ಕೋಮು ಧ್ರುವೀಕರಣ, ಸಿದ್ದರಾಮಯ್ಯನವರ ಸೊಕ್ಕು ಮುರಿಯುತ್ತೇವೆಂಬ ಮಾತುಗಳ ಜತೆ, ಗ್ಯಾರಂಟಿಗಳ ಅವಹೇಳನ ಹಾಗೂ ಮೈತ್ರಿ ಕೂಟದ ಕುಟುಂಬ ರಾಜಕಾರಣವನ್ನೂ ಧಿಕ್ಕರಿಸಿರುವ ಮತದಾರರು, ಕಾಂಗ್ರೆಸ್ ರಾಜ್ಯದ ಮೂರೂ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ.
2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಗೆದ್ದಿದ್ದ ತಲಾ ಒಂದು ಸ್ಥಾನವನ್ನು ಕೂಡ ಕಾಂಗ್ರೆಸ್ ಕಿತ್ತುಕೊಂಡಿದ್ದು, ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿಯವರಿಗೆ ಮುಖಭಂಗವಾಗಿದೆ.
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ, ಮುಖ್ಯಮಂತ್ರಿಯೂ ಆಗಿದ್ದ ಸಂಸದ ಬಸವರಾಜ ಬೊಮ್ಮಾಯಿ, ಶಿಗ್ಗಾವಿಯಲ್ಲಿ ತುಂಬಾ ಕಸರತ್ತು ನಡೆಸಿದರೂ ಕೂಡ, ತಮ್ಮ ಮಗ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಶಿಗ್ಗಾವಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರನ್ನು ಸೋಲಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಸಿನ್ ಅಹ್ಮದ್ ಪಠಾಣ್ ಗೆಲುವಿನ ನಗೆಯನ್ನು ಬೀರಿದ್ದಾರೆ. ಆ ಮೂಲಕ ಹಾವೇರಿ ಜಿಲ್ಲೆಯನ್ನು ಬಿಜೆಪಿ ಮುಕ್ತ ಜಿಲ್ಲೆಯನ್ನಾಗಿಸಿ, 30 ವರ್ಷಗಳ ನಂತರ ಕಾಂಗ್ರೆಸ್ ಅಸ್ತಿತ್ವವನ್ನು ಸ್ಥಾಪಿಸುವಲ್ಲಿ ಸಫಲರಾಗಿದ್ದಾರೆ.

2023ರ ಮೇ ತಿಂಗಳಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾವಿ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳು ರುದ್ರಪ್ಪ ಲಮಾಣಿ(ಹಾವೇರಿ), ಶ್ರೀನಿವಾಸ್ ಮಾನೆ(ಹಾನಗಲ್), ಪ್ರಕಾಶ ಕೋಳಿವಾಡ(ರಾಣಿಬೆನ್ನೂರು), ಯು.ಬಿ. ಬಣಕಾರ(ಹಿರೇಕೆರೂರು), ಬಸವರಾಜ ಶಿವಣ್ಣನವರ(ಬ್ಯಾಡಗಿ) ಗೆಲುವು ಸಾಧಿಸಿ ವಿಧಾನಸಭೆ ಮೆಟ್ಟಿಲೇರಿದ್ದರು.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ 2008 ರಿಂದ 2024 ರವರೆಗೆ ಸತತ ನಾಲ್ಕು ಬಾರಿ ಬಸವರಾಜ ಬೊಮ್ಮಾಯಿ ಗೆದ್ದಿದ್ದರು. 2021ರಿಂದ 2023 ವರೆಗೆ ರಾಜ್ಯದಲ್ಲಿ 23ನೇ ಮುಖ್ಯಮಂತ್ರಿಯೂ ಆಗಿದ್ದರು. 2023ರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದರೂ ಕೂಡ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ್ದರಿಂದ ಸ್ಪರ್ಧಿಸಿ ಗೆಲುವು ಸಾಧಿಸಿ, ಸಂಸತ್ ಪ್ರವೇಶಿಸಿದ್ದರು. ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯು ಇವರ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಿತ್ತು. ಗೆಲ್ಲುವ ವಿಶ್ವಾಸದಲ್ಲಿದ್ದ ಬೊಮ್ಮಾಯಿಯವರಿಗೆ ಫಲಿತಾಂಶ ಮಾತ್ರ ಆಘಾತ ತಂದಿದೆ.
ಶಿಗ್ಗಾವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದಸಿರಿಂದ ಇಡೀ ಜಿಲ್ಲೆಯಲ್ಲಿಯೇ ಬಿಜೆಪಿ ಇಲ್ಲವಾಗಿಸಿ, ಕಾಂಗ್ರೆಸ್ ಚಕ್ರಾಧಿಪತ್ಯ ಸ್ಥಾಪಿಸಿದೆ.
ಈಗ ಗೆದ್ದಿರುವ ಯಾಸಿರ್ ಅಹ್ಮದ್ ಪಠಾಣ್ ಮೂಲತಃ ಕೃಷಿಕ, ಪದವೀಧರ, ರಾಷ್ಟೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಸೇರಿ ಕ್ಷೇತ್ರದಲ್ಲಿ ಸಂಘಟನೆ ಕಟ್ಟಲು ತೊಡಗಿದ್ದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು.
