ಸರ್ಕಾರಿ ಶಾಲೆಗಳಲ್ಲಿ ಗಿಡಗಳನ್ನು ಬೆಳೆಸಿ, ಉತ್ತಮವಾಗಿ ಆರೈಕೆ ಮಾಡುವವರಿಗೆ 6 ಸಾವಿರ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಮಂಡ್ಯದ ಚಿತ್ರಕೂಟ ಸಂಸ್ಥೆ ಘೋಷಿಸಿದೆ.
ಪೂರ್ಣಚಂದ್ರ ತೇಜಸ್ವಿ ಹೆಸರಿನಲ್ಲಿ ಪ್ರತಿವರ್ಷ ಓಜೋನ್ ದಿನದಂದು “Green Scholarship” ವಿತರಿಸಲಾಗುತ್ತದೆ. ಬ್ರಿಟಿಷ್ ಐಲ್ಯಾಂಡ್ಸ್‌ನಲ್ಲಿ ಗಣಿತ ಶಿಕ್ಷಕರಾಗಿರುವ ಕೆ.ಆರ್.ಪೇಟೆ ಮೂಲದ ಸಂತೇಬಾಚಳ್ಳಿ ಪ್ರಭುಗೌಡ ಈ ಯೋಜನೆಗೆ ತಮ್ಮ ಸ್ವಂತ ಹಣದಲ್ಲಿ ನಿಧಿ ಸ್ಥಾಪಿಸಿದ್ದಾರೆ. ಚಿತ್ರಕೂಟ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಪ್ರಾಯೋಗಿಕವಾಗಿ ಚಿಕ್ಕಮಂಡ್ಯ ಪ್ರೌಢಶಾಲೆಯಲ್ಲಿ ಈ ವಿದ್ಯಾರ್ಥಿವೇತನಕ್ಕೆ ಚಾಲನೆ ನೀಡಲಾಗಿದೆ.
ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪರಿಸರ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಚಿತ್ರಕೂಟದ ಈ ನೂತನ ಹಸಿರು ವಿದ್ಯಾರ್ಥಿ ವೇತನಕ್ಕೆ ಬೆಂಬಲವಾಗಿ ನಿಂತಿದೆ. ಕಳೆದ ವಾರ ಎರಡು ದಿನಗಳ ಕಾಲ ಶ್ರಮದಾನ ಮಾಡಿ, ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ, ಹೊಸ ಬಣ್ಣ ಬಳಿದು, ಕಲಿಕೆಗೆ ಪೂರಕವಾದ ಚಿತ್ರಗಳನ್ನು ಬರೆದಿದ್ದರು.
ಇದನ್ನೂ ಓದಿ : ಮಂಡ್ಯ | ಎತ್ತಂಗಡಿ ಭೀತಿಯಲ್ಲಿ ತಮಿಳು ಕಾಲೋನಿ ನಿವಾಸಿಗಳು: ‘ಜಾಗ ಬಿಟ್ಟು ಕದಲಲ್ಲ’ ಎಂದ ಜನ
ಸರ್ಕಾರಿ ಶಾಲೆಗಳಲ್ಲಿ ಹಸಿರು ವಿಸ್ತರಿಸಲು ಇಚ್ಛಿಸುವ ಆಸಕ್ತ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಗಳು ಚಿತ್ರಕೂಟ ಸಂಸ್ಥೆಯ ಮೊಬೈಲ್ ನಂಬರ್‌ಗಳಿಗೆ 9448473715, 7760396467 ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ನಮಗೆ ತೇಜಸ್ವಿ ಅವರೇ ಪ್ರೇರಣೆ. ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಬೆಳೆಸುವುದರ ಜತೆಗೆ ಶಾಲೆಯ ಆವರಣವನ್ನು ತಂಪಾಗಿ ಇಡುವ ಸದುದ್ದೇಶದಿಂದ ಚಿತ್ರಕೂಟ “KP Poornachandra Tejaswi Scholarship for Green Initiatives” ಆರಂಭಿಸಿದೆ. ತೇಜಸ್ವಿಯನ್ನು ಓದಿಕೊಂಡು ಬೆಳೆದವರು ನಾವು. ಹಾಗಾಗಿ ಅವರ ಹೆಸರಿನಲ್ಲಿ ಸ್ನೇಹಿತರ ನೆರವಿನಿಂದ ಸ್ಕಾಲರ್‌ಶಿಪ್ ಆರಂಭಿಸಿದ್ದೇವೆ ಎನ್ನುತ್ತಾರೆ ಚಿತ್ರಕೂಟದ ಮುಖ್ಯಸ್ಥ ಧನುಷ್ ಗೌಡ ಎಚ್.ಎಸ್.

