ಬಂಗಾಳಕೊಲ್ಲಿಯಲ್ಲಿ ತೀವ್ರಗೊಳ್ಳುತ್ತಿರುವ ಫೆಂಗಲ್ ಚಂಡಮಾರುತದಿಂದಾಗಿ ತಮಿಳುನಾಡು, ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಕರ್ನಾಟಕದ ಒಳನಾಡಿನಲ್ಲಿಯೂ ಮಳೆ ಮುನ್ಸೂಚನೆಯನ್ನು ಇಲಾಖೆ ನೀಡಿದೆ.
ಇನ್ನು ಚಂಡಮಾರುತ ಹಿನ್ನೆಲೆ ಈಗಾಗಲೇ ಪುದುಚೇರಿಯಲ್ಲಿ ಶುಕ್ರವಾರ ಮತ್ತು ಶನಿವಾರದಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಚಂಡಮಾರುತ ತೀವ್ರಗೊಳ್ಳಲಿದ್ದು, ತಮಿಳುನಾಡಿನ ಕರಾವಳಿ ಪ್ರದೇಶಗಳು, ಪುದುಚೇರಿ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆ, ಗಾಳಿ ಇರಲಿದೆ.
ನವೆಂಬರ್ 29, 30ರಂದು ಉತ್ತರ ತಮಿಳುನಾಡಿನ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ. ನವೆಂಬರ್ 29ರಂದು ಆಂಧ್ರಪ್ರದೇಶ, ಯಾನಂ ಮತ್ತು ರಾಯಲಸೀಮಾನಲ್ಲಿ ಮಳೆ ಸುರಿಯಲಿದೆ. ನವೆಂಬರ್ 30 ಮತ್ತು ಡಿಸೆಂಬರ್ 1ರಂದು ಕೇರಳ, ಮಾಹೆ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಸೂಚನೆ ನೀಡಿದೆ.
VIDEO | Cyclone Fengal: The IMD has issued an advisory for fishermen across Tamil Nadu, urging them to avoid venturing into the sea until November 30 due to adverse weather conditions. Visuals are from Thoothukudi.
— Press Trust of India (@PTI_News) November 29, 2024
(Full video available on PTI Videos – https://t.co/n147TvrpG7) pic.twitter.com/Fs9TToKprM
ಇದನ್ನು ಓದಿದ್ದೀರಾ? ಫೆಂಗಲ್ ಚಂಡಮಾರುತ | ನಾಲ್ಕು ರಾಜ್ಯಗಳಿಗೆ ಎಚ್ಚರಿಕೆ, ಬೆಂಗಳೂರಿಗೂ ಮೂರು ದಿನ ಮಳೆ
ಇನ್ನು ಮಳೆಯ ಕಾರಣ ಖಾಸಗಿ ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳು ಸೇರಿದಂತೆ ಪುದುಚೇರಿ ಮತ್ತು ಕಾರೈಕಲ್‌ನ ಎಲ್ಲಾ ಶಾಲಾ-ಕಾಲೇಜುಗಳನ್ನು ಶುಕ್ರವಾರದಿಂದ ಎರಡು ದಿನಗಳ ಕಾಲ ಮುಚ್ಚಲಾಗುವುದು ಎಂದು ಪುದುಚೇರಿ ಗೃಹ ಸಚಿವ ಎ ನಮಸ್ಸಿವಾಯಂ ಘೋಷಿಸಿದ್ದಾರೆ.
ಇನ್ನು ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳ ಒಂದೆರೆಡು ಕಡೆಗಳಲ್ಲಿ ಹಗುರ / ಸಾಧಾರಣ
ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಒಂದೆರೆಡು ಕಡೆಗಳಲ್ಲಿ ಹಗುರ
ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಮುಂಜಾನೆ ಮಂಜು/ ಇಬ್ಬನಿ ಇರುವ ನಿರೀಕ್ಷೆಯಿದೆ. ಉತ್ತರ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1-3 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುತ್ತದೆ ಎಂದೂ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.
