ಮೋದಾನಿ ಫೈಲ್ಸ್‌ | ಹೊಂದಾಣಿಕೆ-ಭ್ರಷ್ಟಾಚಾರದ ಬಗ್ಗೆ ದೇಶ ಮಾತನಾಡುವುದು ಯಾವಾಗ?

Date:

Advertisements
ನವ ಉದಾರವಾದಿ, ಡಿಜಿಟಲ್‌ ಜಗತ್ತಿನಲ್ಲಿ ಬಂಡವಾಳಶಾಹಿ ಮತ್ತು ಆಡಳಿತದ ನಡುವಿನ ಭ್ರಷ್ಟಾಚಾರವನ್ನು 'ಸಹಕಾರಿ ಭ್ರಷ್ಟಾಚಾರ' ಎಂದು ಕರೆಯಲಾಗುತ್ತಿದೆ. ಪಕ್ಷಗಳಿಗೆ ಅಧಿಕಾರ, ಬಂಡವಾಳಶಾಹಿಗಳಿಗೆ ಉದ್ದಿಮೆ ವಿಸ್ತರಣೆ ಮತ್ತು ಲಾಭ ಬೇಕು. ರಾಜಕೀಯದಲ್ಲಿ ಮೋದಿ, ಉದ್ದಿಮೆಯಲ್ಲಿ ಅದಾನಿ – ಈ ಜೋಡಿ ಇಡೀ ಭಾರತವನ್ನು ವ್ಯಾಪಿಸಿ, ತಮ್ಮದೇ ಚಕ್ರಾಧಿಪತ್ಯ ಸಾಧಿಸಬೇಕು ಎಂಬುದೇ ಮೋದಾನಿ ಫೈಲ್ಸ್.

ಪ್ರಧಾನಿ ಮೋದಿ ಅವರ ಅತ್ಯಾಪ್ತ, ಭಾರತದ ಅತಿ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ ನವೆಂಬರ್ 20ರಂದು ಭ್ರಷ್ಟಾಚಾರದ ಆರೋಪ ಮಾಡಿದೆ. ಭಾರತದ ಅಧಿಕಾರಿಗಳಿಗೆ 2,029 ಕೋಟಿ ರೂ. ಲಂಚ ನೀಡಿದ್ದಾರೆ. ಅದಕ್ಕಾಗಿ, ಅಮೆರಿಕದ ಹೂಡಿಕೆದಾರರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿದೆ. ಅದೇ ಆರೋಪ ಸಂಬಂಧ ನ್ಯೂಯಾರ್ಕ್‌ ಪೂರ್ವ ಜಿಲ್ಲೆಯ ಅಟಾರ್ನಿ ಕಚೇರಿಯು ಕ್ರಿಮಿನಲ್ ಚಾರ್ಜ್‌ಶೀಟ್‌ಅನ್ನೂ ಘೋಷಿಸಿದೆ. ಅದಾನಿ ಬಂಧನಕ್ಕೆ ವಾರೆಂಟ್‌ಅನ್ನೂ ಜಾರಿ ಮಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರ ಮಾಡಿರುವ ಅದಾನಿಯ ವಿಚಾರ ಭಾರತದಲ್ಲಿ ಸದ್ದು ಮಾಡುತ್ತಿಲ್ಲ. ದೇಶದಲ್ಲಿ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿಲ್ಲ. ಅದಾನಿ ವಿಚಾರದಲ್ಲಿ ಭಾರತ ಮೌನವಾಗಿದೆ. ಯಾಕೆ?

