ಚಿತ್ತಾಪುರ ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿರುವ ಕೋಲಿ ಸಮಾಜವನ್ನು ಪಕ್ಷಾತೀತವಾಗಿ ಸಂಘಟನೆ ಮಾಡುವುದು ಅತ್ಯಂತ ಅಗತ್ಯವಾಗಿದೆ. ಸಂಘಟನೆ ಸಶಕ್ತವಾದಾಗ ಸಮಾಜಕ್ಕೆ ನ್ಯಾಯ, ಹಕ್ಕು, ಸೌಲಭ್ಯ, ಸ್ಥಾನಮಾನ ಪಡೆಯಲು ಅನುಕೂಲವಾಗುತ್ತದೆ ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣಾ ಸಾಲಿ ಹೇಳಿದರು.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ಕೋಲಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಸಂಬಂಧ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, “ಸಮಾಜದ ಸಂಘಟನೆ ಬಲಗೊಂಡಾಗ ಮಾತ್ರ ಸಮಾಜಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಸಮಾಜದ ಪ್ರತಿಯೊಬ್ಬರೂ ರಾಜಕೀಯ ಪಕ್ಷಪಾತ ಬದಿಗಿಟ್ಟು ಸಮಾಜದ ಸಂಘಟನೆಗೆ ಮುಂದಾಗಬೇಕು” ಎಂದು ಹೇಳಿದರು.
“ಕೋಲಿ ಸಮಾಜದ ಪದಾಧಿಕಾರಿಗಳ ಅಧಿಕಾರಾವಧಿ ಮುಗಿದು ಅಧ್ಯಕ್ಷರು ರಾಜೀನಾಮೆ ನೀಡಿ ಎಲ್ಲ ಘಟಕಗಳನ್ನು ವಿಸರ್ಜಿಸಿದ್ದರಿಂದ ಹೊಸ ಪದಾಧಿಕಾರಿ ಆಯ್ಕೆ ಮಾಡಬೇಕಿದೆ. ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮಾಡಲಾಗುವುದು. ಕೆಲವು ಮಾನದಂಡ ಅನುಸರಿಸುವುದು ಅವಶ್ಯಕ. ತಾಲೂಕು ಘಟಕ ಮತ್ತು ನಗರ ಘಟಕದ ಅಧ್ಯಕ್ಷರ ಆಯ್ಕೆ ನಂತರ ಅವರ ನೇತೃತ್ವದಲ್ಲಿಯೇ ಯುವ ಘಟಕದ ಮತ್ತು ಮಹಿಳಾ ಘಟಕದ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ. ಸಮಾಜದ ಜನರು ಸಹಕರಿಸಬೇಕು ಮತ್ತು ಒಗ್ಗಟ್ಟು ಪ್ರದರ್ಶಿಸಬೇಕು” ಎಂದು ಹೇಳಿದರು.
ಪದಾಧಿಕಾರಿ ಆಯ್ಕೆಗೆ ಮಾನದಂಡ: “ಕೋಲಿ ಸಮಾಜದ ತಾಲೂಕು ಘಟಕ ಹಾಗೂ ನಗರ ಘಟಕದ ಅಧ್ಯಕ್ಷರ ಹುದ್ದೆಗೆ ಆಕಾಂಕ್ಷಿಗಳಾಗುವವರು 40 ರಿಂದ 60 ವರ್ಷದವರಾಗಿರಬೇಕು. ಯುವ ಘಟಕದ ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಗಳಾಗುವವರು 30 ರಿಂದ 40 ವರ್ಷದವರಾಗಿರಬೇಕು” ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣಾ ಸಾಲಿ, ಸಮಾಜದ ಮಾಜಿ ಅಧ್ಯಕ್ಷ ರಾಮಲಿಂಗ ಬಾನರ್ ಅವರು ಜಂಟಿಯಾಗಿ ತಿಳಿಸಿದ್ದಾರೆ.
