ಮುಸ್ಲಿಂ ಸಮುದಾಯದ ಮತದಾನದ ಹಕ್ಕನ್ನು ಕಸಿಯಬೇಕೆಂದು ಇತ್ತೀಚಿಗೆ ಹೇಳಿಕೆ ನೀಡಿದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಹೇಳಿಕೆಯನ್ನು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆ ಖಂಡಿಸಿದೆ.” ಶತಮಾನಗಳಿಂದ ಕರ್ನಾಟಕದ ಮುಸ್ಲಿಮರು ಒಕ್ಕಲಿಗ ಸಮುದಾಯದ ಮಠಗಳೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ. ನಿರಂತರವಾದ ರಾಜಕೀಯ ಮತ್ತು ಸಾಮಾಜಿಕ ಭಾಗೀದಾರಿಕೆಗಳನ್ನು ಮುಸ್ಲಿಮರು ಮತ್ತು ಒಕ್ಕಲಿಗರು ಇಂದಿಗೂ ಜೊತೆಯಾಗಿ ನಿಭಾಯಿಸುತ್ತಿದ್ದಾರೆ. ದೇಶ ಮತ್ತು ರಾಜ್ಯ ರಾಜಕಾರಣದಲ್ಲಿ ಒಕ್ಕಲಿಗ ಹಾಗೂ ಮುಸ್ಲಿಂ ಸಮುದಾಯದ ನಡುವಿನ ಬಾಂಧವ್ಯದ ಫಲಶ್ರುತಿಯಾಗಿ ಒಕ್ಕಲಿಗ ಸಮುದಾಯವು ಪ್ರಧಾನಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಹಲವು ಉನ್ನತ ಪೀಠಗಳನ್ನು ಅಲಂಕರಿಸಿ ತುಲನಾತ್ಮಕವಾಗಿ ಹೆಚ್ಚು ಫಲಾನುಭವಿಯಾಗಿದೆ.
ಎರಡು ಸಮುದಾಯಗಳ ನಡುವಿನ ರಾಜಕೀಯ ಸಾಮಾಜಿಕ ಸಂಬಂಧಗಳು ಅಂದೂ ಇತ್ತು, ಇಂದೂ ಇದೆ. ಇಷ್ಟು ಗಾಢವಾಗಿರುವ ಸಮುದಾಯಗಳ ನಡುವಿನ ಸಂಬಂಧಕ್ಕೆ ಕಪ್ಪುಚುಕ್ಕೆ ಎನ್ನುವಂತೆ, ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮಿಯವರು ಸಭೆಯೊಂದರಲ್ಲಿ ಮಾತನಾಡಿ, ಮುಸ್ಲಿಮರ ಮತದಾನದ ಹಕ್ಕನ್ನು ಕಸಿಯಬೇಕೆಂಬ ಆಘಾತಕಾರಿ ಹೇಳಿಕೆ ಸಾರ್ವಜನಿಕವಾಗಿ ನೀಡಿರುವುದು ಖಂಡನಾರ್ಹವಾಗಿದೆ ” ಎಂದು ವೇದಿಕೆಯ ಅಧ್ಯಕ್ಷ ಸೊಹೈಲ್ ಅಹಮದ್ ಮರೂರ್, ಕಾರ್ಯದರ್ಶಿ ಡಾ. ಹಕೀಮ್ ತೀರ್ಥಹಳ್ಳಿ ಪತ್ರಿಕಾ ಹೇಳಿಕೆಯನ್ನು ಹೊರಡಿಸಿದ್ದಾರೆ.