ಕಳೆದ ಕೆಲವು ವರ್ಷಗಳಿಂದ ಭಾರತದ ರಾಜಕೀಯದಲ್ಲಿ ಅದಾನಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಮೋದಿ ಮತ್ತು ಅದಾನಿ ನಡುವೆ ರಾಜಕೀಯ, ಉದ್ಯಮ ಮೀರಿದ ಒಡನಾಟವಿದೆ. ಪರಸ್ಪರರಿಗಾಗಿ ಇಬ್ಬರೂ ಕೆಲಸ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ರಾಷ್ಟ್ರವ್ಯಾಪಿ ಹಬ್ಬಿದೆ. ಆ ಕಾರಣಕ್ಕೆ, ಇಬ್ಬರ ಹೆಸರನ್ನೂ ಸೇರಿಸಿ ಮೋದಾನಿ (ಮೋದಿ+ಅದಾನಿ) ಎಂಬ ಹೊಸ ಪದಗುಚ್ಛವನ್ನೇ ವಿಪಕ್ಷಗಳು ಸೃಷ್ಟಿಸಿವೆ. ಆದಾಗ್ಯೂ, ಬಿಜೆಪಿ-ರಾಜಕೀಯ-ಅದಾನಿ ಹೊಂದಾಣಿಕೆಯ ಹೊಣೆಗಾರಿಕೆಯನ್ನು ಬಿಜೆಪಿ ಒಪ್ಪುತ್ತಿಲ್ಲ.

ಈಗ ಅದಾನಿ ವಿರುದ್ಧ ಕೇಳಿಬಂದಿರುವ ಲಂಚ, ವಂಚನೆ, ಭ್ರಷ್ಟಾಚಾರ ಆರೋಪದಲ್ಲಿ ಅದಾನಿಯನ್ನು ಬಿಜೆಪಿಗರು ಸಮರ್ಥಿಸುತ್ತಿದ್ದಾರೆ. ಅದಾನಿ ಪರವಾಗಿ ನಿಂತಿದ್ದಾರೆ. ಜೊತೆಗೆ, ಅದಾನಿಯಿಂದ ಲಂಚ ಪಡೆದ ಆರೋಪ ಹೊತ್ತಿರುವ ಅಧಿಕಾರಿಗಳೂ ರಾಜಕೀಯ ಪಕ್ಷಗಳೊಂದಿಗಿದ್ದಾರೆ. ಅಥವಾ ಪಕ್ಷಗಳ ನಾಯಕರ ನಿಕಟವರ್ತಿಗಳಾಗಿದ್ದಾರೆ. ಅವರಲ್ಲಿ, ಬಹುಸಂಖ್ಯಾತರು ಬಿಜೆಪಿ ಜೊತೆಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಬಹುಕೋಟಿ ಲಂಚ ನೀಡಿದ ಅದಾನಿ, ಲಂಚ ಪಡೆದ ಸರ್ಕಾರಿ ಅಧಿಕಾರಿಗಳು, ಈ ಭ್ರಷ್ಟಾಚಾರದಲ್ಲಿ ರಾಜಕೀಯ ಪಾತ್ರ – ಇಷ್ಟೆಲ್ಲ ಇದ್ದರೂ ಈ ಪ್ರಕರಣ ದೇಶದ ಸಾರ್ವಜನಿಕ ಗ್ರಹಿಕೆಗೆ ಸಿಗುತ್ತಿಲ್ಲ. ಆಕ್ರೋಶ ವ್ಯಕ್ತವಾಗುತ್ತಿಲ್ಲ. ಹೆಚ್ಚು ಚರ್ಚೆಗಳು ನಡೆಯುತ್ತಿಲ್ಲ.

Advertisements

ಇದರಲ್ಲಿ, ಆಳುವ ಪಕ್ಷ ಮತ್ತು ಮಾಧ್ಯಮಗಳ ಪಾತ್ರ ಹೆಚ್ಚಿದೆ. ಅದಾನಿಯ ಈ ಬೃಹತ್ ಭ್ರಷ್ಟಾಚಾರವು ಭಾರತದ ಮಾಧ್ಯಮಗಳಲ್ಲಿ ಸುದ್ದಿ-ಚರ್ಚೆಯ ವಿಷಯವೇ ಆಗಿಲ್ಲ. ಆಳುವ ಪಕ್ಷಗಳು ಆರೋಪದ ಕುರಿತ ತನಿಖೆ, ಕ್ರಮಗಳ ಬಗ್ಗೆ ಮಾತನಾಡುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿಯೂ ಅಭಿಪ್ರಾಯ ವ್ಯಕ್ತವಾಗುತ್ತಿಲ್ಲ. ಮಾಧ್ಯಮಗಳು ಉದ್ದೇಶಪೂರ್ವಕ ಮೌನಕ್ಕೆ ಜಾರಿದ್ದರೆ, ಪ್ರಶ್ನಿಸಬಹುದಾದ ಹಲವು ವೇದಿಕೆಗಳು ಅದಾನಿ ವಿಚಾರದಲ್ಲಿ ಜಿಗುಪ್ಸೆಯಿಂದ ಶಸ್ತ್ರತ್ಯಾಗ ಮಾಡಿದಂತಿದೆ.

