ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಂಡರವಾಡಿ ಗ್ರಾಮ ಪಂಚಾಯಿತಿಯ ಪ್ರಭಾರಿ ಪಿಡಿಒ ಹರಿಶಂಕರ್ ವಾರದಲ್ಲಿ ಮೂರು ದಿನ ಕೆಲಸ ನಿರ್ವಹಿಸಬೇಕಾಗಿತ್ತು. ಆದರೆ ವಾರದಲ್ಲಿ ಒಂದು ದಿನವೂ ಕೆಲಸಕ್ಕೆ ಬಾರದೆ ಪಂಚಾಯಿತಿ ಅವ್ಯವಸ್ಥೆಗಳ ಆಗರವಾಗಿದೆ ಎಂದು ಕೆಆರ್‌ಎಸ್ ಪಕ್ಷದ ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ ಹೆಬ್ಬಕವಾಡಿ ಆರೋಪಿಸಿದರು.
ಬೆಂಡರವಾಡಿ ಗ್ರಾಮದ ಸಾರ್ವಜನಿಕರು ಪಂಚಾಯಿತಿ ಸಮಸ್ಯೆಗಳನ್ನು ಬಗೆಹರಿಸಲು ಕೆಆರ್‌ಎಸ್ ಪಕ್ಷಕ್ಕೆ ದೂರು ನೀಡಿ ವ್ಯವಸ್ಥೆ ಸರಿಪಡಿಸಲು ಕೋರಿಕೊಂಡ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ್ದೆವು. ಕೆಆರ್‌ಎಸ್ ಪಕ್ಷದ ಕಾರ್ಯಕರ್ತರೊಡನೆ ನ.27ರ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲೂ ಕೂಡಾ ಪಿಡಿಒ ಕೆಲಸಕ್ಕೆ ಹಾಜರಾಗದಿರುವುದು ಖಂಡನೀಯ ಎಂದರು.
“ಪಿಡಿಒ ಕಚೇರಿಗೆ ಬಾರದಿರುವ ವಿಚಾರವಾಗಿ ಅಧಿಕಾರಿಗೆ ಕರೆ ಮಾಡಿದಾಗ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ನೀಡದೆ ಬೇಜವಾಬ್ದಾರಿತನದಿಂದ ನಡೆದುಕೊಂಡಿದ್ದಾರೆ” ಎಂದು ಈ ದಿನ.ಕಾಮ್‌ಗೆ ತಿಳಿಸಿದರು.
“ಮಳವಳ್ಳಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಎಚ್ ಜಿ ಶ್ರೀನಿವಾಸ್ ಅವರಿಗೆ ಕರೆ ಮಾಡಿದಾಗಲೂ ಸರಿಯಾಗಿ ಸ್ಪಂದಿಸಲಿಲ್ಲ. ಮಂಡ್ಯ ಜಿಲ್ಲಾ ಪಂಚಾಯತ್ ಸಿಇಒ ತನ್ವೀರ್ ಶೇಖ್ ಆಸಿಫ್‌ರಿಗೆ ಕರೆ ಮಾಡಿ ಈ ಗ್ರಾಮ ಪಂಚಾಯಿತಿ ಅವ್ಯವಸ್ಥೆಗಳ ಬಗ್ಗೆ ತಿಳಿಸಿ ಮಾಡಿರುವ ಫೇಸ್ಬುಕ್ ಲೈವ್ ಲಿಂಕನ್ನು ಕಳಿಸಲಾಗಿತ್ತು” ಎಂದು ಮಾಹಿತಿ ನೀಡಿದರು.
