ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಕುವೆಂಪು ಅವರು ಕನ್ನಡ ನಾಡಿನ ಅಸ್ಮಿತೆಯಂತಿದ್ದರು. ಅವರ ಬರಹಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಕುವೆಂಪು ಓದು ಕಮ್ಮಟ ಸಹಕಾರಿಯಾಗಲಿದ್ದು, ಅವರ ಕೃತಿಗಳ ಮರುಓದು ಹೊಸವಿಚಾರಗಳನ್ನು ನೀಡುತ್ತದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ ಚನ್ನಪ್ಪ ಕಟ್ಟಿ ಹೇಳಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ಹಾಗೂ ವಿಜಯಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುವೆಂಪು ಓದು: ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಧಿಕಾರದ ಸದಸ್ಯ ಜೆ ಕರಿಯಪ್ಪ ಮಾಳಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, “ಕುವೆಂಪು ಓದು ಕಮ್ಮಟವು ಈ ವರ್ಷದ ಕಾರ್ಯಕ್ರಮಗಳನ್ನು ಇಂಡಿಯಿಂದಲೇ ಪ್ರಾರಂಭಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಭಾಷಾಭಾರತಿ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದೆ” ಎಂದರು.
ಕರ್ನಾಟಕ ರಾಜ್ಯ ಮಹಿಳಾ ವಿವಿ ಸಿಂಡಿಕೇಟ್ ಸದಸ್ಯ ಪ್ರೊ.ಎಸ್ ಜೆ ಮಾಡ್ಯಾಳ ಅವರು ವೇದಿಕೆಯಲ್ಲಿದ್ದರು. ಮೊದಲ ಗೋಷ್ಠಿಯಲ್ಲಿ ಕುವೆಂಪು ಅವರ ಕುವೆಂಪು ಅವರ ನಾಟಕಗಳು ಕುರಿತು ಸಂಶೋಧಕ ಡಾ. ಎಸ್ ಕೆ ಕೊಪ್ಪಾ ಉಪನ್ಯಾಸ ನೀಡಿದರು. 2ನೇ ಗೋಷ್ಠಿಯಲ್ಲಿ ಕುವೆಂಪು ಅವರ ವೈಚಾರಿಕ ಬರಹಗಳ ಕುರಿತು ಶಹಾಪುರದ ವಿಮರ್ಶಕ ಸಿ ಎಸ್ ಬೀಮರಾಯ ಉಪನ್ಯಾಸ ನೀಡಿ ಕುವೆಂಪು ಅವರು ವೈಚಾರಿಕ ಪ್ರಜ್ಞೆಯನ್ನು ತಮ್ಮ ಬರಹ ಮತ್ತು ಮಾತು, ನಡೆಗಳ ಮೂಲಕ ನೀಡಿದ್ದಾರೆಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಲೋಕಾಪುರ-ಸವದತ್ತಿ-ಧಾರವಾಡ ರೈಲು ಮಾರ್ಗಕ್ಕೆ ಸಚಿವರ ಜೊತೆ ಚರ್ಚೆ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 25ಕ್ಕೂ ಅಧಿಕ ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಕಮ್ಮಟದ ಶಿಬಿರಾರ್ಥಿಗಳಾಗಿ ಭಾಗವಹಿಸಿ ಕುವೆಂಪು ಓದು ಮತ್ತು ವಿಶ್ಲೇಷಣೆ ಮಾಡಿದರು.
ಪ್ರೊ. ಕಿರಣಕುಮಾರ ರೇವಣಕರ, ಡಾ.ತ್ರಿವೇಣಿ ಬನಸೋಡೆ, ಪ್ರೊ. ಸಂತೋಷ ಗೊರನಾಳ, ಪ್ರೊ.ರವಿಕುಮಾರ ಅರಳಿ ಸೇರಿದಂತೆ ಇತರರು ಇದ್ದರು.