ಯಡಿಯೂರಪ್ಪ ವಿರುದ್ಧ ಈಗಾಗಲೇ ಹಲವು ಪ್ರಕರಣಗಳಿವೆ. ಭ್ರಷ್ಟಾಚಾರ, ಕೋವಿಡ್ ಹಗರಣ - ಹೀಗೆ ವಿವಿಧ ಪ್ರಕರಣಗಳು ಮತ್ತೆ ತನಿಖೆಗೆ ಒಳಪಟ್ಟಂತೆ, ಪೋಕ್ಸೋ ಪ್ರಕರಣದ ವಿಚಾರಣೆಯೂ ಬಿರುಸುಗೊಳ್ಳಬೇಕಿದೆ. ಜೈಲು ವಾಸ ಅನುಭವಿಸಬೇಕಾದ ಪ್ರಕರಣದಲ್ಲಿ ರಾಜಕೀಯ ಬಲದಿಂದ ಹೊರಗಿರುವುದು ಅಸಮರ್ಥನೀಯ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಆದರೆ, ಬಿಜೆಪಿ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಅವರನ್ನು ರಕ್ಷಿಸುತ್ತಿದೆ ಎಂಬ ಆರೋಪ ಗಟ್ಟಿಗೊಳ್ಳುತ್ತಿದೆ. ದ್ವೇಷ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುವುದಿಲ್ಲ ಎಂದು ಸರ್ಕಾರದ ಪರ ಅಭಿಯೋಜಕರು ವಾಗ್ದಾನ ನೀಡಿರುವುದು ಸೌಹಾರ್ದ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ, ರಾಜ್ಯದಲ್ಲಿ ಹಿಂದುತ್ವ ಕೋಮುವಾದಿಗಳ ದಾಂಧಲೆಯನ್ನು ಹತ್ತಿಕ್ಕುವಲ್ಲಿ ಸರ್ಕಾರ ವಿಫಲವಾಗಿದೆ. ಇದೀಗ ಮುಡಾ, ವಕ್ಫ್ ಪ್ರಕರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಬುಡಕ್ಕೆ ಬಿಜೆಪಿ ಬೆಂಕಿ ಹಚ್ಚಿದೆ. ಈಗ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್, ತನ್ನ ಬತ್ತಳಿಕೆಯಲ್ಲಿರುವ ಒಂದೊಂದೆ ಬಾಣಗಳನ್ನು ಬಿಜೆಪಿಯತ್ತ ಪ್ರಯೋಗಿಸುತ್ತಿದೆ.
ಈ ಹಿಂದೆ ಕೋವಿಡ್ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರಿಗೆ ನಡುಕ ಹುಟ್ಟಿಸಲಾಗಿತ್ತು. ಈಗ 2020ರಲ್ಲಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಸಲ್ಲಿಸಿದ್ದ ಭ್ರಷ್ಟಾಚಾರ ದೂರಿನ ಬಗ್ಗೆ ಬಿಎಸ್‌ವೈ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೆಂದು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ.
ಏನಿದು ಪ್ರಕರಣ, ಈಗ ಏಕೆ ಮುನ್ನೆಲೆಗೆ ಬಂತು?
ಬಿಡಿಎ ಅಪಾರ್ಟ್‌ಮೆಂಟ್ ನಿರ್ಮಾಣ ಟೆಂಡರ್‌ನಲ್ಲಿ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿಯಿಂದ 12 ಕೋಟಿ ರೂಪಾಯಿ ಲಂಚ ಪಡೆದಿದ್ದರು ಎಂದು 2020ರಲ್ಲಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ದೂರು ಸಲ್ಲಿಸಿದ್ದರು. ಯಡಿಯೂರಪ್ಪರ ಸೂಚನೆಯಂತೆ ಬಿಡಿಎ ಆಯುಕ್ತರಾಗಿ ನೇಮಕಗೊಂಡ ಡಾ.ಜಿ.ಸಿ. ಪ್ರಕಾಶ್, ಬಿಎಸ್‌ವೈ ಹೆಸರಿನಲ್ಲಿ ರಾಮಲಿಂಗಂ ಬಿಲ್ಡರ್‌ನಿಂದ 12 ಕೋಟಿ ರೂಪಾಯಿ ಲಂಚ ಪಡೆದಿದ್ದರು. ಆ ಹಣವನ್ನು ಪ್ರಕಾಶ್ ಅವರಿಂದ ಕೆ ರವಿ ಎಂಬಾತ ಪಡೆದು ಬಿ.ವೈ. ವಿಜಯೇಂದ್ರ ಅವರಿಗೆ ತಲುಪಿಸಿದ್ದಾನೆ. ಇದರ ಆಡಿಯೋ ಕೂಡಾ ಇದೆ ಎಂಬುದು ಟಿ ಜೆ ಅಬ್ರಹಾಂ ಆರೋಪ. ಈ ಬಗ್ಗೆ ಪ್ರಾಸಿಕ್ಯೂಷನ್ ಅನುಮತಿಗೆ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಆದರೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಈ ಮನವಿಯನ್ನು ತಿರಸ್ಕರಿಸಿದ್ದರು.
