ್ದರು. ಪೊಲೀಸ್‌ ಠಾಣೆಗೆ ಎಳೆದೊಯ್ದು ಚಿತ್ರಹಿಂಸೆ ನೀಡಿದ್ದರು. ವಿಚಾರಣೆ ಹೆಸರಲ್ಲಿ ಥಳಿತ, ಅವಮಾನ ಅನುಭವಿಸಿ ನೆಮ್ಮದಿಯಿಂದ ಬದುಕುವ ದಾರಿ ಕಾಣದೆ ಅಮಾಯಕ ಆದಿವಾಸಿ ಯುವಕ ಸಶಸ್ತ್ರದಳದ ಸಾಮಾನ್ಯ ಸದಸ್ಯನಾದ ಎಂದು ಆತನ ಹೋರಾಟ ಕಂಡವರು ಹೇಳುತ್ತಾರೆ.

ಅನೇಕ ಆದಿವಾಸಿ ಯುವಕರು ನಕ್ಸಲ್‌ ಚಳವಳಿಗೆ ಆಕರ್ಷಿತರಾಗಿ ಸಶಸ್ತ್ರ ದಳಗಳನ್ನು ಸೇರುವಂತಹ ಪರಿಸ್ಥಿತಿ ನಿರ್ಮಿಸಿದ್ದು ಸರ್ಕಾರದ ನೀತಿಗಳು. ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ಕಾಡಿನಲ್ಲಿರುವ ಜನರನ್ನೆಲ್ಲಾ ಖಾಲಿ ಮಾಡಿಸಲು ಹೊರಟ ಸರ್ಕಾರದ ನೀತಿಯೇ ವಿಕ್ರಂ ಗೌಡನ ತರಹದ ಯುವಕರು ನಕ್ಸಲರಾಗಲು ಕಾರಣ ಎಂಬುದು ತೆರೆದ ಸತ್ಯ. ಕಾಡಿನ ಜೊತೆ ಬದುಕುತ್ತಿದ್ದವರನ್ನು ಕಾಡಿನಿಂದ ಪ್ರತ್ಯೇಕಿಸಲು ಹೊರಟಿದ್ದಲ್ಲದೇ, ಅವರ ಪ್ರಜಾತಾಂತ್ರಿಕ ಹೋರಾಟಗಳಿಗೆ ಕಿವಿಗೊಡಲಿಲ್ಲ. ಯಾವುದೇ ಜನ ಬಲ, ಜಾತಿ ಬಲ, ಹಣ ಬಲ ಇಲ್ಲದ ಬಡ ಆದಿವಾಸಿಗಳಿಗೆ ಅರಣ್ಯ ಇಲಾಖೆಯಿಂದ ಆಗುತ್ತಿದ್ದ ಕಿರುಕುಳದಿಂದ ರೊಚ್ಚಿಗೆದ್ದ ಹಲವು ಯುವಕರು ನಕ್ಸಲ್‌ ದಳಗಳಿಗೆ ಸೇರಿದರು. ವಿಕ್ರಂ ಗೌಡರ ಕುಟುಂಬಕ್ಕೆ ಇದ್ದ ಅರ್ಧ ಎಕರೆಗಿಂತಲೂ ಕಡಿಮೆ ಜಾಗವನ್ನೂ ಖಾಲಿ ಮಾಡಿಸುವ ನೋಟಿಸ್‌ ನೀಡಲಾಗಿತ್ತು. ಅಂತಿಮ ಆಯ್ಕೆಯಾಗಿ ಹೋರಾಟ ಅನಿವಾರ್ಯವಾಗಿತ್ತು.

