ಎಂಆರ್‌ಪಿ ದರಕ್ಕಿಂತ ಅಧಿಕ ಬೆಲೆಗೆ ರಕ್ತ ಸಂಗ್ರಹ ಟ್ಯೂಬ್ ಮಾರಾಟ ಮಾಡುತ್ತಿದ್ದ ಮೆಡಿಕಲ್ ಶಾಪ್‌ಗೆ ಬೀಗ ಹಾಕಿ ಸೀಜ್ ಮಾಡಲಾಗಿದೆ.
ಚಿಂತಾಮಣಿ ತಾಲ್ಲೂಕಿನ ಬುರಡಗುಂಟೆ ಗ್ರಾಮದಲ್ಲಿರುವ ರೋಹಿಣಿ ಮೆಡಿಕಲ್ ಅಂಡ್ ಜನರಲ್ ಸ್ಟೋರ್ ನಿಗದಿತ ದರಕ್ಕಿಂತ ಹೆಚ್ಚು ದರದಲ್ಲಿ ಔಷಧ ಮಾರಾಟ ಮಾಡುತ್ತಿದ್ದರೆಂಬ ದೂರಿನ ಮೇರೆಗೆ, ಸಹಾಯಕ ಔಷಧ ನಿಯಂತ್ರಕರು ಹಾಗೂ ಪರವಾನಿಗೆ ಪ್ರಾಧಿಕಾರಿ ಬಿ.ಎನ್.ಸವಿತಾ ಸದರಿ ಮೆಡಿಕಲ್ ಸ್ಟೋರ್‌ಗೆ ಬೀಗ ಹಾಕಿ, ಮಾರಾಟಕ್ಕೆ ನೀಡಿದ್ದ ಪರವಾನಗಿಯನ್ನು ರದ್ದುಗೊಳಿಸಿದ್ದಾರೆ.

ಬುರಡಗುಂಟೆ ಗ್ರಾಮದ ವ್ಯಕ್ತಿಯೊಬ್ಬರು 2024ರ ಸೆಪ್ಟೆಂಬರ್ 1 ರಂದು ಮೆಡಿಕಲ್‌ನಲ್ಲಿ ರಕ್ತ ಸಂಗ್ರಹ ಟ್ಯೂಬ್ ಖರೀದಿಸಿದ್ದು, 2.80ರೂಪಾಯಿ ಬೆಲೆಯ ಟ್ಯೂಬನ್ನು 55ರೂಪಾಯಿಗೆ ಮಾರಾಟ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ದೂರನ್ನು ಪರಿಶೀಲಿಸಿದ ಅಧಿಕಾರಿಗಳು ಮಾರಾಟದ ಬಿಲ್, ರಿಜಿಸ್ಟಾರ್, ವೈದ್ಯರ ಕುರಿತು ಸೂಕ್ತ ಮಾಹಿತಿ ಹೊಂದಿಲ್ಲದ ಕಾರಣ ಸೀಜ್ ಮಾಡಿದ್ದಾರೆ.

ಇದನ್ನೂ ಓದಿ : ಚಿಂತಾಮಣಿ | ಬಸ್ಸು, ಕಾರು ನಡುವೆ ಭೀಕರ ಅಪಘಾತ; ಕಾರು ಚಾಲಕ ಸಾವು

ಮೆಡಿಕಲ್ ಸ್ಟೋರ್ ಮಾಲೀಕರು ಔಷಧ ಮತ್ತು ಸೌಂದರ್ಯ ವಸ್ತುಗಳ ನಿಯಮ 1945ರ ನಿಯಮ 65 ಉಲ್ಲಂಘಿಸಿರುವುದು ದೃಢಪಟ್ಟಿದೆ. ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಭೀತಿಯ ಹಿನ್ನೆಲೆ ಮೆಡಿಕಲ್ ಸ್ಟೋರ್ ಪರವಾನಿಗೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.