ತುಮಕೂರು ಜಿಲ್ಲಾಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಂದು ಕೊರತೆ ಸಭೆ ಮುಂದೂಡಲಾಗಿದೆ ಎಂದು ಪ್ರಕಟಣೆ ನೀಡಿ ದಲಿತರನ್ನು ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದಾರೆ ಎಂದು ಜಿಲ್ಲಾಡಳಿತದ ವಿರುದ್ದ ದಲಿತ ಸಂಘಟನೆಗಳ ಮುಖಂಡರುಗಳು ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ನಗರದ ಬಾಲಭವನದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಂದು ಕೊರತೆ ಸಭೆಯ ಆರಂಭದಲ್ಲೇ ಸಭೆಯನ್ನು ಮುಂದೂಡಿ ಪ್ರಕಟಣೆ ನೀಡಿ, ಬಳಿಕ ನಿಗಧಿಯಂತೆ ಇಂದು ಏಕಾಎಕಿ ಸಭೆ ನಡೆಸಿದ ಬಗ್ಗೆ ದಲಿತ ಸಂಘಟನೆಯ ಮುಖಂಡರುಗಳು ಅಸಮಧಾನ ವ್ಯಕ್ತಪಡಿಸಿದರು.
ನ.28 ರಂದು ಗುರುವಾರ ತುಮಕೂರು ಎಸ್. ಸಿ, ಎಸ್. ಟಿ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಆಹ್ವಾನ ನೀಡಿದ್ದರು. ಈ ಬಗ್ಗೆ ಎಲ್ಲಾ ಪತ್ರಿಕಾ ಮಾಧ್ಯಮಗಳಿಗೂ ಪ್ರಕಟಣೆ ಹೊರಡಿಸಲಾಗಿತ್ತು. ದಲಿತರನ್ನು ಸಭೆಗೆ ಆಹ್ವಾನಿಸಿದ ಜಿಲ್ಲಾಡಳಿತ ಕುಂದುಕೊರತೆ ಸಭೆಯನ್ನು ಏಕಾಏಕಿ ಡಿ.07 ಕ್ಕೆ ಮುಂದೂಡಿ ನ.27 ರಂದು ಸಂಜೆ ಪತ್ರಿಕಾ ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದಾರೆ. ಬಳಿಕ ನಿಗದಿತ ದಿನಾಂಕದಂತೆ 28 ರಂದೇ ಸಭೆ ನಡೆಸಲು ತೀರ್ಮಾನಿಸಿ ತರಾತುರಿಯಲ್ಲಿ ದಲಿತ ಮುಖಂಡರುಗಳಿಗೆ ಪೋನ್ ಕರೆ ಮೂಲಕ, ವಾಟ್ಸಾಪ್ ಸಂದೇಶಗಳ ಮೂಲಕ ಮಾಹಿತಿ ನೀಡಿದ್ದಾರೆ.
ಆದರೆ 28 ರಂದು ಬೆಳಗ್ಗೆ ಪತ್ರಿಕೆಯಲ್ಲಿ ಸಭೆ ಮುಂದೂಡಲಾಗಿದೆ ಎಂಬ ಸುದ್ದಿಯನ್ನು ನೋಡಿದ ಹಲವರು ಸಭೆಯಿಂದ ವಂಚಿತರಾಗಿದ್ದಾರೆ. ವಾಟ್ಸಾಪ್ , ಪೋನ್ ಕರೆಯಿಂದ ಮಾಹಿತಿ ಪಡೆದಿದ್ದ ಕೆಲವೇ ಕೆಲವು ದಲಿತ ಮುಖಂಡರುಗಳು ಮಾತ್ರವೇ ಕುಂದು ಕೊರತೆ ಸಭೆಗೆ ಹಾಜಾರಾಗಿದ್ದು ಕಂಡು ಬಂತು. ಸಭೆಯನ್ನು ಮುಂದೂಡಲಾಗಿದೆ ಎಂದು ದಲಿತರನ್ನು
ದಿಕ್ಕು ತಪ್ಪಿಸಿ ಮತ್ತೆ ತರಾತುರಿಯಲ್ಲಿ ಸಭೆ ನಡೆಸಿದ್ದಾದರೂ ಯಾಕೆ ?, ಇದರ ಹಿಂದಿರುವ ಕಾರಣ ಏನ? ಎಂದು ದಲಿತ ಮುಖಂಡರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಮುಖಂಡರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ತಬ್ಬಿಬ್ಬಾದ ಅಧಿಕಾರಿಗಳು ಮತ್ತೊಮ್ಮೆ ಡಿ.16 ರಂದು ಜಿಲ್ಲಾ ಮಟ್ಟದ ಕುಂದುಕೊರತೆ ಸಭೆ ನಡೆಸುತ್ತೇವೆ ಎಂದು ಸಬೂಬು ಹೇಳಿ ಸಮಾಧಾನ ಪಡಿಸುವ ಯತ್ನ ನಡೆಸಿದರು.