ಸಿಇಒ ಕಾರ್ಯಪ್ರವೃತ್ತರಾಗಿ ಸಂಬಂಧಪಟ್ಟ ಇಒ ಹಾಗೂ ಪಿಡಿಒಗೆ ತರಾಟೆ ತೆಗೆದುಕೊಂಡ ಕಾರಣ ದಿಢೀರನೆ ಆ ಗ್ರಾಮ ಪಂಚಾಯಿತಿಯ ಪಿಡಿಒ ಹಾಗೂ ಇಒ ಮಧ್ಯಾಹ್ನ 3 ಗಂಟೆಗೆ ಬೆಂಡರವಾಡಿ ಗ್ರಾಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಲ್ಲಿನ ಗ್ರಾಮಸ್ಥರೆಲ್ಲಾ ಸೇರಿ ಆ ಗ್ರಾಮದಲ್ಲಿ ಕುಡಿಯುವ ನೀರಿನ ಅವ್ಯವಸ್ಥೆ ಉಒಂಟಾಗಿದ್ದು, 4 ಒತ್ತುವ ಬೋರ್ ವೆಲ್‌ಗಳು ಬಹು ದಿನಗಳಿಂದ ಕೆಟ್ಟು ನಿಂತಿರುವ ಬಗ್ಗೆ, ಅಸಮರ್ಪಕ ಚರಂಡಿ ನಿರ್ವಹಣೆ, ಕೆಲವು ಗ್ರಾಮಸ್ಥರು ಕಂದಾಯಗಳನ್ನು ಕಟ್ಟಿದ್ದಂತ ಸಂದರ್ಭದಲ್ಲಿ ಯಾವುದೇ ರೀತಿಯ ಬಿಲ್‌ಗಳನ್ನು ವಿತರಿಸದೆ ಇರುವುದರ ಬಗ್ಗೆ ತರಾಟೆಗೆ ತೆಗೆದುಕೊಂಡರು.
ಇದನ್ನು ಓದಿದ್ದೀರಾ? ಮಂಡ್ಯ | ಎಲ್ಲ ಸರ್ಕಾರದಿಂದ ರೈತರು, ಕಾರ್ಮಿಕರ ಶೋಷಣೆ: ರೈತ ಮುಖಂಡ ಕೆಂಪೂಗೌಡ
“ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ ಬಹುತೇಕ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡದಿರುವ ಬಗ್ಗೆ ಅಲ್ಲಿನ ಗ್ರಾಮಸ್ಥರು ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ಗ್ರಾಮದ ಜನರು ಸಮಸ್ಯೆಗಳನ್ನು ಸರಿಪಡಿಸಲು ಕೇಳಿಕೊಂಡು ಹೋದಾಗ ಬಹುತೇಕ ಸಂದರ್ಭಗಳಲ್ಲಿ ಈ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಪಿಡಿಒ ಅಧಿಕಾರಿಗಳು ಜನರ ವಿರುದ್ಧ ಕೇಸ್ ಮಾಡಿಸಿ ಜನರಿಗೆ ತುಂಬಾ ತೊಂದರೆ ಕೊಡುತ್ತಿದ್ದಾರೆಂದು ಅಲ್ಲಿನ ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ” ಎಂದರು.
“ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ, ಮೂಲಭೂತ ವ್ಯವಸ್ಥೆಗಳನ್ನ ಕಲ್ಪಿಸುವ ನಿಟ್ಟಿನಲ್ಲಿ ಈ ಗ್ರಾಮ ಪಂಚಾಯಿತಿಗೆ ಆದಷ್ಟು ಬೇಗ ಕಾಯಂ ಪಿಡಿಒ ನಿಯೋಜಿಸಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ” ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ನಂದೀಶ್, ಮಳವಳ್ಳಿ ತಾಲೂಕು ಅಧ್ಯಕ್ಷ ಮಾದೇಗೌಡ, ಮಳವಳ್ಳಿ ಪ್ರಧಾನ ಕಾರ್ಯದರ್ಶಿ ಮಹಾದೇವಸ್ವಾಮಿ, ಮಳವಳ್ಳಿ ತಾಲೂಕು ಉಪಾಧ್ಯಕ್ಷ ಪರಮೇಶ್, ಮಳವಳ್ಳಿ ತಾಲೂಕು ಕಾರ್ಯದರ್ಶಿ ವಿಷಕಂಠ, ಮದ್ದೂರು ತಾಲೂಕು ಅಧ್ಯಕ್ಷ ಪ್ರಮೋದ್, ಮದ್ದೂರು ತಾಲೂಕು ಪ್ರಧಾನ ಕಾರ್ಯದರ್ಶಿ ಮಹದೇವ ಕೆಜೆ ಸೇರಿದಂತೆ ಬೆಂಡರವಾಡಿ ಗ್ರಾಮಸ್ಥರು ಇದ್ದರು.