ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯ ಗಳಿಸುತ್ತಿದ್ದಂತೆ ಟ್ರಂಪ್ನ ಆತ್ಮೀಯ ಎಲಾನ್ ಮಸ್ಕ್ ಖಜಾನೆ ಇನ್ನಷ್ಟು ತುಂಬುತ್ತಿದೆ. ಅಮೆರಿಕ ಚುನಾವಣೆ ಬಳಿಕ ವಾಲ್ಸ್ಟ್ರೀಟ್ನಲ್ಲಿ ಟೆಸ್ಲಾ ಷೇರು ಭಾರೀ ಜಿಗಿತ ಕಂಡಿದ್ದು, ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಆದಾಯವು ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರಕ್ಕಾಗಿ ಮಸ್ಕ್ ಸುಮಾರು 100 ಮಿಲಿಯನ್ ಡಾಲರ್ ದೇಣಿಗೆಯಾಗಿ ನೀಡಿದ್ದರು.
ಫೋರ್ಬ್ಸ್ ಪ್ರಕಾರ ಎಲಾನ್ ಮಸ್ಕ್ ಆದಾಯವು ಸುಮಾರು 321.7 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಅಮೆರಿಕದಲ್ಲಿ ಚುನಾವಣೆ ನಡೆದ ದಿನದಂದ ಟೆಸ್ಲಾ ಸ್ಟಾಕ್ ಸುಮಾರು ಶೇಕಡ 40ರಷ್ಟು ಏರಿಕೆಯಾಗಿದೆ. ವಾಲ್ಸ್ಟ್ರೀಟ್ನಲ್ಲಿ ವಾರದ ವಹಿವಾಟಿನ ಕೊನೆಯ ದಿನವಾದ ಶುಕ್ರವಾರವೇ ಸುಮಾರು ಶೇಕಡ 3.8ರಷ್ಟು ಜಿಗಿತ ಕಂಡು 352.56 ಡಾಲರ್ಗೆ ವಹಿವಾಟು ಸ್ಥಗಿತಗೊಳಿಸಿದೆ. ಈ ಮೂಲಕ ಟೆಸ್ಲಾ ಷೇರು ಮೂರು ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ಇದನ್ನು ಓದಿದ್ದೀರಾ? ಅಮೆರಿಕ ಚುನಾವಣೆ | ಟ್ರಂಪ್ ಗೆಲುವು; ಎಲಾನ್ ಮಸ್ಕ್ನ ಟೆಸ್ಲಾ ಷೇರು ಭಾರೀ ಏರಿಕೆ!
ಶುಕ್ರವಾರ ಮಸ್ಕ್ ಆದಾಯಕ್ಕೆ 7 ಬಿಲಿಯನ್ ಡಾಲರ್ ಆದಾರ ಸೇರ್ಪಡೆಯಾಗಿದೆ. ಈ ಹಿಂದೆ 2021ರ ನವೆಂಬರ್ನಲ್ಲಿ ಕೋವಿಡ್ ಸಂದರ್ಭದಲ್ಲಿ ಟೆಸ್ಲಾ ಷೇರು 320.3 ಬಿಲಿಯನ್ ಡಾಲರ್ಗೆ ತಲುಪಿತ್ತು. ಇದೀಗ ಟೆಸ್ಲಾ ಷೇರು ಮೌಲ್ಯ 352.56 ಡಾಲರ್ ಆಗಿದೆ.
ಟೆಸ್ಲಾ ಮಾತ್ರವಲ್ಲ ಎಐ (ಕೃತಕ ಬುದ್ಧಿಮತ್ತೆ) ಮತ್ತು ಏರೋಸ್ಪೇಸ್ ಕೂಡಾ ಎಲಾನ್ ಮಸ್ಕ್ ಆದಾಯಕ್ಕೆ ಕೊಡುಗೆ ನೀಡಿದೆ. ಎಐನಿಂದ 13 ಬಿಲಿಯನ್ ಡಾಲರ್ ಆದಾಯವನ್ನು ಮಸ್ಕ್ ಗಳಿಸಿದ್ದಾರೆ. ಸ್ಪೇಸ್ಎಕ್ಸ್ನಿಂದ 88 ಬಿಲಿಯನ್ ಡಾಲರ್ ಪಡೆದಿದ್ದಾರೆ.
ಟಾಪ್ 10ರಲ್ಲೂ ಇಲ್ಲ ಅದಾನಿ, ಅಂಬಾನಿ
ಹಿಂಡನ್ಬರ್ಗ್ ವರದಿ ಬಳಿಕ ಅದಾನಿ ಷೇರುಗಳು ಭಾರೀ ಇಳಿಕೆಯಾಗಿದೆ. ಇದರಿಂದಾಗಿ ಗೌತಮ್ ಅದಾನಿ ಆದಾಯ ಕುಗ್ಗಿದೆ. ಪೋರ್ಬ್ಸ್ನ ಪ್ರಕಾರ ಗೌತಮ್ ಅದಾನಿ ವಿಶ್ವದ 27ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇನ್ನು ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಪೋರ್ಬ್ಸ್ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದ್ದಾರೆ. ಟಾಪ್ 10ರಲ್ಲಿ ಇಬ್ಬರೂ ಇಲ್ಲ.
