ಮೋದಿ-ಅದಾನಿ ಸಂಬಂಧದ ಬಗ್ಗೆ ಇಡೀ ಜಗತ್ತು ಮಾತನಾಡುತ್ತಿದೆ. ಅದಾನಿ ಬೆನ್ನಿಗೆ ಭಾರತದ ಪ್ರಧಾನಿ ನಿಂತಿದ್ದಾರೆ ಎಂಬ ನಿರ್ಲಜ್ಜ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಇದು, ಭಾರತದ ಇಮೇಜ್‌ಗೆ ಸ್ಪಷ್ಟವಾಗಿ ದಕ್ಕೆ ಉಂಟುಮಾಡುತ್ತಿದೆ. ಈಗಲಾದರೂ, ಮೋದಾನಿ ಸಂಬಂಧದ ಬಗ್ಗೆ ತನಿಖೆ ನಡೆಸಬೇಕಿದೆ.
ಕಳೆದ ಹಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ನಡುವಿನ ಆತ್ಮೀಯತೆ, ಸಂಬಂಧದ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಭಾರತದ ರಾಜಕೀಯ ಇತಿಹಾಸರಲ್ಲಿ ಪ್ರಧಾನಿ ಮತ್ತು ಉದ್ಯಮಿ ನಡುವಿನ ಸಂಬಂಧವು ಮೋದಿ-ಅದಾನಿಯಂತೆ ಹಿಂದೆಂದೂ ಇರಲಿಲ್ಲ. ಪ್ರಧಾನಿ ಮತ್ತು ಉದ್ಯಮಿ ನಡುವೆ ಒಂದು ಅಂತರವಿತ್ತು. ಆದರೆ, ಮೋದಿ ಅಧಿಕಾರಕ್ಕೆ ಬಂದ ಬಳಿಕ, ಈ ಅಂತರ ಕಾಣೆಯಾಗಿದೆ. ಮೋದಿಗೆ ಅದಾನಿ ಅತ್ಯಾಪ್ತರಾಗಿದ್ದಾರೆ. ಮೋದಿ-ಅದಾನಿ ನಡುವಿನ ಸಂಬಂಧ, ಅದಾನಿಗಾಗಿ ಮೋದಿ ಕೆಲಸ ಮಾಡುತ್ತಿರುವ ಬಗೆಯನ್ನು ಜನರ ಮುಂದಿಡಲು ವಿಪಕ್ಷಗಳು ‘ಮೋದಾನಿ’ ಎಂಬ ಪದಗುಚ್ಛವನ್ನು ಸೃಷ್ಟಿಸಿವೆ. ಭಾರತೀಯ ರಾಜಕಾರಣದಲ್ಲಿ ‘ಮೋದಾನಿ’ ಪದ ಸದ್ದು ಮಾಡುತ್ತಿದೆ.
ಇತ್ತೀಚೆಗೆ, ಅಮೆರಿಕದ ನ್ಯಾಯಾಲಯವು ಅದಾನಿಯನ್ನು ಸುಳ್ಳುಗಾರ, ವಂಚಕ ಎಂದು ಕರೆದಿದೆ. ಸರ್ಕಾರಕ್ಕೆ ನವೀಕರಿಸಬಹುದಾದ ವಿದ್ಯುತ್ ಪೂರೈಕೆ ಮಾಡಿ, 20 ವರ್ಷಗಳಲ್ಲಿ ಸುಮಾರು 17,000 ಕೋಟಿ ರೂ. ಲಾಭ ಮಾಡುವ ಗುರಿ ಅದಾನಿಯದಾಗಿತ್ತು. ಈ ಬಹುಕೋಟಿ ರೂ. ಮೌಲ್ಯದ ಗುತ್ತಿಗೆ ಪಡೆಯಲು ಅದಾನಿ ಭಾರತೀಯ ಅಧಿಕಾರಿಗಳಿಗೆ ಬರೋಬ್ಬರಿ 2,029 ಕೋಟಿ ರೂ. ಲಂಚ ನೀಡಿದ್ದಾರೆ. ಲಂಚ ಪಾವತಿಸಲು ಅಮೆರಿಕದ ಉದ್ಯಮಿಗಳಿಗೆ ಸುಳ್ಳು ಹೇಳಿ, ಬಂಡವಾಳ ಸಂಗ್ರಹಿಸಿದ್ದಾರೆ. ಲಂಚಕ್ಕೆ ಹಣ ಪಡೆದು, ಅಮೆರಿಕದ ಹೂಡಿಕೆದಾರರಿಗೆ ವಂಚಿಸಿದ್ದಾರೆ ಎಂದು ಅಮೆರಿಕದ ನ್ಯೂಯಾರ್ಕ್ ಪೂರ್ವ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಅದಾನಿ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಹೊರಡಿಸಿದೆ.
