ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣ ಜಾರಿಗಾಗಿ ಪರಿಶಿಷ್ಟ ಜಾತಿಯ ತಲಾ ಒಂದು ಸಮುದಾಯದ ಪ್ರತಿನಿಧಿಯನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ಹಾಗೂ ಸದಸ್ಯರು ಸೋಮವಾರ ರಾಯಚೂರು ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಸಮುದಾಯದಲ್ಲಿರುವ ಶೈಕ್ಷಣಿಕ ಮತ್ತು ಸರ್ಕಾರಿ ನೌಕರಗಳ ದತ್ತಾಂಶವನ್ನು ಪಡೆಯಲು ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನ್ ದಾಸ್ ಆಯೋಗವನ್ನು ರಚನೆ ಮಾಡಲಾಗಿದೆ. ಈ ಆಯೋಗಕ್ಕೆ ಪರಿಶಿಷ್ಟ ಜಾತಿ ಸಮುದಾಯದ ಪ್ರತಿನಿಧಿಯನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಎಸ್‌ಸಿ ಸಮುದಾಯದ ಶೈಕ್ಷಣಿಕ ಹಾಗೂ ಸರ್ಕಾರಿ ನೌಕರರ ದತ್ತಾಂಶ ಪಡೆಯುವುದು ಅತಿ ಸೂಕ್ಷ್ಮದ ಸಂಗತಿಯಾಗಿದ್ದು, ಒಬಿಸಿ ವರ್ಗಕ್ಕೆ ಸೇರಿದ ನಾಗಮೋಹನ ದಾಸ್ ಅವರ ಆಯೋಗವು ಎಸ್‌ಸಿ ಸಮುದಾಯಕ್ಕೆ ನ್ಯಾಯ ಒದಗಿಸುತ್ತಾರೆ ಎನ್ನುವ ನಂಬಿಕೆ ನಮಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಪರಿಶಿಷ್ಟ್ಟ ಜಾತಿಯ ಮಾದಿಗ, ಹೊಲೆಯ, ಲಂಬಾಣಿ, ಭೋವಿ, ಕೊರಚ, ಕೊರಮ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯದ ತಲಾ ಒಂದು ಪ್ರತಿನಿಧಿಯನ್ನು ನಿಯೋಗಕ್ಕೆ ಸದಸ್ಯರನ್ನಾಗಿ ನೇಮಕ ಮಾಡಬೇಕು. ಈ ನಿಟ್ಟಿನಲ್ಲಿ ಮಾದಿಗ ಸಮುದಾಯದಿಂದ ಹೇಮರಾಜ ಅಸ್ಕಿಹಾಳ ಅವರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ನೈಜ ಪರಿಶಿಷ್ಟ ಜಾತಿಯವರಿಗೆ ದೊರಕಬೇಕಾದ ಸರ್ಕಾರಿ ನೌಕರಿಗಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಸೇವೆಯನ್ನು ಮಾಡುತ್ತಿರುವವರನ್ನು ಗುರುತಿಸುವ ಕಾರ್ಯ ನಡೆಯಬೇಕು, ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರಗಳ ಪ್ರಕರಣಗಳ ಇತ್ಯಾರ್ಥಕ್ಕಾಗಿ ನ್ಯಾಯಾಲಯದಲ್ಲಿ ವಿಶೇಷ ಪೀಠವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಾಜದ ಮುಖಂಡ ನರಸಿಂಹಲು ಪೋತಗಲ್, ಜಗ್ಲಿ ಉರುಕುಂದಪ್ಪ, ನರಸಿಂಹಲು ಮರ್ಚೆಟ್ಹಾಳ್, ಸುಶೀಲ್ ಕುಮಾರ್, ತಾಯಪ್ಪ ಗಧಾರ್, ಪ್ರಭುರಾಜ, ಪಾಂಡು, ಆಕಾಶ ಮಾನ್ವಿ, ಎಂ.ಶರಣಬಸವ, ಮಹೇಂದ್ರಕುಮಾರ ಮಿತ್ರ ಪಾಲ್ಗೊಂಡಿದ್ದರು.
