ನ್ಯಾ.ಸದಾಶಿವ ಆಯೋಗದ ವರದಿ ಅನುಸಾರ, ಸುಪ್ರಿಂ ಕೋರ್ಟ್ ತೀರ್ಮಾನದಂತೆ ರಾಜ್ಯ ಸರ್ಕಾರ ಒಳಮೀಸಲಾತಿ ನೀಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಮುಖಂಡರು ಹಾಗೂ ನೂರಾರು ಸದಸ್ಯರು ಪ್ರತಿಭಟನೆ ನಡೆಸಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಹಶೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದ ಸಂಘಟಕರು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ ಎಸ್ ನಾಡಗೌಡರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.
ಡಿವೈಎಸ್‌ಪಿ ಬಲ್ಲಪ್ಪ ನಂದಗಾಂದೆ, ಸಿಪಿಐ ಮಲ್ಲಿಕಾರ್ಜನ ತುಳಸಿಗೇರಿ, ಪಿಎಸ್‌ಐ ಸಂಜಯ್ ತಿಪ್ಪಾರೆಡ್ಡಿ ಸೇರಿದಂತೆ ನೂರಾರು ಪೋಲಿಸರು ಪ್ರತಿಭಟಟನಾಕಾರರನ್ನು ತಡೆದಿದ್ದು, ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಕೋರಿದರು.
ದಲಿತ ಚಳುವಳಿಯ ಮುಖಂಡ ಡಿ ಬಿ ಮೂದೂರ ಮಾತನಾಡಿ, “ದೇಶದಲ್ಲಿ ತೀರಾ ಹಿಂದುಳಿದ ಕೊಳಚೆ ಪ್ರದೇಶದಲ್ಲಿ ಜೀವನ ನಡೆಸುತ್ತಿರುವ ಮಾದಿಗ ಸಮುದಾಯ ಬಾಂಧವರ ಮಕ್ಕಳು ಶಿಕ್ಷಣವಂತರಾಗಿ ಮುನ್ನಲೆಗೆ ಬರಬೇಕೆಂದರೆ ದಲಿತರ ಒಳಮಿಸಲಾತಿ ಅವಶ್ಯಕವಾಗಿದೆ. ನಿಜವಾದ ಅಸ್ಪೃಶ್ಯರಾದ ದಲಿತ ಸಮುದಾಯದವರು ಕಳೆದ 45 ರಿಂದ 50 ವರ್ಷ ಒಳ ಮೀಸಲಾತಿಗೆ ಹೋರಾಟ ನಡೆಸಿದರೂ ಕೂಡಾ ಸರ್ಕಾರಗಳು ನಮ್ಮ ಮನವಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಆಯಾ ಮತಕ್ಷೇತ್ರದ ಶಾಸಕರ ಮನೆಗೆ ಮುತ್ತಿಗೆ ಹಾಕಿ ನಮ್ಮ ಹಕ್ಕಿಗಾಗಿ ಪ್ರತಿಭಟಿಸುತ್ತಿದ್ದೇವೆ” ಎಂದು ಹೇಳಿದರು.
ಹರೀಶ್ ನಾಟಿಕರ್ ಮಾತನಾಡಿ, “ನಾವು ಪ್ರತಿಭಟನೆ ಬಗ್ಗೆ 15 ದಿನಗಳ ಹಿಂದೆಯೇ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಮೂಲಕ ನಮ್ಮ ಹೋರಾಟದ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೆವು. ಆದರೆ ಶಾಸಕ ನಾಡಗೌಡರು ಹೋರಾಟಗಾರರನ್ನು ಒಂದು ದಿನವೂ ಕರೆಯಲಿಲ್ಲ. ನಮ್ಮ ಹಕ್ಕಿನ ಕುರಿತು ಸ್ಪಂದನೆ ನೀಡಲಿಲ್ಲ. ನಮ್ಮ ಹಕ್ಕಿಗಾಗಿ ಮೀಸಲಾತಿ ಮಡೆದುಕೊಳ್ಳಲು ನಾವು ಸಿದ್ಧರಿದ್ದೇವೆ. ಹೋರಾಟ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ ಕಾರಣ ಶಾಸಕ ಸಿ ಎಸ್ ನಾಡಗೌಡ ಅವರು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶದಲ್ಲಿ ಒಳಮೀಸಲಾತಿ ಬಗ್ಗೆ ಧ್ವನಿ ಎತ್ತುವ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆದು ಒಳಮೀಸಲಾತಿಯ ಹಕ್ಕು ನಮಗೆ ದೊರೆಯುವಂತೆ ಮಾಡಬೇಕು. ಇಲ್ಲವಾದದೆ ನಿಮ್ಮ ವಿರುದ್ಧ ನಿರಂತರವಾಗಿ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪರಿಶಿಷ್ಟ ಜಾತಿ ಸಮುದಾಯದ ಪ್ರತಿನಿಧಿಗಳ ನೇಮಕಕ್ಕೆ ಒತ್ತಾಯಿಸಿ ಪ್ರತಿಭಟನೆ
ಈ ವೇಳೆ ಶೇಖು ಆಲೂರ, ಸಿ ಜಿ ವಿಜಯಕರೆ, ನ್ಯಾಯವಾದಿ ಕೆ. ಬಿ ದೊಡಮನಿ, ಪ್ರಕಾಶ ಸರೂರ, ಪ್ರಶಾಂತ ಕಾಳೆ, ಆನಂದ ಗಂಗೂರ, ಆನಂದ ದೇವೂರ, ಸುರೇಶ ಮಾದರ, ತಪ್ಪಣ್ಣ ದೊಡಮನಿ, ಆನಂದ ಮದೂರು, ಬಾಲು ಹುಲ್ಲೂರ, ಪರುಶುರಾಮ ಬಸರಕೋಡ, ದೇವರಾಜ ಹಂಗರಗಿ ಸೇರಿದಂತೆ ಹಲವರು ಇದ್ದರು.