ವಾರೆಂಟ್ ಜಾರಿಯಾದ ಬೆನ್ನಲ್ಲೇ ‘ಅದಾನಿ-ಮೋದಿ-ಸೆಬಿ’ ಸಂಬಂಧದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಅಧಿಕಾರಿಗಳಿಗೆ ನೀಡಿದ ಲಂಚ, ಒಪ್ಪಂದ ಹಾಗೂ ಬಿಡ್‌ಗಳಲ್ಲಿಯೂ ಮೋದಿ ಮತ್ತು ಸೆಬಿಯ ಹಸ್ತಕ್ಷೇಪ ಇರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಹತ್ತಾರು ಕಾರಣಗಳೂ ಇವೆ. ಅದಾನಿ ಸಮೂಹದ ಅನೈತಿಕ ಮಾರ್ಗಗಳ ಬಗ್ಗೆ ಅಮೆರಿಕ ನ್ಯಾಯಾಲಯ ಗಮನ ಸೆಳೆಯುವುದಕ್ಕೂ ಮುನ್ನವೇ, 2023ರ ಕೇಂದ್ರ ಬಜೆಟ್ ಅಧಿವೇಶನದ ವೇಳೆ ಸಂಸತ್ತಿನಲ್ಲಿ, “ಮೋದಿ-ಅದಾನಿ ಭಾಯಿ-ಭಾಯ್/ದೇಶ್ ಬೆಚ್ ಕೆ ಖಾಯೆ ಮಲೈ” ಮುಂತಾದ ಅನಪೇಕ್ಷಿತ ಘೋಷಣೆಗಳು ಕೇಳಿಬಂದವು.
ಅಚ್ಚರಿಯ ಸಂಗತಿಯೆಂದರೆ, ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಮೋದಿ-ಅದಾನಿ ನಡುವಿನ ಅಪವಿತ್ರ ಸಂಬಂಧದ ಬಗ್ಗೆ ಕಾಂಗ್ರೆಸ್ ನಿರಂತರವಾಗಿ ಆರೋಪಗಳನ್ನು ಮಾಡುತ್ತಿತ್ತು. ಆದರೂ, ಮೋದಿಯಂತಹ ಚಾಣಾಕ್ಷ ರಾಜಕಾರಣಿ ಅದಾನಿ ಜೊತೆಗಿನ ತನ್ನ ವೈಯಕ್ತಿಕ ಆತ್ಮೀಯತೆ ಬಗೆಗಿನ ಕಾಂಗ್ರೆಸ್ ಆರೋಪವನ್ನು ಅಲ್ಲಗಳೆಯಲು ಸಾಧ್ಯವಾಗಲಿಲ್ಲ. 2014ಕ್ಕಿಂತ ಮುಂಚೆಯೇ, ಗುಜರಾತ್‌ನಲ್ಲಿ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್) ನಿರ್ಮಿಸಲು ಅದಾನಿಗೆ ಮೋದಿ ಅಗ್ಗದ ಬೆಲೆಗೆ (ಪ್ರತಿ ಚದರ ಮೀಟರ್‌ಗೆ 1 ರೂ.