ಸಂಯುಕ್ತ ಕಿಸಾನ್ ಮೋರ್ಚಾ ಕಳೆದ ದಿನ ರಾಜ್ಯವ್ಯಾಪಿ ಜನಜಾಗೃತಿ ಅಭಿಯಾನದ ಭಾಗವಾಗಿ ರೈತ, ಕಾರ್ಮಿಕ ಹಾಗೂ ಎಲ್ಲ ರೀತಿಯ ಶೋಷಿತ ಬಂಧುಗಳ ಹಿತ ಕಾಯುವಂತೆ ಆಗ್ರಹಿಸಿ ‘ಎಚ್ಚರಿಕೆ ಜಾಥಾʼ ನಡೆಸಿತು.
ಟೌನ್ ಹಾಲ್ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ದಸಂಸ, ಜೆಸಿಟಿಯು ಕಾರ್ಯಕರ್ತರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಸಯ್ಯಾಜಿರಾವ್ ರಸ್ತೆ ಮೂಲಕ ಮೆರವಣಿಗೆ ನಡೆಸುವುದರ ಮೂಲಕ ಗಾಂಧಿ ವೃತ್ತದಲ್ಲಿ ಸೇರಿದರು.
“ಕಾರ್ಮಿಕರು ಮತ್ತು ರೈತರು ಜಂಟಿಯಾಗಿ ದೇಶಾದ್ಯಂತ ಜ್ವಲಂತ ಸಮಸ್ಯೆಗಳನ್ನು ಎತ್ತಿ ಹಿಡಿಯಲು ಮತ್ತು ಪರಿಹಾರಕ್ಕಾಗಿ ಒತ್ತಾಯಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 2020ರಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಐತಿಹಾಸಿಕ ಚಳವಳಿ ಆರಂಭಿಸಲಾಗಿತ್ತು. ಆದೇ ದಿನವಾದ ನವೆಂಬರ್ 26ರಂದು ಪ್ರತಿಭಟನಾ ದಿನವನ್ನಾಗಿ ಆಚರಿಸಿದ್ದೇವೆ” ಎಂದು ಸಂಘಟಕರು ಹೇಳಿದರು.
“ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು. ಬೆಳೆಗೆ ತಕ್ಕ ಬೆಲೆ ಇಲ್ಲದಿರುವುದರಿಂದ ರೈತರು ಸಾಲಗಾರರಾಗಿ ಲಕ್ಷಾಂತರ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನ ಮಾಡಬೇಕು” ಎಂದು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
“ರೈತರ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ನಿಲ್ಲಿಸಬೇಕು. ವಿದ್ಯುತ್ ಖಾಸಗೀಕರಣವಾಗದಂತೆ ತಡೆಯಬೇಕು. ರೈತರಿಗೆ ಅನ್ಯಾಯವಾಗದಂತೆ ರೈತರ ಹಿತ ಕಾಯುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಯೋನ್ಮುಖರಾಗಬೇಕು” ಎಂದು ಒತ್ತಾಯಿಸಿದರು.
ಜನಾಂದೋಲನ ಮಹಾ ಮೈತಿಯ ಉಗ್ರನರಸಿಂಹೆ ಗೌಡ ಮಾತನಾಡಿ, “ಕೇಂದ್ರ ಸರ್ಕಾರ ಎಂಎಲ್‌ಸಿಗಳಿಗೆ ಅನುಕೂಲವಾಗುವಂತೆ ಡಿಜಿಟಲೀಕರಣವನ್ನು ಹೇರುತ್ತಿದೆ. ಇದರಿಂದ ಕಾರ್ಪೊರೇಟ್ ಕಂಪನಿಗಳ ಅದಾನಿ ಮತ್ತು ಅಂಬಾನಿಯಂಥವರಿಗೆ ನೆರವು ನೀಡುತ್ತಿದ್ದಾರೆ. ಯುವಕರಿಗೆ ಉದ್ಯೋಗದ ಆಸರೆಯಿರದೆ ವಾಸ್ತವವಾಗಿ ಗುಲಾಮಗಿರಿಗೆ ತಳ್ಳುವಂತಹ ಕೆಲಸವಾಗುತ್ತಿದೆ. ಕಾರ್ಮಿಕರಿಗೆ ಭದ್ರತೆಯಿಲ್ಲ. ಹೆಚ್ಚು ಸಮಯ ದುಡಿಸಿಕೊಳ್ಳುವುದು ಬಿಟ್ಟರೆ, ಕಾರ್ಮಿಕರ ಹಿತ ಕಾಯುವ ಕುಟುಂಬದ ಭದ್ರತೆ ಒದಗಿಸುವ ಕೆಲಸವಾಗುತ್ತಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ತುರುವೇಕೆರೆ | ಅನುಭದಲ್ಲಿರುವವರಿಗೆ ಭೂಮಿ ಮಂಜೂರು ಮಾಡಲು ರೈತರ ಮನವಿ
ಜಗದೀಶ್ ಸೂರ್ಯ ಮಾತನಾಡಿ, “ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಧೋರಣೆಗಳಿಂದ ರೈತರು, ಕಾರ್ಮಿಕರು ಶೋಷಣೆಗೆ ಒಳಗಾಗಿದ್ದಾರೆ. ಯುವಕರು ಬದುಕು ಕಟ್ಟಿಕೊಳ್ಳಲು ಆಗುತ್ತಿಲ್ಲ. ಕಾರ್ಪೊರೇಟ್ ಕುಳಗಳಿಗೆ ಮಣೆ ಹಾಕುತ್ತ ರೈತ, ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ರೈತ ವಿರೋಧಿ ಕಾಯ್ದೆಗಳು ಒಂದುಕಡೆಯಾದರೆ, ಇನ್ನೊಂದು ಕಡೆ ಕಾರ್ಮಿಕ ವಿರೋಧಿ ನಡೆಯಂತಹ ದುರಾಡಳಿತವನ್ನು ನಿಲ್ಲಿಸಬೇಕು” ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಜನಮನ ಗೋಪಾಲ್, ನೇತ್ರಾವತಿ, ಮಹಾದೇವ ನಾಯಕ, ಪಿ ಮರಂಕಯ್ಯ ಮೊದಲಾದವರು ಇದ್ದರು.