“ಸಶಸ್ತ್ರ ಹೋರಾಟ ಬಿಟ್ಟು ಮುಖ್ಯವಾಹಿನಿಗೆ ಮರಳಿ” ಎಂಬ ಸರ್ಕಾರದ ಕರೆ ಕೇವಲ ಕಣ್ಣೊರೆಸುವ ತಂತ್ರವಷ್ಟೇ ಆಗಿದೆ. ಸರ್ಕಾರ ಪುನರ್ವಸತಿ ಕಲ್ಪಿಸುವುದಾಗಿ, ಕೇಸುಗಳನ್ನು ವಾಪಸ್‌ ಪಡೆಯುವುದಾಗಿ ಭರವಸೆ ನೀಡುತ್ತದೆ. ಆದರೆ, ಹೊರಬಂದ ಮೇಲೆ ಅವರಿಗೆ ಇನ್ನಷ್ಟು ಸಮಸ್ಯೆ, ಸಂಕಟ ಎದುರಾಗುತ್ತದೆ. ಇದಕ್ಕೆ ಕರ್ನಾಟಕದ ಉದಾಹರಣೆ ನಮ್ಮ ಮುಂದಿದೆ. 2014-2018ರ ನಡುವೆ ಹೆಚ್.‌ ಎಸ್.‌ ದೊರೆಸ್ವಾಮಿ, ಎ.ಕೆ. ಸುಬ್ಬಯ್ಯ ಹಾಗೂ ಗೌರಿ ಲಂಕೇಶ್‌ ಅವರಿದ್ದ ಸಮಿತಿ ಸರ್ಕಾರ ಮತ್ತು ನಕ್ಸಲ್‌ ಹೋರಾಟಗಾರರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಿ ಕೆಲವರನ್ನು ಮುಖ್ಯವಾಹಿನಿಗೆ ಕರೆತಂದಿತು. ಹಾಗೆ ಬಂದ ಸಿರಿಮನೆ ನಾಗರಾಜ್‌ ಮತ್ತು ನೂರ್‌ ಶ್ರೀಧರ್‌ ಈಗಲೂ ಪ್ರಜಾಸತ್ತಾತ್ಮಕ ಚಳವಳಿಯ ಭಾಗವಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಸರ್ಕಾರದ ಮುಂದೆ ಶರಣಾದ ಹಲವು ಬಡಪಾಯಿಗಳ ಬದುಕು ನರಕವಾಗಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಹೊರಬಂದ ಹಲವರನ್ನು ನಂತರ ಬಂದ ಬಿಜೆಪಿ ಸರ್ಕಾರ ಜೈಲಿಗಟ್ಟಿದೆ. ಆದಿವಾಸಿ ಯುವತಿ ಕನ್ಯಾಕುಮಾರಿ 8 ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾರೆ. ಆಕೆಯನ್ನು ಜೈಲಿಗೆ ಹಾಕುವಾಗ ಒಂದು ವರ್ಷದ ಮಗು ಕಂಕುಳಲ್ಲಿತ್ತು. ಆರು ವರ್ಷಗಳ ಕಾಲ ಆ ಕೂಸು ಪರಪ್ಪನ ಅಗ್ರಹಾರ ಜೈಲಿನ ಗೋಡೆಗಳಾಚೆಗಿನ ಜಗತ್ತನ್ನು ಕಂಡಿರಲಿಲ್ಲ. ಈಗ ಪತಿ ಆಟೋ ಡ್ರೈವರ್‌ ಆಗಿದ್ದು ಮಗುವಿನ ಪಾಲನೆ ಮಾಡುತ್ತಾ ಪತ್ನಿಯ ಕೇಸಿಗಾಗಿ ಕೋರ್ಟಿಗೆ ಅಲೆಯುತ್ತಿದ್ದಾರೆ. ಆಕೆಯ ಮೇಲೆ ಸುಮಾರು 58 ಕೇಸುಗಳಿವೆಯಂತೆ. ಆ ಯುವತಿಯ ಮೇಲೆ ಅಷ್ಟು ಕೇಸುಗಳು