ಸಿಎಂ ಸಿದ್ದರಾಮಯ್ಯ ಅವರು ಇಂದು (ನ.28)ದೆಹಲಿಗೆ ತೆರಳುತ್ತಿದ್ದು, ಸಂಪುಟ ಪುನಾರಚನೆ ಬಗ್ಗೆ ಕುತೂಹಲ ಮತ್ತಷ್ಟು ಗರಿಗೆದರಿದೆ.
ಉಪಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ಈಗ ಹೊಸ ಉತ್ಸಾಹದಲ್ಲಿದೆ. ಈಗಾಗಲೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೆಹಲಿಯಲ್ಲಿದ್ದು, ಇದರ ನಡುವೆ ಕಾಂಗ್ರೆಸ್ನಲ್ಲಿ ಸಂಪುಟ ಪುನಾರಚನೆ ಸುದ್ದಿ ಸದ್ದು ಮಾಡುತ್ತಿದೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ತಮ್ಮ ಪಕ್ಷದ ನಾಯಕರು ಅಧಿಕಾರ ತ್ಯಾಗ ಮಾಡಿದ ವಿಷಯ ಪ್ರಸ್ತಾಪಿಸಿ, ‘ಸಚಿವರು ತ್ಯಾಗಕ್ಕೆ ಸಿದ್ಧರಾಗಬೇಕು’ ಎಂದು ಪ್ರಾಸಂಗಿಕವಾಗಿ ಮಂಗಳವಾರ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಕೆಲವರು ಸಚಿವರು ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ಬುಧವಾರ ಮಾತನಾಡಿ, ‘ತ್ಯಾಗ’ಕ್ಕೂ ಸಿದ್ದ ಎಂದೂ ಹೇಳಿದ್ದಾರೆ.
ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಸಚಿವ ಸಂಪುಟ ಪುನಾರಚನೆ ವಿಚಾರವನ್ನು ಖುದ್ದು ಒಪ್ಪಿಕೊಂಡಿದ್ದಾರೆ. “ಸಚಿವ ಸಂಪುಟ ಪುನಾರಚನೆಯ ಕುರಿತು ಮಾತುಗಳಿವೆ. ದೆಹಲಿಯಿಂದ ಪಟ್ಟಿ ಬಂದರೆ ಎಲ್ಲರೂ ಬದಲಾಗಬೇಕು. ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮನೆ ಖಾಲಿ ಮಾಡಿಕೊಂಡು ಹೋಗಬೇಕು. ಕೆಲವರನ್ನು ಸಚಿವ ಸ್ಥಾನದಿಂದ ತೆಗೆಯಬಹುದು. ಇನ್ನೂ ಕೆಲವರ ಖಾತೆಯನ್ನು ಬದಲಾಗಬಹುದು. ನಾನು ಯಾವ ಖಾತೆಯನ್ನೂ ಕೇಳಿಲ್ಲ. ಖಾತೆ ಬದಲಿಸುವುದು ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೇವಲ ಕಾಗದದ ಹುಲಿಯಾಯಿತೇ ಪೂಜಾಸ್ಥಳಗಳ ಕಾಯಿದೆ?
ಮತ್ತೊಂದೆಡೆ ದಿನೇಶ್ ಗುಂಡೂರಾವ್ ಕೂಡ ಎರಡು ವರ್ಷಕ್ಕೊಮ್ಮೆ ಪುನಾರಚನೆ ಆದರೆ ಒಳ್ಳೆಯದದು ಎಂದಿದ್ದಾರೆ. ಹಾಗೆಯೇ ಸಚಿವ ಡಾ.ಎಚ್.ಮಹದೇವಪ್ಪ ಮಾತನಾಡಿದ್ದು, “ಕಾಂಗ್ರೆಸ್ ಪಕ್ಷ ತ್ಯಾಗಕ್ಕೆ ಸಂಕೇತ. ತ್ಯಾಗಕ್ಕಿಂತ ಯಾವುದು ದೊಡ್ಡದಿದೆ’ ಎಂದು ಸಂಪುಟ ಪುನಾರಚನೆ ವಿಷಯವಾಗಿ ಸುದ್ದಿಗಾರರ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಈಗಾಗಲೇ ಹೈಕಮಾಂಡ್ ನಾಯಕರು ಸಿಎಂ, ಕೆಪಿಸಿಸಿ ಅಧ್ಯಕ್ಷರ ಬಳಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿದೆ ಎಂದು ತಿಳಿದುಬಂದಿದೆ. ಒಂದು ತಿಂಗಳ ಹಿಂದೆಯೇ ಸಂಪುಟ ಪುನಾರಚನೆಗೆ ಸೂಚನೆ ಕೊಟ್ಟಿದೆ. ಆದರೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕಾರಣಕ್ಕೆ ಸಿಎಂ ಸಮಯ ಕೋರಿದ್ದರು. ಹೀಗಾಗಿ ಬೆಳಗಾವಿ ಅಧಿವೇಶನದ ಬಳಿಕ ಸಂಪುಟ ಪುನಾರಚನೆ ಬಹುತೇಕ ಪಕ್ಕ ಎನ್ನಲಾಗಿದೆ.
ಅಲ್ಲದೇ ಇಂದಿನ ಭೇಟಿಯಲ್ಲಿ ಹೈಕಮಾಂಡ್ ಜತೆ ಆಪರೇಷನ್, ಕೆಪಿಸಿಸಿ ಅಧ್ಯಕ್ಷಗಾದಿ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.