ಆಶಾ ಕಾರ್ಯಕರ್ತೆಯರಿಗೆ ರಾಜ್ಯದಲ್ಲಿ ಪ್ರೋತ್ಸಾಹಧನ ನೀಡಲು ಆಶಾನಿಧಿ ಪೋರ್ಟಲ್‌ನಲ್ಲಿ ಆನ್ಸೆನ್ ದಾಖಲು ಮಾಡಿದರು, ಮಾಡಿದ ಕೆಲಸಗಳು ದಾಖಲಾಗದೆ ಸುಮಾರು 8 ವರ್ಷಗಳಿಂದ ಪ್ರೋತ್ಸಾಹ ಧನ ಸಿಗುತ್ತಿಲ್ಲ. ಇದರಿಂದ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರು ಸಾವಿರಾರು ರೂಪಾಯಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ಮಾನ್ವಿ ಘಟಕದ ಆಶಾ ಕಾರ್ಯಕರ್ತೆಯರು ಶಾಸಕ ಹಂಪಯ್ಯ ನಾಯಕರವರಿಗೆ ಹಕ್ಕೊತ್ತಾಯ ಸಲ್ಲಿಸಿದರು.
“ಪ್ರಸ್ತುತ ರಾಜ್ಯ ಸರ್ಕಾರದ ಗೌರವಧನ ಮತ್ತು ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಎರಡನ್ನೂ ಒಂದುಗೂಡಿಸಿ ಮಾಸಿಕ ₹15,000 ಗೌರವಧನ ನಿಗದಿ ಮಾಡಬೇಕು ಮತ್ತು ಆಶಾ ಕಾರ್ಯಕರ್ತೆಯರ ವಿವಿಧ ಜ್ವಲಂತ ಸಮಸ್ಯೆಗಳ ಬೇಡಿಕೆಗೆ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
“ತೀವ್ರ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ರುಟೀನ್ ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಬೇಕು. ಪ್ರತಿ ವರ್ಷ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಬೇಕು. ತೀವ್ರ ಕಾಯಿಲೆಗಳಿದ್ದಲ್ಲಿ ಕೂಡಲೇ ಉಚಿತ ಚಿಕಿತ್ಸೆ ನೀಡುವುದಕ್ಕೆ ಆದೇಶ ಹೊರಡಿಸಬೇಕು” ಎಂದು ಮನವಿ ಮಾಡಿದರು.
“ಕಳೆದ ಹಲವಾರು ವರ್ಷಗಳಿಂದ ಆರ್‌ಸಿಎಚ್ ಪೋರ್ಟಲ್‌ನ ವಿವಿಧ ಸಮಸ್ಯೆಗಳ ಕಾರಣಗಳಿಂದ ಬಾಕಿಯಿರುವ ಪ್ರೋತ್ಸಾಹಧನವನ್ನು ನೀಡಲು ಕ್ರಮಕೈಗೊಳ್ಳಬೇಕು. 2019-21ರ ವರೆಗಿನ ಕೋವಿಡ್ ವಿಶೇಷ ಪ್ರೋತ್ಸಾಹಧನ ಹಾಗೂ ನಾನ್ ಎಂಸಿಟಿಎಸ್ ಹಣ ₹2000ವನ್ನು ಪಾವತಿಸಬೇಕು” ಎಂದು ಒತ್ತಾಯಿಸಿದರು.
“ಆಶಾ ಕಾರ್ಯಕ್ರಮದಲ್ಲಿ ಫೆಸಿಲಿಟೇಟರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅವರ ಹುದ್ದೆಗೆ ತಕ್ಕಂತೆ ಮಾಸಿಕ ವೇತನ, ಪ್ರಯಾಣ ಭತ್ಯೆ ಸೇರಿದಂತೆ ಇತ್ಯಾದಿಗಳನ್ನು ಹೆಚ್ಚಿಸಬೇಕು. ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ, ಗ್ರಾಜ್ಯುಟಿ, ಪಿಎಫ್-ಇಎಸ್‌ಐ ಸೌಲಭ್ಯ ನೀಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಸ್ಕಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
“ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ. ಹಾಗಾಗಿ ತಾವು ಕೂಡಲೇ ಸರ್ಕಾರದ ಗಮನಕ್ಕೆ ತಂದು ಬೇಡಿಕೆ ಈಡೇರಿಸಬೇಕು” ಎಂದು ಶಾಸಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ತಾಲೂಕು ಕಾರ್ಯದರ್ಶಿ ಶೈಲಜಾ, ಶ್ರೀದೇವಿ, ಸುಜಾತ, ಸುಂದರಮ್ಮ, ಶಾರದಾ ಸೇರಿದಂತೆ ಇತರರು ಇದ್ದರು.