ನಿಂದ 32 ರೂ.) ಭೂಮಿ ನೀಡಿದ್ದಾರೆ. ಅದಾನಿಗೆ ಎಲ್ಲ ಸೌಕರ್ಯಗಳನ್ನು ಪುಕ್ಕಟ್ಟೆಯಾಗಿ ನೀಡಿದ್ದರಿಂದಲೂ ಮೋದಿಯನ್ನು ಮಹಾನ್ ಆಡಳಿತಗಾರ, ಸುಧಾರಕನೆಂದು ದೇಶಾದ್ಯಂತ ಬಿಂಬಿಸುವ ಕೆಲಸವನ್ನು ಕಾರ್ಪೊರೇಟ್ ಹೌಸ್ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಅದಾನಿ-ಮೋದಿ ಸಂಬಂಧದ ಬಗ್ಗೆ ನಿರಂತರವಾಗಿ ಮಾತನಾಡುತ್ತಿರುವ ರಾಹುಲ್ ಗಾಂಧಿ, ‘ಈ ಇಬ್ಬರೂ ಒಂದೇ. ಅವರು ಪರಸ್ಪರ ಹಿತಾಸಕ್ತಿಗಳನ್ನು ಪೋಷಿಸಲು ಮತ್ತು ಪೂರೈಸಲು ಕೆಲಸ ಮಾಡುತ್ತಿದ್ದಾರೆ’ ಎಂದು ಹಲವಾರು ಸಂದರ್ಭಗಳಲ್ಲಿ ಪುನರುಚ್ಛರಿಸಿದ್ದಾರೆ. 2021ರ ಫೆಬ್ರವರಿ 11ರಂದು ಲೋಕಸಭೆಯಲ್ಲಿ ಮಾತನಾಡಿದ್ದ ರಾಹುಲ್, ‘ದೇಶವನ್ನು ನಾಲ್ಕು ಮಂದಿ ಆಳುತ್ತಿದ್ದಾರೆ – ನರೇಂದ್ರ ಮೋದಿ ಮತ್ತು ಅಮಿತ್ ಶಾ, ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ- ಇವರದ್ದು ನಾವಿಬ್ಬರು ನಮಗಿಬ್ಬರು ಸೂತ್ರ’ವೆಂದು ಟೀಕಿಸಿದ್ದರು.
2001ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ ಅದಾನಿ ತುಂಬಾ ಚಿಕ್ಕ ಉದ್ಯಮಿಯಾಗಿದ್ದರು. ಮೋದಿಗೆ ಭಾರೀ ರಾಜಕೀಯ ಪ್ರೋತ್ಸಾಹಗಳು ದೊರೆತು, 2014ರ ವೇಳೆಗೆ ಪ್ರಧಾನಿಯಾದಾಗಲೂ ಅದಾನಿಯ ಏರಿಕೆಯು ಗಮನಾರ್ಹವಾಗಿರಲಿಲ್ಲ. 2014ರಲ್ಲಿ, ಅದಾನಿಯ ನಿವ್ವಳ ಆಸ್ತಿಯ ಮೌಲ್ಯವು 280 ಕೋಟಿ ಡಾಲರ್ ಆಗಿತ್ತು. ಆಗ, ಫೋರ್ಬ್‌ನ ಪಟ್ಟಿಯಲ್ಲಿ ಅದಾನಿ ಭಾರತದ 11ನೇ ಶ್ರೀಮಂತರಾಗಿದ್ದರು. ಆದರೆ, ಕಳೆದ ಹತ್ತು ವರ್ಷಗಳಲ್ಲಿ, ಮೋದಿ ಪ್ರಧಾನಿ ಆದ ಬಳಿಕ ಅದಾನಿಯ ಆಸ್ತಿ ನಾಲ್ಕೈದು ಪಟ್ಟು ಹಿಗ್ಗಿದೆ. 2022ರ ಏಪ್ರಿಲ್ ವೇಳೆಗೆ ಅದಾನಿ ವಿಶ್ವದ 2ನೇ ಅತೀದೊಡ್ಡ ಶ್ರೀಮಂತರಾದರು. ಅವರ ಆಸ್ತಿಯು 900 ಕೋಟಿ ಡಾಲರ್‌ಗೆ ಏರಿಕೆಯಾಯಿತು.
