ಸ್ಥಳೀಯ ನ್ಯಾಯಾಲಯ ನೀಡಿದ ಸಂಭಲ್ ಮಸೀದಿ ಸಮೀಕ್ಷೆ ಆದೇಶದ ವಿರುದ್ಧ ಉತ್ತರ ಪ್ರದೇಶದ ಸಂಭಲ್‌ನ ಜಾಮಾ ಮಸೀದಿಯ ವ್ಯವಸ್ಥಾಪನಾ ಸಮಿತಿಯು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು ಶುಕ್ರವಾರ ಅರ್ಜಿ ವಿಚಾರಣೆ ನಡೆಸಲಿದೆ ಎಂದು ವರದಿಯಾಗಿದೆ.
ಭಾನುವಾರ, ಶಾಹಿ ಜಾಮಾ ಮಸೀದಿಯ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್ಐ) ಸಮೀಕ್ಷೆಯನ್ನು ವಿರೋಧಿಸುವ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಮೂವರು ಸಾವನ್ನಪ್ಪಿದ್ದರು. ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ನಾಲ್ಕನೇ ವ್ಯಕ್ತಿ ಸೋಮವಾರ ನಿಧನರಾಗಿದ್ದಾರೆ.
ನವೆಂಬರ್ 19ರಂದು ನ್ಯಾಯಾಲಯದ ಆದೇಶದ ಮೇರೆಗೆ ಜಾಮಾ ಮಸೀದಿಯನ್ನು ಮೊದಲು ಸಮೀಕ್ಷೆ ಮಾಡಿದಾಗಿನಿಂದ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಪರಿಶೀಲಿಸುವ ಸಲುವಾಗಿ ಪೊಲೀಸರು ಹಲವಾರು ಅಪ್ರಾಪ್ತರು ಸೇರಿದಂತೆ ಸುಮಾರು 100 ಮಂದಿ ಫೋಟೋಗಳನ್ನು ಗುರುತಿಸಲು ಬುಧವಾರ ಬಿಡುಗಡೆ ಮಾಡಿದ್ದರು.
“ಸಿಸಿಟಿವಿ ಕ್ಯಾಮೆರಾಗಳು ಮತ್ತು ವಿಡಿಯೊಗಳ ತುಣುಕುಗಳನ್ನು ಬಳಸಿಕೊಂಡು ಪಡೆದ ಫೋಟೋಗಳನ್ನು ಸಂಭಾಲ್‌ನಾದ್ಯಂತ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರದರ್ಶಿಸಲಾಗುವುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಅಧಿಕೃತ ವಕ್ತಾರರು ಮಾತನಾಡಿ, “ಹಿಂಸಾಚಾರದಲ್ಲಿ ಭಾಗಿಯಾಗಿರುವವರಿಂದ ನಾಶವಾದ ಸಾರ್ವಜನಿಕ ಆಸ್ತಿಯ ಹಾನಿಯನ್ನು ರಾಜ್ಯವು ವಸೂಲಿ ಮಾಡುತ್ತದೆ. ಕಲ್ಲು ತೂರಾಟಗಾರರು ಮತ್ತು ದುಷ್ಕರ್ಮಿಗಳ ಫೋಟೋಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು. ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ ಬಹುಮಾನವನ್ನು ಘೋಷಿಸಲಾಗುವುದು. ಅಶಾಂತಿಗೆ ಕಾರಣರಾದವರ ವಿರುದ್ಧ ಸರ್ಕಾರ ದೃಢವಾದ ನಿಲುವನ್ನು ತೆಗೆದುಕೊಳ್ಳುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸತ್ಯ ಹೇಳುವುದು ದೇಶದ್ರೋಹ ಅಲ್ಲ- ಸಂವಿಧಾನ ವಿರೋಧ ಅಸಲು ದೇಶದ್ರೋಹ
ಹಿಂಸಾಚಾರದ ನಂತರ, ಸಮಾಜವಾದಿ ಪಕ್ಷದ ಸಂಭಾಲ್ ಸಂಸದ ಜಿಯಾ-ಉರ್-ರೆಹಮಾನ್ ಬಾರ್ಕ್ ಮತ್ತು ಶಾಸಕ ಇಕ್ಬಾಲ್ ಮಹಮ್ಮದ್ ಅವರ ಪುತ್ರ ಸೊಹೈಲ್ ಮಹಮ್ಮದ್ ವಿರುದ್ಧ ಉತ್ತರ ಪ್ರದೇಶದ ಸಂಭಾಲ್ ನಗರದಲ್ಲಿ ಭಾನುವಾರ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
“ಮಸೀದಿಯ ನಿರ್ವಹಣಾ ಸಮಿತಿಯ ಭಾಗವಾಗಿರುವ ವಕೀಲ ಜಾಫರ್ ಅಲಿ ವಿರುದ್ಧವೂ ಆರೋಪವಿದ್ದು, ಅವರು ಎರಡನೇ ಸಮೀಕ್ಷೆಯ ಮಾಹಿತಿಯನ್ನು ಆರೋಪಿ ಶಾಸಕರಿಗೆ ಸೋರಿಕೆ ಮಾಡಿದ್ದಾರೆ” ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.