ಇಂದಿನ ಆಧುನಿಕ ಜಗತ್ತಿನಲ್ಲಿ, ಲಂಚವು ಎಲ್ಲೆಡೆ ವ್ಯಾಪಿಸುತ್ತಿದೆ. ಅಧಿಕಾರ ದುರುಪಯೋಗದ ಸರಕಾಗಿದೆ. 2012ರ ಕಲ್ಲಿದ್ದಲು ಹಗರಣ ಹೊರಬಂದಾಗ ಮಾಧ್ಯಮಗಳು ವ್ಯಾಪಕ ಚರ್ಚೆ ನಡೆಸಿದ್ದವು. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಲೆಕ್ಕಹಾಕಿದ ಅಂದಾಜು ಲೆಕ್ಕದ ಬಗ್ಗೆ ಮಾಧ್ಯಮಗಳು ಅಭಿಪ್ರಾಯ ವ್ಯಕ್ತಪಡಿಸಿದ್ದವು. ಸಾರ್ವಜನಿಕ ಅಭಿಪ್ರಾಯ ರೂಪಿಸಿದ್ದವು. ಇದು, ಭ್ರಷ್ಟಾಚಾರದ ವಿರುದ್ಧ ದೇಶಾದ್ಯಂತ ಬೃಹತ್ ಚಳವಳಿಯನ್ನೂ ಹುಟ್ಟುಹಾಕಿತ್ತು. ಸಾಮಾಜಿಕವಾಗಿ ಆಕ್ರೋಶ, ಅಭಿಪ್ರಾಯಗಳೂ ವ್ಯಕ್ತವಾದವು. ಮುಂದುವರೆದು ಎಎಪಿಯಂತಹ ಪಕ್ಷವೊಂದು ಉದಯಿಸಿತು. ಮತದಾರರಲ್ಲಿಯೂ ಅರಿವು ಮೂಡಿತು.

ಅದಕ್ಕೂ ಮುಂಚೆ, 1987ರಲ್ಲಿ, ಬೋಫೋರ್ಸ್ ಹಗರಣದ ಬಗ್ಗೆಯೂ ವ್ಯಾಪಕ ಚರ್ಚೆಗಳಾಗಿದ್ದವು. ಹೋರಾಟಗಳು ನಡೆದಿದ್ದವು. ಅದೇ ಸಮಯದಲ್ಲಿ ಬಿಜೆಪಿ ಘೋಷಣೆಯೊಂದನ್ನು ಮುನ್ನೆಲೆಗೆ ತಂದಿತು. ‘ಗಲಿ ಗಲಿ ಮೇ ಶೋರ್ ಹೈ, ರಾಜೀವ್ ಗಾಂಧಿ ಚೋರ್ ಹೈ’ (ಬೀದಿ ಬೀದಿಗಳಲ್ಲಿ ಮಾತಿದೆ, ರಾಜೀವ್ ಗಾಂಧಿ ಕಳ್ಳ). ಆ ಸಂದರ್ಭದಲ್ಲಿ ಲಂಚದ ಕಲ್ಪನೆಯನ್ನು ಕಳ್ಳತನವೆಂದು ಕರೆಯಲಾಗಿತ್ತು. ಲಂಚವು ದರೋಡೆ ಎಂಬಂತೆ ಸಾರ್ವಜನಿಕ ತಿಳಿವಳಿಕೆಯನ್ನು ಉಂಟುಮಾಡಿತು. ಇದರಲ್ಲಿ, ರಾಜಕೀಯ ವಾಕ್ಚಾತುರ್ಯದ ಜೊತೆಗೆ ಮಾಧ್ಯಮಗಳ ಪಾತ್ರವೂ ಹೆಚ್ಚಿತ್ತು.