ಈ ಬೃಹತ್ ಬದಲಾವಣೆಯ ಬಗ್ಗೆ ರಾಹುಲ್ ಗಾಂಧಿ ಮತ್ತು ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ಸಂಸತ್‌ನಲ್ಲಿ ಚರ್ಚೆಗೆ ಎಳೆದರು. ಭಾರತ ಮತ್ತು ವಿದೇಶಗಳಲ್ಲಿ ತನ್ನ ಸ್ನೇಹಿತ ಅದಾನಿಯನ್ನು ಬೆಳೆಸಲು ಮೋದಿ ಅವರು ಪ್ರಧಾನ ಮಂತ್ರಿ ಕಚೇರಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಆ ಕಾರಣಕ್ಕೆ, ರಾಹುಲ್ ಮತ್ತು ಮೊಯಿತ್ರಾರನ್ನು ಸಂಸತ್‌ನಿಂದ ಲಜ್ಜೆಗೇಡಿತನದಿಂದ ಮೋದಿ ಸರ್ಕಾರ ಅಮಾನತುಗೊಳಿಸಿತು.
ಈ ನಡುವೆ, ಹಿಂಡೆನ್ ಬರ್ಗ್‌ನ ತನಿಖಾ ವರದಿಯು ಅದಾನಿ ಗ್ರೂಪ್‌ನ ಭಾರೀ ಹಗರಣವನ್ನು ಬಯಲಿಗೆ ಎಳೆಯಿತು. ಆ ವರದಿ ಆಧರಿಸಿ ಅದಾನಿಯ ಧೋಖಾ, ಮೋದಿ-ಅದಾನಿ ಸಂಬಂಧದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕೆಂದು ವಿಪಕ್ಷಗಳು ಆಗ್ರಹಿಸಿದವು. ಆದರೆ, ಮೋದಿ ಸರ್ಕಾರ ಅದನ್ನು ತಿರಸ್ಕರಿಸಿತು. ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಲು ಮೋದಿ ಯಾವುದೇ ಪ್ರಯತ್ನ ಮಾಡಲಿಲ್ಲ. ಸಂಸತ್ತಿನಲ್ಲಿ ಚರ್ಚೆಗೂ ಅವಕಾಶ ನೀಡಲಿಲ್ಲ.
ಈ ವರದಿ ಓದಿದ್ದೀರಾ?: ಅಮೆರಿಕದಲ್ಲಿ ಟ್ರಂಪ್ ಆಡಳಿತ; ಜಾಗರೂಕವಾಗಿರಬೇಕಿದೆ ಭಾರತ!
ಮೋದಿ-ಅದಾನಿ (ಮೋದಾನಿ) ಮೇಲಿನ ಆರೋಪಗಳು ನಿರ್ಲಕ್ಷಿಸಲಾಗದಷ್ಟು ಗಂಭೀರವಾಗಿವೆ- ಬಂದರುಗಳು, ವಿಮಾನ ನಿಲ್ದಾಣಗಳು, ವಿದ್ಯುಚ್ಛಕ್ತಿ, ಗಣಿಗಾರಿಕೆ, ಮೂಲಸೌಕರ್ಯ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ತನ್ನ ವ್ಯಾಪಾರ ಹಿತಾಸಕ್ತಿಗಳನ್ನು ವಿಸ್ತರಿಸಲು ಅದಾನಿಗೆ ಮೋದಿ ಸಹಾಯ ಮಾಡಿದ್ದಾರೆ. ಅದಕ್ಕಾಗಿ, ಪ್ರಧಾನಿ ಕಚೇರಿ ಮತ್ತು ಭಾರತದ ರಾಜತಾಂತ್ರಿಕ ವ್ಯವಸ್ಥೆಯನ್ನು ಬಳಸಿಕೊಂಡಿದ್ದಾರೆ. ಮೋದಿ ಹೋದಲ್ಲೆಲ್ಲಾ ಕಾರ್ಪೊರೇಟ್ ಕಂಪನಿಗಳ ಯೋಜನೆಗಳು ಮತ್ತು ಒಪ್ಪಂದಗಳು ನಡೆದಿವೆ. ಅಲ್ಲಿ, ಅದಾನಿಗೆ ಹೆಚ್ಚಿನ ಒಪ್ಪಂದಗಳನ್ನು ನೀಡಲಾಗಿದೆ. ಆ ಕಾರಣಕ್ಕಾಗಿ ಅಮೆರಿಕ, ಶ್ರೀಲಂಕಾ, ಬಾಂಗ್ಲಾದೇಶ, ಕೀನ್ಯಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಮೋದಿ-ಅದಾನಿ ಬಗೆಗೆ ಟೀಕೆಗಳು ವ್ಯಕ್ತವಾಗಿವೆ. ಆದರೆ, ಮೋದಿ ಅವರು ನಿರಾಯಾಸವಾಗಿ ಅದನ್ನು ತಿರಸ್ಕರಿಸುತ್ತಿದ್ದಾರೆ.
