ರೈತರು ಹಾಗೂ ಕಾರ್ಮಿಕರ ವಿರೋಧಿಯಾಗಿರುವ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಪ್ರತಿಭಟನಾ ದಿನವನ್ನಾಗಿ ಆಚರಿಸುವ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಯಚೂರು ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾರ್ಮಿಕರ ನಾಲ್ಕು ಸಂಹಿತೆಗಳನ್ನು ರದ್ದುಗೊಳಿಸಿ, ಕಾರ್ಮಿಕರ ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ರದ್ದುಪಡಿಸಬೇಕೆಂದು ಆಗ್ರಹಿಸಿದರು.
“ರಾಷ್ಟ್ರೀಯ ಕನಿಷ್ಠ ವೇತನ ತಿಂಗಳಿಗೆ ₹26,000ದಂತೆ ಜಾರಿಗೊಳಿಸಿ ಹಾಗೂ ತಿಂಗಳಿಗೆ ₹10,000 ಪಿಂಚಣಿ ನೀಡಬೇಕು. ಜತೆಗೆ ಸಂಘಟಿತ, ಅಸಂಘಟಿತ, ಯೋಜನೆ ಕಾರ್ಯಕರ್ತರು, ಗುತ್ತಿಗೆ ಕಾರ್ಮಿಕರು, ಕೃಷಿ ವಲಯ ಸೇರಿದಂತೆ ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಒದಗಿಸಿಕೊಡಬೇಕು” ಎಂದು ಒತ್ತಾಯಿಸಿದರು.
“ಇತ್ತೀಚಿನ ದಿನಗಳಲ್ಲಿ ಸಾಲಬಾಧೆಯಿಂದ ರೈತರು ಆತ್ಮಹತ್ಯೆಗೆ ಗುರಿಯಾಗುತ್ತಿದ್ದಾರೆ. ಇದನ್ನು ಕೊನೆಗೊಳಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಖಚಿತಪಡಿಸಬೇಕು. ರಕ್ಷಣಾ, ರೈಲ್ವೆ, ಆರೋಗ್ಯ, ಶಿಕ್ಷಣ, ವಿದ್ಯುತ್ ಸೇರಿದಂತೆ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸಾರ್ವಜನಿಕ ಸೇವೆಗಳ ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು” ಎಂದರು.
“ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವುದು ಬೇಡ. ಗೃಹಬಳಕೆದಾರರಿಗೆ ಮತ್ತು ಅಂಗಡಿಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಿ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಅತಿಕ್ರಮಿಸುತ್ತವೆ ಮತ್ತು ಕೃಷಿಯ ಕಾರ್ಪೊರೇಟೀಕರಣವನ್ನು ಸುಗಮಗೊಳಿಸುತ್ತವೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕಬೇಕು” ಎಂದು ಆಗ್ರಹಿಸಿದರು.
“ಉದ್ಯೋಗ ಖಾತ್ರಿ ಯೋಜನೆಯಡಿ ₹600ಗೆ ಕೂಲಿ ಹೆಚ್ಚಿಸಬೇಕು. ಕನಿಷ್ಠ 200 ಮಾನವದಿನ ಕೆಲಸವನ್ನು ಎಲ್ಲರಿಗೂ ನೀಡಬೇಕು. ಬಾಕಿಯಿರುವ ಕೂಲಿ ಪಾವತಿಸಬೇಕು. ಬೆಳೆಗಳು ಮತ್ತು ಜಾನುವಾರುಗಳಿಗೆ ಸಮಗ್ರ ಸಾರ್ವಜನಿಕ ವಲಯದ ವಿಮಾ ಯೋಜನೆ, ಬೆಳೆವಿಮೆ ಮತ್ತು ಗೇಣಿದಾರ ರೈತರಿಗೆ ಎಲ್ಲ ಯೋಜನೆಗಳ ಪ್ರಯೋಜನಗಳನ್ನು ಖಚಿತಪಡಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಮೂಡನಿಡಂಬೂರು ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
“ಜಿಲ್ಲೆಯಲ್ಲಿ ಭತ್ತ, ತೊಗರಿ, ಜೋಳ, ಖರೀದಿ ಕೇಂದ್ರಗಳನ್ನು ತೆರೆಯಬೇಕು, ಏಮ್ಸ್ ಸ್ಥಾಪನೆ ಮಾಡಬೇಕು, ವಿಮಾನ ನಿಲ್ದಾಣದ ಕಾಮಗಾರಿ ಪ್ರಾರಂಭಿಸಬೇಕು, ಮೆಣಸಿನಕಾಯಿ ಮಾರುಕಟ್ಟೆಯನ್ನು ಸ್ಥಾಪನೆ ಮಾಡಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಕೆ ಜಿ ವೀರೇಶ, ಪ್ರಭಾಕರ ಪಾಟೀಲ್, ಅಮಿನ್ ಪಾಷಾ ದಿದ್ದಗಿ, ವೀರೇಶ ಎನ್ ಎಸ್, ಮಲ್ಲನಗೌಡ, ಕರಿಯಪ್ಪ ಅಚ್ಚೊಳಿ, ಎಸ್ ಮಾರೆಪ್ಪ, ಗೋಪಾಲ ರಾಂಪೂರ, ಡಿ ಎಸ್ ಶರಣಬಸವ, ಆಂಜನೇಯ ಕುರುಬದೊಡ್ಡಿ, ಕೆ ರಂಗನಾಥ ಸೇರಿದಂತೆ ಅನೇಕರು ಇದ್ದರು.