ಜಿಲ್ಲಾಡಳಿತದ ಈ ನಡೆ ಹಲವು ಅನುಮಾನ ಹುಟ್ಟು ಹಾಕಿದೆ. ತಾಲೂಕು ಮಟ್ಟದಲ್ಲಿ, ವಿಭಾಗ ಮಟ್ಟದಲ್ಲಿ ಕುಂದು ಕೊರತೆ ಸಭೆ ನಡೆದಿಲ್ಲ ಹಾಗೂ ನಡೆದಿರುವ ಕಡೆಯೂ ಪರಿಣಾಮಕಾರಿಯಾಗಿ ಮಾಡದಿರುವುದರಿಂದ ಜಿಲ್ಲಾ ಮಟ್ಟದ ಸಭೆ ಮೇಲೆ ಒತ್ತಡ ಹೆಚ್ಚಾಗಿದೆ ಎನ್ನುತ್ತಾರೆ ದಲಿತ ಮುಖಂಡರು.
ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ಸಮಾಜ ಕಲ್ಯಾಣ ಇಲಾಖೆಯವರು ಪ್ರೋಸಿಡಿಂಗ್ಸ್ ಮಾಡಿಕೊಳ್ಳದೆ ಇರುವುದು ಸಭೆಯ ಗಮಕ್ಕೆ ಬಂತು. ಸ್ಮಶಾನ ಸಮಸ್ಯೆಯ ಬಗ್ಗೆ ಅಧಿಕಾರಿಗಳು ವಿವರಿಸಲು ಆಗದೆ ಅಂಕಿ, ಸಂಖ್ಯೆ ಹೇಳುವಾಗ ದಲಿತ ಮುಖಂಡರು ಪೂರ್ಣ ಮಾಹಿತಿ ನೀಡಿ ಎಂದು ಪಟ್ಟು ಹಿಡಿದರು. ಕೆಲ ಅಧಿಕಾರಿಗಳು ಸಭೆಗೆ ಗೈರಾಗಿದ್ದರು. ಹಿಂದಿನ ಸಭೆಯಲ್ಲಿ ತಪ್ಪು ಪ್ರೋಸಿಡಿಂಗ್ಸ್ ಮಾಡಿ ಹಿರೇಹಳ್ಳಿಯ ಚಿಕ್ಕಹಳ್ಳಿ ಭೂಮಿ ಸಮಸ್ಯೆ ಬಗೆಹರಿಯದ ಬಗ್ಗೆಯೂ ಸಭೆ ಗಮನ ಸೆಳೆಯಿತು. ಈ ಎಲ್ಲಾವೂ ಜಿಲ್ಲಾಡಳಿತ ಎಸ್. ಸಿ., ಎಸ್. ಟಿ. ಕುಂದು ಕೊರತೆ ಸಭೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ಹೇಳುತ್ತವೆ ಎನ್ನುತ್ತಾರೆ ದಲಿತ ಮುಖಂಡರು
ತುಮಕೂರು ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆ ಕ್ರಮಬದ್ಧವಾಗಿ ನಡೆಯಲಿಲ್ಲ. ಅಧಿಕಾರಿಗಳ ಪೂರ್ವ ಸಿದ್ದತೆ ಕೊರತೆ ಎದ್ದು ಕಾಣುತ್ತಿತ್ತು. ಈ ರೀತಿಯ ಗೊಂದಲದ, ಪೂರ್ವ ತಯಾರಿ ರಹಿತ ಕುಂದು ಕೊರತೆ ಸಭೆಗಳು ದಲಿತರಿಗೆ ಭರವಸೆ ಮೂಡಿಸುತ್ತಿಲ್ಲ. ಆದರೆ ಜಿಲ್ಲಾಡಳಿತದ ದಲಿತರ ಸಮಸ್ಯೆಯನ್ನು ತಾತ್ಸಾರದಿಂದ ಕಾಣುತ್ತಿದೆ ಎಂಬುದು ಈ ಎಲ್ಲದರಿಂದ ತಿಳಿಯುತ್ತದೆ. ಹಾಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿಗಳು ಇಂತಹ ಕಾಟಚಾರದ ಸಭೆ ನಡೆಸದಂತೆ ನಿರ್ದೇಶನ ನೀಡಬೇಕು ಎಂದು ಚಿಕ್ಕನಾಯಕನಹಳ್ಳಿ ದೇವರಾಜ್ ಆಗ್ರಹಿಸಿದ್ದಾರೆ.