ಯಾವ ಅಪರಾಧಕ್ಕಾಗಿ? ಜಾಮೀನಿನ ಮೇಲೆ ಹೊರಗಿರುವ ಕೊಪ್ಪದ ಒಂದು ಕಾಲಿಲ್ಲದ ಪದ್ಮನಾಭರಿಗೆ ಕಳೆದ 8 ವರ್ಷಗಳಿಂದ ಕೋರ್ಟಿಗೆ ಅಲೆಯುವುದೇ ಕೆಲಸವಾಗಿದೆ. ಸರ್ಕಾರದ ಪ್ಯಾಕೇಜ್‌ ನಂಬಿ ಶರಣಾದ ಮತ್ತೊಬ್ಬರಿಗೆ ವರ್ಷದ ನಂತರ ಸರ್ಕಾರದಿಂದ ಬಂದ 1ಲಕ್ಷ ರೂಪಾಯಿ ಪರಿಹಾರದಲ್ಲಿ ವಕೀಲರ ಶುಲ್ಕ ಎಂದು 88,000 ರೂ. ಪಾವತಿಸಬೇಕಾಯ್ತಂತೆ! ಇದು ಸರ್ಕಾರವೊಂದು ಆದಿವಾಸಿ ಹಕ್ಕುಗಳ ಹೋರಾಟಗಾರರನ್ನು ನಡೆಸಿಕೊಳ್ಳುವ ರೀತಿಯೇ? ಅವರ ಬದುಕು ಕಾಡಿನಿಂದ ಹೊರಬಂದ ನಂತರ ನರಕವಾಗುವುದೇ ಆದರೆ, ಅವರು ಯಾಕೆ ಮುಖ್ಯವಾಹಿನಿಗೆ ಬರುವ ಮನಸ್ಸು ಮಾಡುತ್ತಾರೆ? ಬನ್ನಿ ಎಂದು ಕರೆಯುವ ನೈತಿಕತೆ ಸರ್ಕಾರಕ್ಕೆ ಇದೆಯೇ?

ಹೊರಗೆ ಬಂದವರ ಬದುಕು ಕಾಡಿನಲ್ಲಿರುವ ನಕ್ಸಲರಿಗೆ ಪ್ರೇರಣೆ ನೀಡುವಂತಿರಬೇಕು. ಆಚೆ ಬಂದ ತಮ್ಮ ಸಂಗಾತಿಗಳ ಪರಿಸ್ಥಿತಿ ಹೀಗಿರುವಾಗ ಈ ಹೃದಯಹೀನ ಸರ್ಕಾರದ ಮಾತುಗಳನ್ನು ನಂಬಿ ಯಾವ ನಕ್ಸಲರು ಹೊರಬರುತ್ತಾರೆ? ಬಹುತೇಕ ನಕ್ಸಲರು ಬಡ ಕುಟುಂಬದವರು, ಆದಿವಾಸಿಗಳು, ಅನಕ್ಷರಸ್ಥರು. ಕಾಡಿನಿಂದ ಹೊರ ಬಂದರೆ ಅವರಿಗೆ ಯಾವ ಬಗೆಯ ಹೊಸ ಬದುಕು ಕಲ್ಪಿಸಿಕೊಡಲಿದ್ದೀರಿ ಎಂದು ಸರ್ಕಾರಗಳು ಸ್ಪಷ್ಟಪಡಿಸಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಬಡತನದ ಬದಲು ಬಡವರನ್ನು ನಿರ್ಮೂಲನೆ ಮಾಡುವ ಅಮಾನವೀಯ ನಡೆಯನ್ನು ಇನ್ನಾದರೂ ಕೈಬಿಡಬೇಕು. ಈ ನೆಲದ ಮಕ್ಕಳನ್ನು ಹೊರಗಿಟ್ಟು ಅದ್ಯಾವ ಅಭಿವೃದ್ಧಿ ಮಾಡಲಿದ್ದೀರಿ? ವಿಕ್ರಂ ಗೌಡರಂತಹ ಅಮಾಯಕ ಆದಿವಾಸಿಗಳು ಎನ್‌ಕೌಂಟರ್‌ಗೆ ಬಲಿಯಾಗಬಾರದು. ಅವರನ್ನು ಶಸ್ತ್ರಸಜ್ಜಿತ ಹೋರಾಟಕ್ಕೆ ಹೋಗದಂತೆ ತಡೆಯುವುದು ಎಲ್ಲರ ಜವಾಬ್ದಾರಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X