ರಸ್ತೆ ದುರಸ್ತಿಗಾಗಿ ಪ್ರತಿಭಟನೆ ನಡೆಸಿದ್ದಕ್ಕೆ ಪೊಲೀಸರು ಎಫ್ಐಆರ್ ದಾಖಲಿಸಿದ ಪರಿಣಾಮ ಆಕ್ರೋಶ ಭುಗಿಲೆದ್ದಿದ್ದು, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ವರ್ಗಾಯಿಸಬೇಕೆಂದು ಡಿವೈಎಫ್ಐ ಕಾರ್ಯಕರ್ತರು ಮಂಗಳೂರು ನಗರದ ರಾವ್ ಅಂಡ್ ರಾವ್ ವೃತ್ತದಲ್ಲಿ ರಸ್ತೆತಡೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಕಾರ್ಯಕರ್ತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರೇ ಜಮಾವಣೆಗೊಂಡಿದ್ದರು. ಪೊಲೀಸ್ ಕಮಿಷನರ್ ವಿರುದ್ಧ ಧಿಕ್ಕಾರ ಕೂಗುತ್ತ ಮೆರವಣಿಗೆ ಮಾಡಲು ಮುಂದಾಗುತ್ತಿದ್ದಂತೆ ಪೊಲೀಸರು ಮುತ್ತಿಗೆ ಹಾಕಿದ್ದಾರೆ. ರಸ್ತೆಯಲ್ಲಿ ಕುಳಿತ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ಒಬ್ಬೊಬ್ಬರನ್ನೇ ಪೊಲೀಸ್ ಬಸ್ಸಿಗೆ ತುಂಬಿಸಿದ್ದಾರೆ.

ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಜ್ ನೇತೃತ್ವದಲ್ಲಿ ಮಹಿಳೆಯರನ್ನು ಒಳಗೊಂಡಿದ್ದ 40ಕ್ಕೂಾಧಿಕ ಮಂದಿ ಕಾರ್ಯಕರ್ತರು ಸೇರಿದ್ದರು. ಪೊಲೀಸರು ಬಲವಂತವಾಗಿ ರಸ್ತೆಯಿಂದ ಎಬ್ಬಿಸಿ ಬಸ್ಸಿಗೆ ತುಂಬಿಸಿದ್ದಾರೆ.

ಈ ವೇಳೆ ಸಿಡಿದೆದ್ದ ಕಾರ್ಯಕರ್ತರು ಪೊಲೀಸ್ ಕಮಿಷನರ್ ಮತ್ತು ಸ್ಪೀಕರ್ ಯುಟಿ ಖಾದರ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಆನಂತರ, ಅವರನ್ನೆಲ್ಲ ವಶಕ್ಕೆ ಪಡೆದು ಪಾಂಡೇಶ್ವರ ಠಾಣೆಗೆ ಒಯ್ದಿದ್ದಾರೆ. ಕಾರ್ಯಕರ್ತರ ನಡುವೆ ತಳ್ಳಾಟ ಸಂದರ್ಭದಲ್ಲಿ ಕದ್ರಿ ಠಾಣೆ ಎಎಸ್ಐ ಮುತ್ತಪ್ಪ ಅಸ್ವಸ್ಥರಾಗಿದ್ದು ನೆಲಕ್ಕೆ ಬಿದ್ದಿದ್ದಾರೆ. ಅವರನ್ನು ಕೂಡಲೇ ಪೊಲೀಸರು ಆಸ್ಪತ್ರೆಗೆ ಒಯ್ದ ಪ್ರಸಂಗವೂ ನಡೆದಿದೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷ
ಎರಡು ದಿನಗಳ ಹಿಂದೆ ಕುಳೂರು ಸೇತುವೆಯ ಬಳಿ ನಂತೂರು-ಸುರತ್ಕಲ್ ಹೆದ್ದಾರಿ ದುರಸ್ತಿ ಮಾಡಬೇಕೆಂದು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆದಿತ್ತು.

ಪೊಲೀಸ್ ಅನುಮತಿ ಇಲ್ಲದೆಯೂ ಪ್ರತಿಭಟನೆ ನಡೆಸಿದ್ದಾರೆಂದು ಕಾವೂರು ಠಾಣೆಯಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಮುನೀರ್ ಕಾಟಿಪಳ್ಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. 15 ದಿನದಲ್ಲಿ ಎರಡನೇ ಎಫ್ಐಆರ್ ದಾಖಲಿಸಿದ್ದನ್ನು ವಿರೋಧಿಸಿ, ಪೊಲೀಸ್ ಕಮಿಷನರ್ ವರ್ಗಾವಣೆ ಆಗ್ರಹಿಸಿ ಇದೀಗ ಮಂಗಳೂರು ನಗರದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ.