ಇದನ್ನು ಓದಿದ್ದೀರಾ? ಆಗಷ್ಟೇ ಹುಟ್ಟಿದ್ದ ಕಂಪನಿಗಳಿಂದ ದುಬಾರಿ ಬೆಲೆಗೆ ಪಿಪಿಇ ಕಿಟ್ ಖರೀದಿ; ಚೀನಾ ಲಾಭಕ್ಕಾಗಿ ಬಿಎಸ್‌ವೈ, ಶ್ರೀರಾಮುಲು ಭ್ರಷ್ಟಾಚಾರ!
ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣವನ್ನು ಬಿಜೆಪಿ ತನ್ನ ರಾಜಕೀಯ ಆಯುಧವನ್ನಾಗಿಸಿದ ಬೆನ್ನಲ್ಲೇ ಕಾಂಗ್ರೆಸ್ ಬಿಜೆಪಿಯ ಹಿರಿಯ ನಾಯಕರಿಂದ ಹಿಡಿದು ಎಲ್ಲಾ ನಾಯಕರುಗಳ ವಿರುದ್ದದ ಪ್ರಕರಣಗಳನ್ನು ಬಯಲಿಗೆಳೆಯಲು ಸನ್ನದ್ಧವಾಗಿದೆ. ಕಾರ್ಯ ಶುರು ಮಾಡಿದೆ.
ಈಗಾಗಲೇ ಕೊರೋನ ಹಗರಣದ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗವು ತನಿಖೆ ನಡೆಸಿದೆ. ಹಗರಣ ನಡೆದಿರುವುದು ಸ್ಪಷ್ಟವೆಂದು ಹೇಳಿದೆ. ಹಾಗೆಯೇ ಆ ವೇಳೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರಾಗಿದ್ದ ಬಿ ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಶಿಫಾರಸು ಕೂಡಾ ಮಾಡಿದೆ. ಇದರ ನಡುವೆ ಪೋಕ್ಸೋ ಪ್ರಕರಣದ ತನಿಖೆ, ವಿಚಾರಣೆ ಆಮೆಗತಿಯಲ್ಲಿ ನಡೆಯುತ್ತಿದೆ. ಈಗ 12 ಕೋಟಿ ರೂಪಾಯಿ ಲಂಚ ಪಡೆದ ಪ್ರಕರಣ ಮುನ್ನೆಲೆಗೆ ಬಂದಿದೆ.
ಪೋಕ್ಸೋ ಪ್ರಕರಣ ಮುಚ್ಚಿ ಹೋಗದಿರಲಿ
ಯಡಿಯೂರಪ್ಪ ವಿರುದ್ಧ ಈಗಾಗಲೇ ಹಲವು ಪ್ರಕರಣಗಳಿವೆ. ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಪ್ರಾಸಿಕ್ಯೂಷನ್ ತನಿಖೆಗೆ ಸರ್ಕಾರ ನಿರ್ಧರಿಸಿರುವಾಗ ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣವನ್ನು ನಾವು ಮರೆಯುವಂತಿಲ್ಲ. ವಾಸ್ತವವಾಗಿ ಪೋಕ್ಸೋ ಪ್ರಕರಣದಲ್ಲಿ ಬಿಎಸ್‌ವೈ ಜೈಲು ಸೇರಬೇಕಾಗಿತ್ತು. ಆದರೆ ಈ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ನಿಲುವು ಕೊಂಚ ಸಡಿಲಗೊಳ್ಳುತ್ತದೆ. ಪೋಕ್ಸೋ ಸಂಬಂಧ ಪೋಕ್ಸೋ 1ನೇ ಫಾಸ್ಟ್ ಟ್ರ್ಯಾಕ್ ಕೋರ್ಟ್‌ನ ನ್ಯಾಯಾಧೀಶರಾದ ರಮೇಶ್ ಅವರು ಬಿಎಸ್‌ವೈ ವಿರುದ್ಧ ಜಾಮೀನುರಹಿತ ಬಂಧನ ವಾರೆಂಟ್ ಜಾರಿ ಮಾಡಿದ್ದರು. ಆದರೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದರೆಂಬ ಸಬೂಬಿನೊಂದಿಗೆ ಕರ್ನಾಟಕ ಹೈಕೋರ್ಟ್ ಬಿಎಸ್‌ವೈ ಬಂಧನಕ್ಕೆ ತಡೆ ನೀಡಿದೆ. ಪ್ರಕರಣದ ವಿಚಾರಣೆಗೆ ದಿನ ದೂಡುತ್ತಿದೆ. ಭ್ರಷ್ಟಾಚಾರ, ಕೋವಿಡ್ ಹಗರಣ – ಹೀಗೆ ವಿವಿಧ ಪ್ರಕರಣಗಳು ಮತ್ತೆ ತನಿಖೆಗೆ ಒಳಪಟ್ಟಂತೆ, ಪೋಕ್ಸೋ ಪ್ರಕರಣದ ವಿಚಾರಣೆಯೂ ಬಿರುಸುಗೊಳ್ಳಬೇಕಿದೆ. ಜೈಲು ವಾಸ ಅನುಭವಿಸಬೇಕಾದ ಪ್ರಕರಣದಲ್ಲಿ ರಾಜಕೀಯ ಬಲದಿಂದ ಹೊರಗಿರುವುದು ಅಸಮರ್ಥನೀಯ.
