ನಿತೇಶ್ ಪಾಂಡೆಗೆ ಹೃದಯಾಘಾತವಾಗಿರಬಹುದು ಎಂದ ಪೊಲೀಸರು
ನಟನಿಗೆ ಹೃದಯ ಸಂಬಂಧಿ ಸಮಸ್ಯೆ ಇರಲಿಲ್ಲವೆಂದ ಸಂಬಂಧಿಗಳು
ಬಾಲಿವುಡ್ನ ಹಿರಿಯ ನಟ ನಿತೇಶ್ ಪಾಂಡೆ ಬುಧವಾರ ಖಾಸಗಿ ಹೋಟೆಲ್ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 50 ವರ್ಷದ ನಿತೇಶ್ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಿತೇಶ್ ಮಹಾರಾಷ್ಟ್ರದ ನಾಸಿಕ ಜಿಲ್ಲೆಯ ಇಗಟ್ಪುರಿಯಲ್ಲಿ ಸಿನಿಮಾ ಶೂಟಿಂಗ್ ಸಿನಿಮಾ ತೊಡಗಿಕೊಂಡಿದ್ದರು. ಶೂಟಿಂಗ್ಗಾಗಿ ಖಾಸಗಿ ಹೋಟೆಲ್ನಲ್ಲಿ ತಂಗಿದ್ದ ಅವರು ಬುಧವಾರ ಬೆಳಗ್ಗೆ ಅದೇ ಹೋಟೆಲ್ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಹೃದಯಾಘಾತದಿಂದ ನಿತೇಶ್ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಿತೇಶ್ ವಾಸ್ತವ್ಯ ಹೂಡಿದ್ದ ಹೋಟೆಲ್ನ ಸಿಬ್ಬಂದಿ ಮತ್ತು ಚಿತ್ರತಂಡದವರ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪರೀಕ್ಷೆಯ ವರದಿ ಬಂದ ನಂತರವೇ ನಟನ ಸಾವಿಗೆ ಕಾರಣ ಏನೆಂಬುದು ಬಹಿರಂಗವಾಗಲಿದೆ.
ನಿತೇಶ್ ಅವರ ಸಾವಿನ ಸುದ್ದಿಯನ್ನು ಖಚಿತಪಡಿಸಿರುವ ಅವರ ಸಂಬಂಧಿ ಸಿದ್ಧಾರ್ಥ್ ನಾಗರ್, “ನಿತೇಶ್ ನಿಧನದ ಸುದ್ದಿಯಿಂದ ನನ್ನ ಸಹೋದರಿ ಅರ್ಪಿತಾ (ನಿತೇಶ್ ಪತ್ನಿ) ಅಘಾತಕ್ಕೊಳಗಾಗಿದ್ದಾರೆ. ಅವರಿಗೆ ಹೃದಯ ಸಂಬಂಧಿ ಸಮಸ್ಯೆಗಳು ಇರಲಿಲ್ಲ” ಎಂದಿದ್ದಾರೆ. ಬಾಲಿವುಡ್ನ ಹಲವು ನಟ, ನಟಿಯರು ಕೂಡ ಹಿರಿಯ ನಟನ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಹಿಳಾ ಕುಸ್ತಿಪಟುಗಳು ರಸ್ತೆಗಿಳಿಯಲು ಮೋದಿ ಕಾರಣ : ಕಿಶೋರ್ ಕುಮಾರ್
ರಂಗಭೂಮಿ ಹಿನ್ನೆಲೆಯ ನಿತೇಶ್, 1995ರಲ್ಲಿ ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ತೇಜಸ್ನಲ್ಲಿ ಗೂಢಾಚಾರಿಯ ಪಾತ್ರದಲ್ಲಿ ನಟಿಸುವ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದರು. ಆಮಿರ್ ಖಾನ್ ನಟನೆಯ ʼಬಾಜಿʼ, ʼಖೋಸ್ಲಾ ಕಾ ಗೋಸ್ಲಾʼ, ʼಓಂ ಶಾಂತಿ ಓಂʼ, ದಬಾಂಗ್-2, ʼಬದಾಯಿ ದೋʼ ಸೇರಿಂದತೆ ಹಲವು ಚಿತ್ರಗಳು ಮತ್ತು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದ್ದರು.