ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾವ ಮುಖ್ಯಮಂತ್ರಿಯೂ ನನ್ನನ್ನು ಬಂಧಿಸುವಂತೆ ಹೇಳಿಲ್ಲ. ಸಚಿವರೂ ಹೇಳಿಲ್ಲ. ಆ ರೀತಿಯ ಚಿಲ್ಲರೆ ಕೆಲಸ ನಮ್ಮ ಜಿಲ್ಲೆಯಲ್ಲಿ ಆಗಿಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
‘ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಟಿಡಿ ಹಾಗೂ ಅವರ ಪುತ್ರನನ್ನು ಬಂಧಿಸಲು ಸಿದ್ಧತೆಯಾಗಿತ್ತು. ಅದನ್ನು ಎಚ್.ಡಿ.ಕುಮಾರಸ್ವಾಮಿ ತಪ್ಪಿಸಿದ್ದರು. ಇಲ್ಲದಿದ್ದರೆ ಜಿಟಿಡಿ ಮಗನ ಜೊತೆ ಜೈಲಿನಲ್ಲಿರಬೇಕಿತ್ತು’ ಎಂಬ ಶಾಸಕ ಎಚ್.ಡಿ. ರೇವಣ್ಣ ಹೇಳಿಕೆಗೆ ಮೈಸೂರಿನಲ್ಲಿ ಗುರುವಾರ ತಿರುಗೇಟು ನೀಡಿದರು.
“ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳಲು ರಾಜಕೀಯ ಮಾಡಿದ್ದಾರೆ. ಆದರೆ, ವೈಯಕ್ತಿಕವಾಗಿ ಏನನ್ನೂ ಮಾಡಿಲ್ಲ. ಬಂಧಿಸುವಂತಹ ಸೇಡನ್ನು ಯಾರೂ ಇಟ್ಟುಕೊಂಡಿಲ್ಲ” ಎಂದರು.
“ನಾನು ಅಥವಾ ನನ್ನ ಮಗನಿಗೆ ಜೈಲಿಗೆ ಹೋಗುವಂಥ ಸ್ಥಿತಿಯೇನೂ ಬಂದಿಲ್ಲ. ಅಂತಹ ಕೆಲಸವನ್ನೇನೂ ನಾವು ಮಾಡಿಲ್ಲ. ನಮ್ಮ ವಿರುದ್ಧ ಯಾವುದಾದರೂ ಪ್ರಕರಣವಿದ್ದರೆ ತಾನೇ ಬಂಧಿಸುವುದು? ನನ್ನ ವಿರುದ್ಧ ಆ ಹೇಳಿಕೆ ನೀಡಿದ ರೇವಣ್ಣ ಅವರನ್ನು ಬೆಳಗಾವಿ ಅಧಿವೇಶನಕ್ಕೆ ಬಂದಾಗ ಕೇಳುತ್ತೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತೀಯ ಜನತಾ ಪಕ್ಷಕ್ಕೆ ನೀತಿಯೂ ಇಲ್ಲ, ರೀತಿಯೂ ಇಲ್ಲ
“ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದೇ ಎಚ್ ಡಿ ರೇವಣ್ಣ. ಅವರು ಸಮ್ಮಿಶ್ರ ಸರ್ಕಾರದಲ್ಲೇ ಮುಖ್ಯಮಂತ್ರಿ ಆಗಬೇಕಿತ್ತು. ಆ ಬಗ್ಗೆ ರೇವಣ್ಣ ಒಪ್ಪಿ ಕ್ಷಮೆಯನ್ನೂ ಕೇಳಿದ್ದಾರೆ. ಡಿಸಿಎಂ ಆಗಲಾಗುತ್ತಿಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪ ಅವರಿಗಿದ್ದ ಅವಕಾಶವನ್ನು ದೊಡ್ಡಗೌಡರ ಜೊತೆ ಮಾತನಾಡಿ ತಪ್ಪಿಸಿದ್ದರು” ಎಂದು ಆರೋಪಿಸಿದರು.
“ಸಾರ್ವಜನಿಕ ಜೀವನಕ್ಕೆ ಬಂದು 54 ವರ್ಷಗಳಾಗಿವೆ. ರಾಜಕೀಯವಾಗಿ ನನ್ನ ವಿರುದ್ದ ಯಾರೂ ದೂರು ನೀಡಿಲ್ಲ. ನನ್ನ ಮಗ ಹರೀಶ್ ಗೌಡ 2010ರಿಂದ ಸಾರ್ವಜನಿಕ ಸೇವೆಯಲ್ಲಿದ್ದಾನೆ. ಆತನ ವಿರುದ್ಧವೂ ಯಾವುದೇ ಪ್ರಕರಣವಿಲ್ಲ. ದಬ್ಬಾಳಿಕೆ ನಡೆಸುವುದು ಅಥವಾ ಏಕವಚನದಲ್ಲಿ ಮಾತನಾಡುವುದನ್ನು ನಾವು ಮಾಡಿಲ್ಲ” ಎಂದು ಪರೋಕ್ಷವಾಗಿ ರೇವಣ್ಣ ಅವರನ್ನು ಕುಟುಕಿದರು.
“ನಾನು ಮಾಧ್ಯಮಗಳಿಂದ ದೂರವಿದ್ದೇನೆ. ಏನನ್ನೂ ಮಾತನಾಡಬಾರದೆಂದು ನಿರ್ಧರಿಸಿದ್ದೇನೆ. ಆದರೂ ಪದೇ ಪದೇ ನನ್ನ ಹೆಸರನ್ನೇಕೆ ತೆಗೆಯುತ್ತಾರೆ? ನನ್ನ ಕ್ಷೇತ್ರದ ಅಭಿವೃದ್ಧಿ ಬಿಟ್ಟು ಬೇರೇನೂ ವಿಚಾರ ನನ್ನ ತಲೆಯಲ್ಲಿಲ್ಲ” ಎಂದರು.