ಅರ್ಹ ಯುವ ಮತದಾರರು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿ, ದೋಷಮುಕ್ತವಾಗಿ ಶುದ್ಧ ಮತದಾರರ ಪಟ್ಟಿ ಸಿದ್ಧಪಡಿಸುವಂತೆ ಭಾನುವಾರ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಮತದಾರ ಪಟ್ಟಿ ಪರಿಷ್ಕರಣಾ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮತದಾರರ ಪಟ್ಟಿ ವೀಕ್ಷಕಿ, ಕರ್ನಾಟಕ ಮಾಹಿತಿ ಆಯೋಗದ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ ಸೂಚನೆ ನೀಡಿದರು.
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ 1-1-2025ಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರಡು ಮತದಾರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅರ್ಹ ಯುವ ಮತದಾರರು, ವಿಶೇಷಚೇತನ ಮತದಾರರು, ಮಹಿಳೆಯರ ಹೆಸರು ಸೇರ್ಪಡೆಗೆ ಕ್ರಮ ವಹಿಸಬೇಕು. ವಿಶೇಷವಾಗಿ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಂಡು ಈ ಕುರಿತು ಜಾಗೃತಿ ಮೂಡಿಸಿ ಹೆಸರು ಸೇರ್ಪಡೆ ಮಾಡಬೇಕು. ವಿವಿಧ ಕಾಲೇಜುಗಳಲ್ಲಿ ಅಭಿಯಾನಗಳನ್ನು ಹಮ್ಮಿಕೊಂಡು ಯುವ ಮತದಾರರ ಹೆಸರು ಸೇರ್ಪಡೆಯಾಗುವಂತೆ ಪ್ರೇರೆಪಿಸಬೇಕು. ಮನೆ-ಮನೆ ಸಮೀಕ್ಷೆ ನಡೆಸಿ ನಿಖರವಾದ ಮಾಹಿತಿ ದಾಖಲಿಸಬೇಕು. ಒಬ್ಬ ಮತದಾರರ ಹೆಸರು ಎರಡೂ ಕಡೆ ಇರದಂತೆ ನೋಡಿಕೊಂಡು ಶುದ್ಧ ಅಂತಿಮ ಮತದಾರರ ಪಟ್ಟಿಗೆ ಅಧಿಕಾರಿಗಳು ಜಾಗೃತ ವಹಿಸುವಂತೆ ಸೂಚಿಸಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ 1-1-2025 ರಂದು ಆರೋಗ್ಯ ನಿಯತಾಂಕಗಳನ್ನು ಪರಿಶೀಲಿಸುವುದು ಮತ್ತು ಅಂತಿಮ ಪಟ್ಟಿ ಪ್ರಕಟಣೆಗೆ ಆಯೋಗದ ಅನುಮತಿ ಪಡೆಯುವುದು. 6-1-2925ಕ್ಕೆ ಅಂತಿಮ ಮತದಾರ ಪಟ್ಟಿಯನ್ನು ಪ್ರಕಟಿಸಲಾಗುವುದು. ನವೆಂಬರ್ 28ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಅವಧಿಯಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ರಾಜಕೀಯ ಪಕ್ಷಗಳು ಬಿಎಲ್‌ಎಗಳನ್ನು ನೇಮಕ ಮಾಡಿ ಶುದ್ಧ ಮತದಾರರ ಪಟ್ಟಿಗೆ ಸಹಕರಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿಲ್ಲೆಯಲ್ಲಿ ಮತದಾರರ ಪರಿಷ್ಕರಣೆಗೆ ಹಮ್ಮಿಕೊಂಡ ವಿಶೇಷ ಅಭಿಯಾನ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಚುನಾವಣಾ ತಹಶೀಲ್ದಾರ ಪ್ರೇಮಸಿಂಗ್ ಪವಾರ, ಜಿಲ್ಲೆಯ ವಿವಿಧ ತಾಲೂಕು ತಹಶೀಲ್ದಾರರು, ತಾಲೂಕಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಹಾಜಿಲಾಲ ದಳವಾಯಿ, ಭೋಗೇಶ ಸೋಲಾಪುರ, ಕೆ.ಆರ್.ತೊರವಿ, ರಾಜು ಹಿರೇಮಠ ಉಪಸ್ಥಿತರಿದ್ದರು.