ಆದರೆ, ಈಗ ರಾಜಕೀಯ ವಾಕ್ಚಾತುರ್ಯ ಮಾತ್ರವೇ ಪ್ರಬಲವಾಗಿದೆ. ವಿಪರ್ಯಾಸಕರ ಸಂಗತಿ ಎಂದರೆ, ಲಂಚ, ಭ್ರಷ್ಟಾಚಾರದಿಂದ ಉಂಟಾಗುವ ಸಾರ್ವಜನಿಕ ನಷ್ಟದ ಚಿತ್ರವನ್ನು ಜನರ ಮುಂದೆ ಚಿತ್ರಿಸುವ ಮಾಧ್ಯಮಗಳ ಪಾತ್ರ ನಗಣ್ಯವಾಗಿದೆ. ಮಾಧ್ಯಮ ಪ್ರಚಾರವಿಲ್ಲದೆಯೂ ರಾಹುಲ್ ಗಾಂಧಿಯವರು ಬಿಜೆಪಿ ವಿರುದ್ಧ 2019ರಲ್ಲಿ ‘ಚೌಕಿದಾರ್ ಚೋರ್ ಹೈ’ ಎಂಬ ಘೋಷಣೆಯನ್ನು ಮುನ್ನೆಲೆಗೆ ತಂದರು. ಆದರೆ, ಅದು ಸಾರ್ವಜನಿಕ ಅಭಿಪ್ರಾಯ ಮತ್ತು ತಿಳಿವಳಿಕೆಯನ್ನು ಮೂಡಿಸುವಷ್ಟು ಸಶಕ್ತವಾಗಿರಲಿಲ್ಲ.

ಸಾರ್ವಜನಿಕರಿಗೆ ಸ್ಪಷ್ಟವಾದ ನಷ್ಟದ ಬಗ್ಗೆ ಸುಲಭವಾಗಿ ವಿವರಿಸಲು ಸಾಧ್ಯವಾಗದಿದ್ದಾಗ, ಲಂಚ-ಭ್ರಷ್ಟಾಚಾರದ ಮೇಲಿನ ವಾಗ್ದಾಳಿ ಅಥವಾ ಭಾಷಣವು ಹೆಚ್ಚು ಪ್ರಭಾವ ಬೀರಲಾರದು. ಅದು, ಮೇಲ್ಪದರದಲ್ಲಿ ಗಾಳಿಸುದ್ದಿಯಂತೆ ಹರಿದಾಡುತ್ತದೆ. ರಾಜಕಾರಣಿಗಳು ಶ್ರೀಮಂತರಾಗುತ್ತಿದ್ದಾರೆ ಎಂಬ ಸಾಮೂಹಿಕ ಅಭಿಪ್ರಾಯವನ್ನಷ್ಟೇ ರೂಪಿಸುತ್ತದೆ. ರಾಜಕಾರಣಿಗಳು ಹೊಂದಿರುವ ಆಸ್ತಿಗಳ ಬಗೆಗೆ ಖಂಡನೆ ಮತ್ತು ಆಕ್ರೋಶವನ್ನು ಹುಟ್ಟುಹಾಕುತ್ತದೆ. ಆದರೆ, ಈ ಆಕ್ರೋಶವು ತನಿಖೆ ಮತ್ತು ಕಾನೂನು ಕ್ರಮಗಳನ್ನು ಖಾತ್ರಿಪಡಿಸುವುದಿಲ್ಲ.

