ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಳ್ಳಿಗಳಲ್ಲಿ, ನಗರ ವ್ಯಾಪ್ತಿಯ ವಾರ್ಡ್ ಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವಂತೆ ಒತ್ತಾಯಿಸಿ ಬಹುಜನ ಸಮಾಜ ಪಕ್ಷ ವಿಧಾನಸಭಾ ಘಟಕ ಚಿಂಚೋಳಿ ವತಿಯಿಂದ ತಹಸೀಲ್ದಾರ್ ಹಾಗೂ ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸಿ ವೈಜನಾಥ ಬಿ ಮಿತ್ರಾ ಮಾತನಾಡಿ, “ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಮತ್ತು ನಗರದ ವಾರ್ಡ್‌ಗಳಲ್ಲಿ ವೈನ್ ಶಾಪ್ ಮತ್ತು ಬಾರ್‌ಗಳಿಂದ ಮದ್ಯ ಖರೀದಿಸಿ ಹಳ್ಳಿ ಮತ್ತು ವಾರ್ಡ್‌ಗಳ ದಿನಸಿ ಅಂಗಡಿ, ಪಾನ್ ಶಾಪ್, ಚಹಾ ಅಂಗಡಿಗಳಲ್ಲಿ ಮತ್ತು ಇನ್ನು ಕೆಲವರು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಮನೆಯಲ್ಲಿಯೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹಳ್ಳಿಗಳಲ್ಲಿ ದಿನದ 24 ಗಂಟೆಗಳ ಕಾಲ ಮದ್ಯ ದೊರಕುತ್ತಿದೆ. ಹಾಗಾಗಿ, ಅಲ್ಲಿನ ಕೆಲ ಜನರು, ಕಾರ್ಮಿಕರು ಬೆಳಗ್ಗೆ 6 ಗಂಟೆಯಿಂದ ರಾತ್ರಿಯವರೆಗೂ ಕುಡಿದುಕೊಂಡು ಕೆಲಸಕ್ಕೂ ಹೋಗದೆ ನಶೆಯಲ್ಲಿ ತೇಲಾಡುತ್ತಾ, ಕುಡಿತ ಚಟವನ್ನಾಗಿಸಿಕೊಂಡು ಸಾಲ ಮಾಡಿಕೊಳ್ಳುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.
ಇದರಿಂದಾಗಿ ಸುಮಾರು ಕುಟುಂಬಗಳು ಬೀದಿಪಾಲಾಗುವುದರ ಜೋತೆಗೆ ಕೌಟುಂಬಿಕ ಹಾಗೂ ಸಾಮಾಜಿಕ ಕಲಹಗಳು ಹೆಚ್ಚಾಗಿ ಅಶಾಂತಿ ಮೂಡುತ್ತಿದೆ. ಸಣ್ಣ ಪುಟ್ಟ ಮಕ್ಕಳು ಹಾಗೂ ವಿದ್ಯಾರ್ಥಿಗಳ ಮೇಲೆ ಇದು ಪ್ರಭಾವ ಬೀರಿ ದಾರಿ ತಪ್ಪುವಂತೆ ಮಾಡುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದಲ್ಲಿ ಪುಜ್ಞಾವಂತರೆನಿಸಿಕೊಂಡಿರುವ ನಾವು ನೀವುಗಳು ಇದನ್ನು ಗಮನಹರಿಸದಿರುವುದು ನಿಜವಾಗಿಯೂ ದುರಂತವೆನಿಸುತ್ತದೆ. ಇನ್ನೂ ವೈನ್ ಶಾಪ್ ಮತ್ತು ಬಾರ್ ಗಳ ಮಾಲೀಕರು ರಾಜಾರೋಷವಾಗಿ ತರಕಾರಿ ಮಾರುವಂತೆ ಮದ್ಯ ಕೂಡ ಪ್ರತಿ ಹಳ್ಳಿಗಳ ಅಂಗಡಿ ಮತ್ತು ಹೋಟೆಲ್‌ಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಮದ್ಯ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ಮೌನವಹಿಸಿ ಏನು ಗೊತ್ತಿಲ್ಲದಂತೆ ಇದ್ದು, ಈ ಅವ್ಯವಹಾರಕ್ಕೆ ಅಬಕಾರಿ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.
ಹಳ್ಳಿಗಳಲ್ಲಿ ಮತ್ತು ವಾರ್ಡ್ ಗಳಲ್ಲಿ ಶಾಂತ ರೀತಿಯ ವಾತಾವರಣ ಸೃಷ್ಟಿ ಮಾಡಲು ಈ ಮೂಲಕ ಬಹುಜನ ಸಮಾಜ ಪಕ್ಷ ಚಿಂಚೋಳಿ ಘಟಕ ಒತ್ತಾಯಿಸುತ್ತದೆ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳಿಗೆ ತಾಲೂಕು ಆಡಳಿತ ಇದಕ್ಕೆ ನೇರ ಜವಾಬ್ದಾರಿ ಎಂದು ದೂರಿದರು.
ಇದನ್ನು ಓದಿದ್ದೀರಾ? ಹಾಸನ l ನಿಖಿಲ್ ಕುಮಾರಸ್ವಾಮಿ ಸೋಲಿಗೆ ಜೆಡಿಎಸ್ ನಾಯಕರೇ ಕಾರಣ: ಸಂಸದ ಶ್ರೇಯಸ್ ಪಟೇಲ್
“ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಈ ಹೋರಾಟವನ್ನು ರೂಪಿಸಲಾಗುತ್ತದೆ ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಅಬಕಾರಿ ಇಲಾಖೆ ಸಚಿವರ ಗಮನಕ್ಕೂ ತಂದು ಇದನ್ನು ತಡೆಗಟ್ಟುವವರೆಗೂ ಪಕ್ಷದ ಹೋರಾಟ ನಿರಂತರವಾಗಿ ನಡೆಯುತ್ತಲೇ ಇರುತ್ತದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌತಮ ಬಿ ಬೊಮ್ಮನಳ್ಳಿ, ಸುಶೀಲ್ ಬೊಮ್ಮನಳ್ಳಿ, ರಾಜು ಮಸಾನಿ, ವಿವೇಕಾನಂದ ಹೊಸಮನಿ, ಎಸ್ ಕೆ ಮಹಬೂಬ್, ಲಕ್ಷ್ಮೀಕಾಂತ ಐನಾಪುರ, ರಾಜೇಂದ್ರ ಹೊಸಮನಿ, ಸಂಜುಕುಮಾರ್ ಜಟ್ಟೆನೋರ್, ಅಕ್ಷಯ ಕುಮಾರ್ ಬೋಮ್ಮನಳ್ಳಿ, ಶ್ರೀಮಂತ ಠಾಕೋರ್, ಶಂಕರ್ ಐನಾಪುರ, ಪ್ರಜ್ವಲ್ ಐನಾಪುರ, ಸುಭಾಸ್ ಗೌಡನಹಳ್ಳಿ, ವಿಲಾಸ್ ಕುಮಾರ್, ನಾಗು, ಕೃಷ್ಣ, ಶಿವಲಿಂಗ ಇತರರು ಇದ್ದರು.