“ಪದಾಧಿಕಾರಿಗಳ ಆಯ್ಕೆ ಸಂಬಂಧ ನಡೆದ ಮುಖಂಡರ ಸಭೆಯಲ್ಲಿ ಕೂಲಂಕೂಷವಾಗಿ ಚರ್ಚೆ ನಡೆಸಿ ಕೆಲವು ಮಾನದಂಡಗಳನ್ನು ಅನುಸರಿಸಲೇಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ. ಸಮಾಜದ ತಾಲೂಕು ಘಟಕ, ನಗರ ಘಟಕದ ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಗಳಾಗುವವರು ನವೆಂಬರ್ 28 ರಿಂದ ಡಿಸೆಂಬರ್ 5ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕರಣಕುಮಾರ ಅಲ್ಲೂರ್ ಅವರ ಹತ್ತಿರ ನಿಗದಿತ ಅರ್ಜಿ ಪಡೆದುಕೊಂಡು ಅರ್ಜಿ ಸಲ್ಲಿಸಬೇಕು” ಎಂದು ತಿಳಿಸಿದ್ದಾರೆ.
“ಅರ್ಜಿ ಸಲ್ಲಿಸಿದವರ ಪೈಕಿ ಯಾರನ್ನು ಆಯ್ಕೆ ಮಾಡಬೇಕೆಂದು ತಾಲೂಕಿನ ಸಮಾಜದ ಹಿರಿಯ ಮುಖಂಡರು ಪರಾಮರ್ಶೆ ನಡೆಸಿ ತೀರ್ಮಾನ ಮಾಡಲಾಗುತ್ತದೆ. ಪದಾಧಿಕಾರಿ ಆಯ್ಕೆ ಸಂಬಂಧ ಅರ್ಜಿ ಸಲ್ಲಿಸಿದವರು ತಮ್ಮನ್ನು ಹೊರತುಪಡಿಸಿ ಬೇರೆಯವರ ಹೆಸರು ಹೇಳಲು ಅವಕಾಶವಿರುವುದಿಲ್ಲ. ಯಾವುದೇ ರೀತಿಯ ಗುಂಪುಗಾರಿಕೆ ಯಾರೂ ಮಾಡಬಾರದು. ಸಮಾಜದ ಸಂಘಟನೆಗೆ ಸಹಕರಿಸಬೇಕು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಸಂವಿಧಾನ ಗೌರವ ಕೊಟ್ಟಿಲ್ಲವೆಂದು ಹೇಳುವುದು ಸಂವಿಧಾನ ವಿರೋಧಿಯಷ್ಟೇ ಅಲ್ಲ, ದೇಶ ದ್ರೋಹವೂ ಹೌದು: ಚಿಂತಕ ಬಸವರಾಜ್ ಸೂಳಿಭಾವಿ
ಸಭೆಯಲ್ಲಿ ಮಾಜಿ ಅಧ್ಯಕ್ಷ ರಾಮಲಿಂಗ ಬಾನರ್, ಮಾಜಿ ಗೌರವಾಧ್ಯಕ್ಷ ಹಣಮಂತ ಸಂಕನೂರು, ಮುಖಂಡರಾದ ಮಲ್ಲಿಕಾರ್ಜುನ ಎಮ್ಮೆನೋರ್, ಭೀಮಣ್ಣಾ ಹೋತಿನಮಡಿ, ನಿಂಗಣ್ಣಾ ಹೆಗಲೇರಿ, ಸುರೇಶ ಬೆನಕನಳ್ಳಿ, ಮಲ್ಲಿಕಾರ್ಜುನ ಸಂಗಾವಿ, ಹಣಮಂತ ಕಟ್ಟಿ, ತಮ್ಮಣ್ಣ ಡಿಗ್ಗಿ, ದಶರಥ ದೊಡ್ಡಮನಿ, ಲಕ್ಷ್ಮಿಕಾಂತ ಸಾಲಿ, ಕರಣಕುಮಾರ ಅಲ್ಲೂರ್, ಚಂದ್ರು ಕಾಳಗಿ, ಪ್ರಭು ಹಲಕರ್ಟಿ, ಮಹಾದೇವ ಇಟಗಾ ಇದ್ದರು.
ವರದಿ : ಸಂತೋಷ ಕುಮಾರ್, ವಾಲೆಂಟಿಯರ್