ಈ ವರದಿ ಓದಿದ್ದೀರಾ?: ಏನಿದು ಅದಾನಿ ಲಂಚದ ಹಗರಣ: ಇಲ್ಲಿದೆ ಸಂಪೂರ್ಣ ಮಾಹಿತಿ

ಇಂದಿನ, ನವ ಉದಾರವಾದಿ, ಡಿಜಿಟಲ್‌ ಜಗತ್ತಿನಲ್ಲಿ ಬಂಡವಾಳಶಾಹಿ ಮತ್ತು ಆಡಳಿತದ ನಡುವಿನ ಭ್ರಷ್ಟಾಚಾರವನ್ನು ‘ಸಹಕಾರಿ ಭ್ರಷ್ಟಾಚಾರ’ ಎಂದು ಕರೆಯಲಾಗುತ್ತಿದೆ. ಪಕ್ಷಗಳಿಗೆ ಅಧಿಕಾರ, ಬಂಡವಾಳಶಾಹಿಗಳಿಗೆ ಉದ್ದಿಮೆ ವಿಸ್ತರಣೆ ಮತ್ತು ಲಾಭ ಬೇಕು. ಅದಕ್ಕಾಗಿ, ಒಬ್ಬ ಉದ್ಯಮಿ ಪಕ್ಷವೊಂದರ ನೀತಿ-ನಿರ್ಧಾರ, ನಡೆ-ನುಡಿ, ಸರ್ಕಾರ ರಚನೆಯ ಬಗ್ಗೆ ನಿರ್ಧರಿಸುತ್ತಾನೆ. ಪಕ್ಷಗಳನ್ನು ಒಗ್ಗೂಡಿಸಿ ಸಭೆ ನಡೆಸುತ್ತಾನೆ. ಸರ್ಕಾರ ರಚನೆಯವರೆಗೂ ಉದ್ಯಮಿಗಳು ಬಂದಿದ್ದಾರೆ. ಅದಾನಿಯೂ ಮಹಾರಾಷ್ಟ್ರದಲ್ಲಿ ಎನ್‌ಸಿಪಿ, ಬಿಜೆಪಿ ಮತ್ತು ಶಿವಸೇನೆ ನಡುವೆ 2019ರಲ್ಲಿ ಖುದ್ದು ಸಭೆ ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಬೇಕು. ಬಿಜೆಪಿ ಅಧಿಕಾರದಲ್ಲಿರಬೇಕು ಎಂಬ ಹಪಾಹಪಿ ಬಿಜೆಪಿ ನಾಯಕರು, ಪ್ರಧಾನಿ ಮೋದಿಗೆ ಮಾತ್ರವಲ್ಲ ಅದಾನಿಯಲ್ಲೂ ಇತ್ತು. ಯಾಕೆಂದರೆ, ಮಹಾರಾಷ್ಟ್ರದಲ್ಲಿ ಅದಾನಿ ತಮ್ಮ ಉದ್ಯಮವನ್ನು ವಿಸ್ತರಿಸಬೇಕಿತ್ತು. ಅದಕ್ಕೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ ಮಾತ್ರ ಸಾಲುವುದಿಲ್ಲ. ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಅಧಿಕಾರದಲ್ಲಿರಬೇಕಿತ್ತು.

ರಾಜಕೀಯದಲ್ಲಿ ಮೋದಿ, ಉದ್ದಿಮೆಯಲ್ಲಿ ಅದಾನಿ – ಈ ಜೋಡಿ ಇಡೀ ಭಾರತವನ್ನು ವ್ಯಾಪಿಸಿ, ತಮ್ಮದೇ ಚಕ್ರಾಧಿಪತ್ಯ ಸಾಧಿಸಬೇಕು ಎಂಬುದೇ ಮೋದಾನಿ ಫೈಲ್ಸ್. ಅದಕ್ಕಾಗಿ, ಮಾಧ್ಯಮಗಳನ್ನು ಈ ಇಬ್ಬರೂ ಹೆದರಿಸಿ, ಬೆದರಿಸಿ, ಹಣಕೊಟ್ಟು ಮುದ್ದಿಸಿ ಇಟ್ಟುಕೊಂಡಿದ್ದಾರೆ. ಅವರು ನಿರ್ಧರಿಸುವ ವಿಚಾರಗಳು ಮಾತ್ರವೇ ಟಿವಿ ಪರದೆ ಮೇಲೆ ಚರ್ಚೆಯಾಗುತ್ತವೆ. ಅವರು ಬೇಡ ಎಂಬ ವಿಷಯಗಳು ಕಸದ ಬುಟ್ಟಿಯಲ್ಲೂ ಸಿಗುವುದಿಲ್ಲ. ಹೀಗಾಗಿಯೇ, ಅದಾನಿ ವಿರುದ್ಧ ಅಮೆರಿಕ ಮಾಡಿದ ಆರೋಪ, ಭಾರತದಲ್ಲಿ ವಿಚಾರವಾಗಿಲ್ಲ. ಆದರೆ, ಇದು ಭಾರತವು ಮಾತನಾಡಬೇಕಾದ ಗಂಭೀರ ವಿಚಾರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X