ಇತ್ತೀಚೆಗೆ, ಉತ್ತರ ಪ್ರದೇಶವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಧಾನಸಭಾ ಉಪಚುನಾವಣೆ ನಡೆದಿದೆ. ಶನಿವಾರ (ನ.23) ಫಲಿತಾಂಶವೂ ಪ್ರಕಟವಾಗಿದೆ. ಫಲಿತಾಂಶ ಪ್ರಕಟವಾದ ಬಳಿಕ ಬಿಎಸ್‌ಪಿ ವರಿಷ್ಠೆ ಮಾಯಾವತಿ, “ಉತ್ತರ ಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಅಕ್ರಮ ನಡೆದಿದೆ. ಚುನಾವಣಾ ಆಯೋಗವು ನಕಲಿ ಮತದಾನವನ್ನು ನಿಲ್ಲಿಸುವವರೆಗೂ ಚುನಾವಣೆಗಳಲ್ಲಿ ಬಿಎಸ್‌ಪಿ ಸ್ಪರ್ಧಿಸುವುದಿಲ್ಲ” ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಯಾವತಿ, “ಚುನಾವಣಾ ಆಯೋಗವು ನಕಲಿ ಮತದಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಅದಕ್ಕಾಗಿ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ನಮ್ಮ ಪಕ್ಷವು ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ” ಎಂದಿದ್ದಾರೆ.
“ಇತ್ತೀಚೆಗೆ ನಡೆದ ಉಪಚುನಾವಣೆ ವೇಳೆ ಮತ ಯಂತ್ರಗಳನ್ನು ದುರ್ಬಳಕೆ ಮಾಡಲಾಗಿದೆ. ಬಿಎಸ್‌ಪಿಯನ್ನು ದುರ್ಬಲಗೊಳಿಸಲು ಷಡ್ಯಂತ್ರಗಳು ನಡೆದಿವೆ” ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ 9 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಬಿಎಸ್‌ಪಿ ಸ್ಪರ್ರಧಿಸಿತ್ತು. ಆದರೆ, ಯಾವುದೇ ಕ್ಷೇತ್ರಗಳಲ್ಲಿಯೂ ಬಿಎಸ್‌ಪಿ ಗೆದ್ದಿಲ್ಲ.