ನಮ್ಮ ಸಂವಿಧಾನವನ್ನು ನಾವಿಂದು ರಕ್ಷಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆಯ ಭವಿಷ್ಯ ಕರಾಳವಾಗಲಿದೆ ಎಂದು ಬಹುಜನ ಚಳವಳಿಯ ಮುಖಂಡ ಕಲ್ಲಪ್ಪ ತೊರವಿ ಹೇಳಿದರು.
ವಿಜಯಪುರದಲ್ಲಿ ಬುದ್ಧವಿಹಾರ ನಿರ್ಮಾಣ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಸರ್ಕಾರಿ ಸಂಸ್ಥೆಗಳೆಲ್ಲ ಖಾಸಗಿಯವರ ಪಾಲಾಗುತ್ತಿವೆ. ಸರ್ಕಾರಿ ವಲಯದಲ್ಲಿ ನಮ್ಮ ಮಕ್ಕಳು ಉದ್ಯೋಗದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಈಗಲೇ ನಾವೆಲ್ಲ ಎಚ್ಚತ್ತುಕೊಳ್ಳದಿದ್ದರೆ ಮುಂದೆ ಅಪಾಯ ತಪ್ಪಿದ್ದಲ್ಲ” ಎಂದರು.
“ದೇಶದಲ್ಲಿ ಮನುವಾದಿ ಶಕ್ತಿಗಳು ಒಂದಾಗುತ್ತಿದ್ದು, ಜಾತ್ಯತೀತ ಶಕ್ತಿಗಳು ಹರಿದು ಹಂಚಿಹೋಗುತ್ತಿವೆ. ಸಮಾಜದ ಒಂದು ವರ್ಗವನ್ನು ಮೂರನೇ ದರ್ಜೆಗೆ ಇಳಿಸುವ ಹುನ್ನಾರ ನಡೆಯುತ್ತಿದೆ. ದೇಶದ ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕಾರಣವಾಗಿವೆ. ಶೋಷಿತ ವರ್ಗಗಳು ಒಂದಾಗಿ ರಾಜ್ಯಾಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಅಗತ್ಯವಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬುದ್ಧವಿಹಾರ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಮಾತನಾಡಿ, “ಅಂಬೇಡ್ಕರ್ ನೀಡಿದ ಸಂವಿಧಾನಕ್ಕೆ ಹಲವು ಧರ್ಮ, ಜಾತಿ, ಸಂಸ್ಕೃತಿ, ಭಾಷೆಗಳನ್ನು ಒಗ್ಗೂಡಿಸುವ ಶಕ್ತಿಯಿದೆ. ನಮ್ಮ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ ರಕ್ಷಣೆ ನಮ್ಮೆಲ್ಲರ ಗುರಿಯಾಗಬೇಕು” ಎಂದು ಕರೆ ನೀಡಿದರು.
ಈ ವರದಿ ಓದಿದ್ದೀರಾ? ವಿಜಯಪುರ | ಮಹಿಳೆಯ ಮಡಿಲಲ್ಲಿಯೇ ಜಾನಪದ ಸಾಹಿತ್ಯ ಹುಟ್ಟಿಕೊಂಡಿದ್ದು: ಶಿವಲೀಲಾ ಮಧುರಾ
ಬುದ್ಧ ವಂದನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನ್ಯಾಯವಾದಿ ಕೆ ಎಂ ಕೂಡಲಗಿ ಸಂವಿಧಾನದ ಪ್ರಸ್ತಾವನೆ ಬೋಧಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು ಸ್ವಾಗತಿಸಿದರು. ಉಪಾಧ್ಯಕ್ಷ ಸಾಬು ಚಲವಾದಿ ವಂದಿಸಿದರು. ಪ್ರತಾಪ ಚಿಕ್ಕಲಕಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಶಿಕಾಂತ ಹೊನವಾಡಕರ, ಚಿದಾನಂದ ನಿಂಬಾಳ, ದಶವಂತ ಗುನ್ನಾಪುರ, ಅನಿಲ ಹೊಸಮನಿ, ಆನಂದ, ರಾಜೇಶ ತೊರವಿ, ಕೆ ಎಂ ಶಿವಶರಣ, ಎಂ ಬಿ ಹಳ್ಳದಮನಿ, ರಮೇಶ ಹಳ್ಳಿ, ಚೆನ್ನು ಕಟ್ಟಿಮನಿ, ಮನೋಹರ ಇನಾಮದಾರ, ಯಶೋಧಾ ಅಥರ್ಗಾ, ವಿಜಯಲಕ್ಷ್ಮೀ ಅಥರ್ಗಾ, ಸುಭಾಸ ಹೊನ್ನಕಂಟಿ, ರಮೇಶ ಯಡಹಳ್ಳಿ ಸೇರಿದಂತೆ ಇತರರು ಇದ್ದರು.