ಸ್ಕಾಲರ್‌ಷಿಪ್ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಿದೆ. ಕಳೆದ ವಾರ ಚಿತ್ರಕೂಟ ಆಯೋಜಿಸಿದ್ದ ಶಂಕರ ನಿರಂತರ ಶ್ರಮದಾನದಲ್ಲಿ ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ಚಿಕ್ಕಮಂಡ್ಯ ಪ್ರೌಢಶಾಲೆಯ ಆವರಣದಲ್ಲಿ 50 ಸಸಿಗಳನ್ನು ನೆಟ್ಟಿದ್ದರು. ಈಗ ಅವುಗಳ ಪಾಲನೆಗೆ ಸ್ಕಾಲರ್‌ಷಿಪ್ ಒತ್ತಾಸೆಯಾಗಿದೆ. ನಮ್ಮ ತೋಟಗಾರಿಕೆ ಮತ್ತು ದೈಹಿಕ ಶಿಕ್ಷಕರು ಶ್ರಮ ಹಾಕಿದ್ದಾರೆ. ಇಬ್ಬರಿಗೂ ಧನ್ಯವಾದಗಳು ಎಂದು ಚಿಕ್ಕಮಂಡ್ಯ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಚ್.ಎನ್.ದೇವರಾಜು ತಿಳಿಸಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಅಮೆರಿಕ ಲಂಚ-ವಂಚನೆ ಪ್ರಕರಣದಲ್ಲಿ ‘ಮೋದಾನಿ’ ಆರೋಪಿಯಲ್ಲವೇ?
ಈ ಕುರಿತು ಪ್ರತಿಕ್ರಿಯಿಸಿರುವ ಚಿಕ್ಕಮಂಡ್ಯ ಪ್ರೌಢಶಾಲೆ ದೈಹಿಕ ಶಿಕ್ಷಕರಾದ ಚಂದನ್, “ನನ್ನ ಮರ, ನನ್ನ ಸಂಗಾತಿ ಘೋಷದೊಂದಿಗೆ ಗಿಡಗಳಿಗೆ ನಿತ್ಯ ಹಾರೈಕೆ ಮಾಡುವ ಸಲುವಾಗಿ ಒಂದೊಂದು ಸಸಿಯನ್ನು ಒಬ್ಬೊಬ್ಬ ವಿದ್ಯಾರ್ಥಿಗೆ ದತ್ತು ಕೊಟ್ಟಿದ್ದೇವೆ. ಪ್ರತಿ ಗಿಡಕ್ಕೆ “ಇದು ನನ್ನ ಮರ, ನನ್ನ ಸಂಗಾತಿ” ಅಂತ ಪುಟ್ಟ ಟ್ಯಾಗ್ ಕೊಟ್ಟು ವಿದ್ಯಾರ್ಥಿಗಳ ಹೆಸರು ಬರೆದು, ಚಿಣ್ಣರ ಕೈಯಿಂದಲೇ ಸಸಿಗಳಿಗೆ ಕಟ್ಟಿಸಿ ಸಸಿಗಳನ್ನು ಪೋಷಿಸುವ ಜವಾಬ್ದಾರಿ ಹಂಚಿಕೆ ಮಾಡಿದ್ದೇವೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಗಿಡಗಳನ್ನು ಪೋಷಿಸುತ್ತಿದ್ದಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.