ಬೋರ್‌ವೆಲ್ ನೀರು ಬಳಸಿದ್ದಕ್ಕೆ ದಲಿತ ಯುವಕನಿಗೆ ಗ್ರಾಮದ ಸರಪಂಚ್ ಮತ್ತು ಸರಪಂಚ್‌ನ ಪತ್ನಿ ಸೇರಿದಂತೆ ಕನಿಷ್ಠ ಐವರು ಥಳಿಸಿ ಕೊಂದ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ.
ಗ್ವಾಲಿಯರ್ ಜಿಲ್ಲೆಯ 27 ವರ್ಷದ ನಾರದ್ ಜಾತವ್ ಎಂಬ ದಲಿತ ಯುವಕನು ಇಂದರ್‌ಗಢ ಗ್ರಾಮದಲ್ಲಿ ಮಂಗಳವಾರ ತನ್ನ ತಾಯಿಯ ಚಿಕ್ಕಪ್ಪನ ಹೊಲಗಳಿಗೆ ಬೋರ್‌ವೆಲ್ ನೀರನ್ನು ಹಾಕುತ್ತಿದ್ದನು. ಈ ವೇಳೆ ಗ್ರಾಮದ ಸರಪಂಚ್ ಪದಮ್ ಸಿಂಗ್ ಧಕಡ್, ಸರಪಂಚ್‌ನ ಪತ್ನಿ ದಾಖಾ ಬಾಯಿ ಮತ್ತು ಅವರ ಸಹಾಯಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಶಿವಪುರಿ ಜಿಲ್ಲಾ ಪೊಲೀಸರ ಪ್ರಕಾರ ಬೋರ್‌ವೆಲ್ ನೀರು ಬಳಸುವ ವಿಚಾರದಲ್ಲಿ ಒಬಿಸಿ ಧಕಡ್ ಜಾತಿ ಮತ್ತು ಎಸ್‌ಸಿ ಜಾತವ್ ಜಾತಿಯ ನಡುವೆ ಹಲವು ವರ್ಷಗಳಿಂದ ವಾಗ್ವಾದಗಳು ನಡೆಯುತ್ತಿದೆ.
ಇದನ್ನು ಓದಿದ್ದೀರಾ? BIG BREAKING | ತುಮಕೂರು ದಲಿತ ಮಹಿಳೆಯ ಹತ್ಯೆ ಪ್ರಕರಣ; 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಈ ಕ್ರೂರ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಂಪೊಂದು ನಾರದ್ ಜಾತವ್ ಮೇಲೆ ಕೋಲುಗಳು ಮತ್ತು ರಬ್ಬರ್ ಪೈಪ್‌ಗಳಿಂದ ನಿರ್ದಯವಾಗಿ ಹಲ್ಲೆ ನಡೆಸುತ್ತಿರುವುದು ಕಾಣಬಹುದು. ಈ ವೇಳೆ ಮಹಿಳೆಯರು ಸೇರಿದಂತೆ ಹಲವು ಮಂದಿ ನಿಂತು ನೋಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
⚠️Trigger Warning: Disturbing Visuals.
— Hate Detector 🔍 (@HateDetectors) November 27, 2024
In #MadhyaPradesh's #Shivpuri, a 28-year-old #Dalit man was beaten to death by a sarpanch and his family members as the victim irrigated through borewell in #Indiragarh area. pic.twitter.com/VjB5fmX47W
ಸದ್ಯ ಎಂಟು ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಗ್ರಾಮದ ಸರಪಂಚ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಇನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಹಾಗೆಯೇ ಮೃತ ನಾರದ ಜಾತವ್ ಅವರ ಕುಟುಂಬಕ್ಕೆ ನಾಲ್ಕು ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ.
