ಮೃತಪಟ್ಟಿದ್ದ ಹಸುವಿನ ಮರಣೋತ್ತರ ಪರೀಕ್ಷೆ ವರದಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಶುವೈದ್ಯಾಧಿಕಾರಿಯನ್ನು ಹೊಳಲ್ಕೆರೆಯಲ್ಲಿ ಲೋಕಯುಕ್ತ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕು ಪಶುವೈದ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ ಅವರು ಕಾಗಳಗೇರಿ ಗ್ರಾಮದ ರೈತ ಎಸ್ ಸ್ವಾಮಿ ಅವರಿಂದ ಆರು ಸಾವಿರ ರೂ. ಲಂಚ ಪಡೆಯುತ್ತಿದ್ದರು. ಆ ವೇಳೆ ತಿಪ್ಪೇಸ್ವಾಮಿ ಅವರನ್ನು ಸಾಕ್ಷ್ಯ ಸಮೇತ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಸ್ವಾಮಿ ಅವರು ಸಾಕಿದ್ದ ಎಚ್‌ಎಫ್ ತಳಿಯ ಹಸು ಮೇ 19ರಂದು ಸಾವನ್ನಪ್ಪಿತ್ತು. ಅವರು ಆ ಹಸುವಿಗೆ ವಿಮೆ ಮಾಡಿಸಿದ್ದರಿಂದ, ವಿಮೆ ಪರಿಹಾರ ಪಡೆಯಲು ಹಸುವಿನ ಮರಣೊತ್ತರ ಪರೀಕ್ಷೆ ಮಾಡಿಸಿದ್ದರು. ಚಿಕ್ಕಜಾನೂರು ಪಶು ಆಸ್ಪತ್ರಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದರು.
ಮರಣೋತ್ತರ ಪರೀಕ್ಷೆಯ ವರದಿ ನೀಡಲು ಸ್ವಾಮಿ ಅವರ ಬಳಿ ಪಶುವೈದ್ಯಾಧಿಕಾರಿ ಡಾ ತಿಪ್ಪೇಸ್ವಾಮಿ ಏಳು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪರೀಕ್ಷೆ ನಡೆಸಿದ ದಿನವೇ ಒಂದು ಸಾವಿರ ರೂ. ಪಡೆದಿದ್ದರು. ವರದಿ ನೀಡುವ ದಿನ ಉಳಿದ ಆರು ಸಾವಿರ ರೂ. ನೀಡಬೇಕೆಂದು ಹೇಳಿದ್ದರು.
ವೈದ್ಯಾಧಿಕಾರಿ ನಡೆಯಿಂದ ಸಿಟ್ಟಾಗಿದ್ದ ಸ್ವಾಮಿ, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಲೋಕಾಯುಕ್ತ ಪೊಲೀಸರು ಸ್ವಾಮಿ ಅವರನ್ನು ಮುಂದೆ ಕಳಿಸಿ ಲಂಚ ನೀಡುವಂತೆ ಹೇಳಿದ್ದರು. ಅವರು ಲಂಚ ನೀಡುವಾಗ ದಾಳಿ ನಡೆಸಿ, ಡಾ. ತಿಪ್ಪೇಸ್ವಾಮಿ ಅವರನ್ನು ಬಂಧಿಸಿದ್ದಾರೆ.