30 ವರ್ಷಗಳಿಂದ ಕುಟುಂಬ ರಾಜಕೀಯ, ಬಿಜೆಪಿ ಕಪಿಮುಷ್ಟಿಯಲ್ಲಿದ್ದ ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತಾ ಬಂದಿತ್ತು. ಕ್ಷೇತ್ರದ ಜನತೆ ಕುಟುಂಬ ರಾಜಕೀಯವನ್ನು ಗಮನಿಸುತ್ತಲೇ ಬಂದಿದ್ದು, ಬದಲಾವಣೆಯನ್ನು ಬಯಸಿದ್ದರು. ಉಪಚುನಾವಣೆ ವೇಳಾಪಟ್ಟಿಯನ್ನು ಚುನಾವಣೆ ಆಯೋಗ ಬಿಡುಗಡೆ ಮಾಡುತ್ತಿದ್ದಂತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯತಂತ್ರ ರೂಪಿಸಿತ್ತು.
ಶಿಗ್ಗಾವಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ಸತೀಶ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ರಹೀಂ ಖಾನ್, ಲಕ್ಷ್ಮಿ ಹೆಬಾಳ್ಕರ್ ಎಲ್ಲರೂ ಕ್ಷೇತ್ರದ ತುಂಬೆಲ್ಲ ಪ್ರಚಾರ ನಡೆಸಿದ್ದರು. ಯತೀಂದ್ರ ಸಿದ್ದರಾಮಯ್ಯ ಕೂಡ ಸಾಥ್ ನೀಡಿದ್ದರು.
ಕಾಂಗ್ರೆಸ್ ಮುಖಂಡರಾದ ಮಯೂರ್ ಜಯಕುಮಾರ್, ಸಾಮಾನ್ಯ ಕಾರ್ಯಕರ್ತರ ಜೊತೆಗೂಡಿ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ, ಬೂತ್ ಮಟ್ಟದಲ್ಲಿ ಪ್ರಚಾರ ನಡೆಸಿದ್ದರು. ಯುವ ಕಾರ್ಯಕರ್ತರನ್ನು ಮನೆ ಮನೆಗೆ ಕಳುಹಿಸಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ತಿಳಿಸಿದ್ದರು. ಇದೇ ಕಾರಣಕ್ಕೆ ಕಾಂಗ್ರೆಸ್, ಬೂತ್ ಮಟ್ಟದಲ್ಲಿಯೇ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಯಿತು.
“ಎದ್ದೇಳು ಕರ್ನಾಟಕ” ಸಂಘಟನೆಯ ಪ್ರಗತಿಪರ ಚಿಂತಕರು ಹೋರಾಟಗಾರರು ಕ್ಷೇತ್ರದ ಜನರೊಂದಿಗೆ ಸಭೆ ಚರ್ಚೆ ನಡೆಸಿದ್ದರು. ಬಿಜೆಪಿ ದುರಾಡಳಿತದ ಕರಪತ್ರಗಳನ್ನು ಪ್ರತಿ ಹಳ್ಳಿ ಹಳ್ಳಿಯ ಜನರಿಗೆ ತಲುಪಿಸಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ಕೋರಿದ್ದರು.
ಟಿಕೆಟ್ ವಿಚಾರವಾಗಿ ಬಂಡೆದ್ದಿದ್ದ ಅಜ್ಜಂ ಪೀರ್ ಖಾದ್ರಿ ಅವರನ್ನು ಮನವೊಲಿಸಿ ನಾಮಪತ್ರವನ್ನು ಹಿಂಪಡೆದು, ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ.
ಇದನ್ನು ಓದಿದ್ದೀರಾ? ಹಾಸನ l ನಿಖಿಲ್ ಕುಮಾರಸ್ವಾಮಿ ಸೋಲಿಗೆ ಜೆಡಿಎಸ್ ನಾಯಕರೇ ಕಾರಣ: ಸಂಸದ ಶ್ರೇಯಸ್ ಪಟೇಲ್
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಸಿನ್ ಅಹ್ಮದ್ ಪಠಾಣ್ ಗೆಲುವಿನ ಬಳಿಕ, “ಕ್ಷೇತ್ರದ ಜನರು ಪ್ರಜ್ಞಾವಂತರು. ನನ್ನಂಥ ಸಾಮಾನ್ಯ ಕುಟುಂಬದ ವ್ಯಕ್ತಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ತಂದೆ–ತಾಯಿ, ಗುರು–ಹಿರಿಯ ಆಶೀರ್ವಾದ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ನಿರಂತರ ಶ್ರಮದಿಂದ ಗೆಲುವು ನನ್ನದಾಗಿದೆ. ಧರ್ಮ, ಜಾತಿ ಮರೆತು ಮತ ಹಾಕಿದ್ದಾರೆ. ಎಲ್ಲರಿಗೂ ಕೃತಜ್ಞನಾಗಿದ್ದೇನೆ” ಎಂದರು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿಯವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ನ ಅಭ್ಯರ್ಥಿ ಪಠಾಣ್ ಗೆಲುವಿನ ನಂತರ ಖಾದ್ರಿಯವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. pic.twitter.com/HaND4I4oDC
— eedina.com ಈ ದಿನ.ಕಾಮ್ (@eedinanews) November 23, 2024
“ಕಾಂಗ್ರೆಸ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿರುವ ಮುಖಂಡ ಸೈಯದ್ ಅಜ್ಜಂ ಪೀರ್ ಖಾದ್ರಿ ಮಾತನಾಡಿ, “ಬಿಜೆಪಿ ಸೋಲಿಸುವುದು ನನ್ನ ಕನಸಾಗಿತ್ತು. ಅದು ಇಂದು ಈಡೇರಿದೆ. ಪಠಾಣ್ ಗೆಲುವಿನಲ್ಲಿ ನನ್ನ ಗೆಲುವು ಹಾಗೂ ಪಕ್ಷದ ಗೆಲುವು ನೋಡುತ್ತಿದ್ದೇನೆ” ಎಂದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.