ಕರ್ನಾಟಕ, ಪಶ್ಚಿಮ ಬಂಗಾಳದ ಉಪಚುನಾವಣೆಗಳನ್ನು ಬಿಟ್ಟರೆ ಮಿಕ್ಕ ಎಲ್ಲ ಕಡೆ ಫ್ಯಾಶಿಸ್ಟ್ ಬಿಜೆಪಿ ಲೋಕಸಭಾ ಪೆಟ್ಟಿನಿಂದ ಪಾಠ ಕಲಿತು ಬಲವರ್ಧನೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಇಂತಹ ಸಮಯದಲ್ಲಿ, ಫ್ಯಾಶಿಷ್ಟರನ್ನು ಸೋಲಿಸಿ ಪ್ರಜತಂತ್ರವನ್ನು ಉಳಿಸಬಯಸುವ ಶಕ್ತಿಗಳು ಹುಸಿ ಸಮಾಧಾನಗಳಿಗೆ ಬಲಿಯಾಗದೆ ಕೆಲವು ಅಸಲಿ ಪ್ರಶ್ನೆಗಳಿಗೆ ಎದುರಾಗಬೇಕಿದೆ.
ಗೆದ್ದ ಮಹಾರಾಷ್ಟ್ರದಲ್ಲಿ ಬಿಜೆಪಿ ಓಟು ಹೆಚ್ಚಿದೆ. ಆದರೆ, ಸೋತ ಜಾರ್ಖಂಡಿನಲ್ಲಿ ಬಿಜೆಪಿ ಓಟು
ಕಡಿಮೆಯಾಗಿಲ್ಲ. ಅಂದರೆ, ಲೋಕಸಭೆಯಲ್ಲಿ ಬಿಜೆಪಿಯ ಸಂವಿಧಾನ ವೈರವನ್ನು ಅರ್ಥಮಾಡಿಕೊಂಡಿದ್ದ ತಳ ಸಮುದಾಯಗಳು ಮತ್ತೆ ಬಿಜೆಪಿ ಕಡೆ ಸರಿದಿವೆ. ಅದಕ್ಕೆ ಬಿಜೆಪಿಯ ಸಮಾರೋಪದಿಯ out reach ಎಷ್ಟು ಕಾರಣವೋ ಅಷ್ಟೇ ಮಟ್ಟಿಗೆ ಕಾಂಗ್ರೆಸ್‌ನ ಆತ್ಮಲೋಲುಪ, ಅಧಿಕಾರ ದಾಹಿ ಧೋರಣೆಗಳು ಕಾರಣ.
1990ರ ನಂತರ ಕೆಲವು ಅಪವಾದಗಳನ್ನು ಬಿಟ್ಟರೆ, ಎಲ್ಲ ಚುನಾವಣೆಗಳಲ್ಲೂ ಸೋತರೂ ಗೆದ್ದರೂ ನಿರಂತರವಾಗಿ ಬಿಜೆಪಿ ಓಟು ಶೇರು ಏರಿಕೆ ಆಗುತ್ತಲೇ ಇದೆ. ಹೀಗಾಗಿ ಅದು ಆಗಾಗ ಕೆಲವು ಚುನಾವಣಾ ಹಿನ್ನೆಡೆಯನ್ನು ಅನುಭವಿಸಿದರೂ ಅದು ತಾತ್ಕಾಲಿಕ ಹಿನ್ನಡೆ ಮಾತ್ರ ಆಗಿರುವುದನ್ನೇ ಇತಿಹಾಸ ಹೇಳುತ್ತಿದೆ.
ಅದಕೆ ಕಾರಣ ಸ್ಪಷ್ಟ; ಜನರನ್ನು ಒಡೆದಾಳುವ ಅದರ ದ್ವೇಷ ಸಿದ್ಧಾಂತ, ತಳ ಮಟ್ಟದ ಸಂಘಟನೆ, 365 ದಿನಗಳು ದ್ವೇಷ ರಾಜಕೀಯದಲ್ಲಿ ಜನರನ್ನು ತೊಡಗಿಸಿಕೊಳ್ಳುವ ಯೋಜನೆಗಳು, ಕೊನೆ ಕ್ಷಣದಲ್ಲಿ ಸರ್ಕಾರದಿಂದ ಒಂದಷ್ಟು ಫಲಾನುಭವಿ ಯೋಜನೆಗಳು…ಅದರ ನಡುವಿನಲ್ಲೂ ಸಂಭವಿಸುವ ತಪ್ಪುಗಳನ್ನು ವೇಗವಾಗಿ ತಿದ್ದುಕೊಳ್ಳುವ ವ್ಯವಸ್ಥೆ. ಹಣ ಬಲ, ಕಳೆದ ಹತ್ತು ವರ್ಷಗಳಿಂದ ಅಧಿಕಾರ ಬಲ..
ಹೀಗಾಗಿ, ಇದಕ್ಕೆ ಪರ್ಯಾಯವಾದ ಸಿದ್ಧಾಂತ, ಸಂಘಟನೆ, ಯೋಜನೆ, ನಿರಂತರ ಕಾರ್ಯಕ್ರಮಗಳಿಲ್ಲದ, ಗೆದ್ದಾಗ ಬೀಗುವ, ಸೋತಾಗ ಸೊರಗುವ, ಅಂತರಂಗದಲ್ಲಿ ಶತ್ರುಗಳ ತದ್ರೂಪಿಗಳಂತೆ ಇರುವ ಪಕ್ಷಗಳ ಗೆಲುವುಗಳು ತಾತ್ಕಾಲಿಕ, ಆಕಸ್ಮಿಕ.. ಎಂಬಂತಾಗಿದೆ.
ಇಂಥ ತದ್ರೂಪಿಗಳನ್ನು ಆಶ್ರಯಿಸಿ, ಅವಲಂಬಿಸಿ ಫ್ಯಾಶಿಷ್ಟರನ್ನು ಚುನಾವಣೆಯಲ್ಲಿ ನಿರ್ಣಯಕವಾಗಿ ಸೋಲಿಸಬಹುದೇ ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದ ಫ್ಯಾಶಿಷ್ಟರನ್ನು ಚುನಾವಣೆಯ ಮೂಲಕ ಹಿಮ್ಮೆಟ್ಟಿಸಲು ಆಗಿದೆಯೇ? ಕರ್ನಾಟಕದ ಉಪ ಚುನಾವಣೆಗಳಲ್ಲಿ ಬಿಜೆಪಿ ಸೋಲಿನ ಸಮಾಧಾನಗಳು ಅಸಲು ಪ್ರಶ್ನೆಗಳನ್ನು ಮರೆಸುವುದಕ್ಕೆ ಮುಂಚೆ ಕೇಳಬೇಕೆನಿಸಿತು.