ಶ್ರೀಲಂಕಾದ ಅಧಿಕಾರಿಯೊಬ್ಬರು, ‘ಪವನ ವಿದ್ಯುತ್ ಯೋಜನೆಯನ್ನು ಅದಾನಿಗೆ ನೀಡುವಂತೆ ತಮ್ಮ ಅಧ್ಯಕ್ಷರಿಗೆ ಮೋದಿ ಒತ್ತಡ ಹಾಕುತ್ತಿದ್ದಾರೆ’ ಎಂದು ನೇರವಾಗಿ ಆರೋಪಿಸಿದರು. ಕೀನ್ಯಾದಲ್ಲಿ, ‘ಅದಾನಿಯನ್ನು ಮೋದಿ ತಮಗೆ ಪರಿಚಯ ಮಾಡಿಸಿದರು. ಆದರೆ, ಅವರೊಂದಿಗಿನ ಎಲ್ಲ ಒಪ್ಪಂದವನ್ನು ಈಗ ರದ್ದುಗೊಳಿಸಲಾಗಿದೆ’ ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ. ಬಾಂಗ್ಲಾದೇಶದಲ್ಲಿ, ವಿದ್ಯುತ್ ಪೂರೈಕೆ ಒಪ್ಪಂದವು ಅನ್ಯಾಯವೆಂದು ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಇನ್ನು, ಇಸ್ರೇಲ್ ಜೊತೆಗಿನ ಅದಾನಿ ರಕ್ಷಣಾ ಒಪ್ಪಂದವೂ ನಡೆದಿದೆ. ಈ ಒಪ್ಪಂದವನ್ನು ಮೋದಿ ಅವರೇ ಅದಾನಿಗೆ ಕೊಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇಂತಹ ಹತ್ತಾರು ಆರೋಪಗಳ ನಡುವೆ, ಅಮೆರಿಕವು ಹೊಸ ಆರೋಪ, ಪ್ರಕರಣವನ್ನು ಬಯಲಿಗೆ ತಂದಿದೆ. ಇದು ಭಾರತ-ಅಮೆರಿಕ ಮಾತ್ರವಲ್ಲದೆ, ಹಲವಾರು ದೇಶಗಳಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಮೋದಿ-ಅದಾನಿ ಸಂಬಂಧದ ಬಗ್ಗೆ ಇಡೀ ಜಗತ್ತು ಮಾತನಾಡುತ್ತಿದೆ. ಅದಾನಿ ಬೆನ್ನಿಗೆ ಭಾರತದ ಪ್ರಧಾನಿ ನಿಂತಿದ್ದಾರೆ ಎಂಬ ನಿರ್ಲಜ್ಜ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಇದು, ಭಾರತದ ಇಮೇಜ್‌ಗೆ ಸ್ಪಷ್ಟವಾಗಿ ದಕ್ಕೆ ಉಂಟುಮಾಡುತ್ತಿದೆ. ಈಗಲಾದರೂ, ಮೋದಾನಿ ಸಂಬಂಧದ ಬಗ್ಗೆ ತನಿಖೆ ನಡೆಸಬೇಕಿದೆ. ಮೋದಿ ತಾವೊಬ್ಬ ಪ್ರಧಾನಿ ಎಂಬುದನ್ನು ಅರಿತು ಕೆಲಸ ಮಾಡಬೇಕಿದೆ.